ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನಮ್ಮದು ಪ್ರಜಾಸತ್ತಾತ್ಮಕವಾಗಿ ಮುಂದುವರಿದ ದೇಶ'

Last Updated 2 ಫೆಬ್ರುವರಿ 2018, 12:20 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತ ಪ್ರಜಾಸತ್ತಾತ್ಮಕವಾಗಿ ಮುಂದುವರಿದ ದೇಶ ಎನಿಸಿಕೊಳ್ಳಲು ಚುನಾವಣಾ ಆಯೋಗ ಮಹತ್ವದ ಪಾತ್ರ ವಹಿಸಿದೆ’ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಅಭಿಪ್ರಾಯಪಟ್ಟರು.

ಪೆಂಗ್ವಿನ್‌ ಬುಕ್ಸ್‌ ಮತ್ತು ಬುಕ್‌ವರ್ಮ್‌ ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಇಸ್ರೇಲ್‌ ಲೇಖಕಿ ಆರ್ನಿತ್‌ ಶಾನಿ ಅವರ ‘ಹೌ ಇಂಡಿಯಾ ಬಿಕಮ್‌ ಡೆಮಾಕ್ರಟಿಕ್‌’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

‘ವಿಶ್ವದಲ್ಲಿ ವಿಭಜನೆಯಾದ ಯಾವುದೇ ದೇಶದಲ್ಲಿ ಭಾರತದಂತೆ ಪಾರದರ್ಶಕವಾಗಿ ಮತ್ತು ಅತ್ಯಂತ ವ್ಯವಸ್ಥಿತವಾಗಿ ಚುನಾವಣೆಗಳು ನಡೆಯುವ ನಿದರ್ಶನವಿಲ್ಲ. ಪ್ರತಿ ಬಾರಿ ಚುನಾವಣೆ ನಡೆದಾಗಲೂ ಅದು ಚರಿತ್ರಾರ್ಹ ದಾಖಲೆಯಾಗುತ್ತದೆ. ಇಲ್ಲಿ ಯಾವುದೇ ರಾಜಕೀಯ ನೇತಾರನಿಂದ ಚುನಾವಣೆ ನಿಗದಿಯಾಗುವುದಿಲ್ಲ. ಚುನಾವಣೆ ನಿಗದಿಪಡಿಸುವ ಮತ್ತು ನಡೆಸುವ ಅಧಿಕಾರ, ಸ್ವಾತಂತ್ರ್ಯ ಆಯೋಗಕ್ಕೆ ಮಾತ್ರ ಇದೆ. ಅಂತಹ ಸ್ವಾಯತ್ತವನ್ನು ಆಯೋಗಕ್ಕೆ ಸಂವಿಧಾನವೇ ನೀಡಿ ಪೋಷಿಸಿ ಕೊಂಡುಬಂದಿದೆ’ ಎಂದರು.

‘ಇತಿಹಾಸಕಾರರು ಏನಾದರೊಂದು ಅಮೂಲ್ಯವಾದುದನ್ನು ಹುಡುಕುತ್ತಲೇ ಇರುತ್ತಾರೆ ಎನ್ನುವುದಕ್ಕೆ ಶಾನಿ ಅವರ ಕೃತಿ ಸಾಕ್ಷಿಯಾಗಿದೆ. ದೇಶವು ಪ್ರಜಾಸತ್ತಾತ್ಮಕವಾಗಿ ಬೆಳೆದು ಬಂದ ಬಗೆ, ವಿಶ್ವದಲ್ಲೇ ಅತ್ಯಂತ ಪರಿಣಾಮಕಾರಿ ಚುನಾವಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ನಡೆಸುತ್ತಿರುವ ಕಥನವನ್ನು ಕೃತಿ ತೆರೆದಿಡುತ್ತದೆ. ಲೇಖಕಿ ಇಸ್ರೇಲಿನಿಂದ ಬಂದು ಚುನಾವಣಾ ಆಯೋಗದ ದೆಹಲಿ ಕಚೇರಿಯಲ್ಲಿ ದಾಖಲೆಗಳ ಅಧ್ಯಯನ ಮಾಡಿ, ಸಂಶೋಧನಾ ಕೃತಿ ಬರೆದಿರುವುದು ಶ್ಲಾಘನೀಯ’ ಎಂದರು.

ಇಸ್ರೇಲ್‌ನ ಹೈಫಾ ವಿಶ್ವವಿದ್ಯಾಲಯದ ಏಷ್ಯಾ ಅಧ್ಯಯನ ವಿಭಾಗದ ಹಿರಿಯ ಉಪನ್ಯಾಸಕಿ ಹಾಗೂ ಲೇಖಕಿ ಆರ್ನಿತ್‌ಶಾನಿ ಮಾತನಾಡಿ, ‘ಭಾರತದಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಮತದಾನದಲ್ಲಿ ಪಾಲ್ಗೊಂಡು ಮಹತ್ವದ ಬದಲಾವಣೆ ತಂದಿದ್ದಾರೆ. ಇಲ್ಲಿ ಅತ್ಯಂತ ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆಯೂ ಇದೆ. ಭಾರತ ಹೊರತುಪಡಿಸಿದರೆ, ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಯಾವುದೇ ದೇಶ ಇಷ್ಟೊಂದು ಪ್ರಜಾಸತ್ತಾತ್ಮಕವಾಗಿ ಬೆಳೆಯಲು ಸಾಧ್ಯವಾಗಿಲ್ಲ’ ಎಂದರು.
***
ಶೀರ್ಷಿಕೆ: ಹೌ ಇಂಡಿಯಾ ಬಿಕಮ್‌ ಡೆಮಾಕ್ರಟಿಕ್‌
ಲೇಖಕರು: ಆರ್ನಿತ್‌ ಶಾನಿ
ಪ್ರಕಾಶಕರು: ಪೆಂಗ್ವಿನ್‌ಬುಕ್ಸ್‌
ಬೆಲೆ: ₹ 599
ಪುಟ: 284
ಸಂಪರ್ಕ: ದಿ ಬುಕ್‌ವರ್ಮ್‌, ನಂ.1, ಚರ್ಚ್‌ ಸ್ಟ್ರೀಟ್‌, ಸ್ಟಾರ್‌ಬಕ್ಸ್‌ ಎದುರು, ಬೆಂಗಳೂರು –560001.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT