ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಕ್ಕೆ ಯೋಗ್ಯವಲ್ಲದಂತಾದ ಕೆಳಸೇತುವೆ

ಸರ್ವಿಸ್ ರಸ್ತೆಯ ಪ್ರಯಾಣಿಕರ ಗೋಳು
Last Updated 21 ಜೂನ್ 2021, 13:54 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಚತುಷ್ಪಥ ಹೆದ್ದಾರಿಗುಂಟ ಅಲ್ಲಲ್ಲಿ ನಿರ್ಮಾಣ ಮಾಡಿರುವ ಕೆಳಸೇತುವೆಗಳ ಸಂಚಾರ ಮಳೆಗಾಲದಲ್ಲಿ ದುಸ್ತರವಾಗಿದ್ದು, ಜನರು ಪರದಾಡುವಂತಾಗಿದೆ.

‘ಜನ–ಜಾನುವಾರು ಹಾಗೂ ಲಘು ವಾಹನಗಳು ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಇವುಗಳ ನಿರ್ಮಾಣ ಮಾಡಲಾಗಿದೆ. ಮೊಣಕಾಲು ಉದ್ದದ ನೀರು ಮಳೆಗಾಲದಲ್ಲಿ ನಿಂತಿರುತ್ತದೆ. ಇಲ್ಲಿ ಸಂಚರಿಸುವುದು ಹೇಗೆ?’ ಎನ್ನುವುದು ಸಾರ್ವಜನಿಕರ ಅಳಲು ಮತ್ತು ಪ್ರಶ್ನೆಯಾಗಿದೆ.

‘ಎಲ್ಲೋ ಒಂದು ಸೇತುವೆಯಲ್ಲಿ ನೀರು ನಿಂತಿದೆ ಎಂದರೆ ಪ್ರಯಾಣಿಕರು ಅಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಬಹುತೇಕ ಸೇತುವೆಯೊಳಗೆ ನೀರು ಇರುತ್ತದೆ. ನಿತ್ಯ ಜಮೀನಗಳಿಗೆ ಹೋಗಬೇಕಾಗುತ್ತದೆ. ವೃದ್ಧರು, ಮಕ್ಕಳು ಹೇಗೆ ಸಂಚರಿಸಬೇಕು’ ಎಂದು ನಿಂಗಪ್ಪ ನಿಂಗಣ್ಣವರ ಕೇಳಿದರು.

‘ಬೆಳಗಾವಿ ಹದ್ದಿನಿಂದ ಎಂ.ಕೆ. ಹುಬ್ಬಳ್ಳಿಗೆ ಹೋಗುವ ಮಾರ್ಗದಲ್ಲಿ ಸರ್ವಿಸ್ ರಸ್ತೆಗೆ ಹೊಂದಿಕೊಂಡು ಇಂತಹ ಅವೈಜ್ಞಾನಿಕ ಸೇತುವೆ ನಿರ್ಮಾಣ ಮಾಡಿ ಕೈತೊಳೆದುಕೊಂಡಿದ್ದಾರೆ. ಮಳೆಗಾಲದಲ್ಲಿ ಬಿದ್ದ ನೀರು ಹೇಗೆ ಹರಿಯಬೇಕು ಎಂಬ ಪ್ರಜ್ಞೆ ಇಲ್ಲದವರಂತೆ ನಿರ್ಮಾಣ ಮಾಡಲಾಗಿದೆ. ಸರ್ವಿಸ್ ರಸ್ತೆ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ಅಸಡ್ಡೆ ಭಾವನೆ ಏಕೆ’ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

‘ಕೆಲವು ಗ್ರಾಮಗಳ ಲಘು ವಾಹನ ಚಾಲಕರು ಇಂತಹ ಕೆಳ ಸೇತುವೆ ಒಳಗೆ ದಾಟಿಕೊಂಡು ಹೆದ್ದಾರಿ ಸೇರಬೇಕು. ಟೋಲ್ ಗೇಟ್ ನಲ್ಲಿ ಈ ವಾಹನಗಳಿಗೂ ಶುಲ್ಕ ಪಡೆಯುತ್ತಾರೆ. ಸೌಕರ್ಯ ಮಾತ್ರ ಇವರಿಂದ ಕೇಳಲೇ ಬೇಡಿ’ ಎಂದು ಮಹಮ್ಮದ ಹನೀಫ್ ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ವಿಸ್ ರಸ್ತೆಯ ವ್ಯಥೆ ಈ ರೀತಿಯಾಗಿದ್ದರೆ, ಎಂ.ಕೆ. ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಬಳಿ ಸರ್ವಿಸ್ ರಸ್ತೆಯಲ್ಲೇ ನೀರು ನಿಲ್ಲುತ್ತದೆ. ಹಿಂದೊಮ್ಮೆ ಈ ರಸ್ತೆ ಅರಿಯದೇ ಪ್ರವಾಸಿ ಬಸ್ ಹೋಗಿ ಮಧ್ಯೆ ಸಿಲುಕಿತ್ತು. ಹೆಚ್ಚಿನ ಅನಾಹುತ ಸಂಭವಿಸಿರಲಿಲ್ಲ’ ಎನ್ನುತ್ತಾರೆ ದಾಸ್ತಿಕೊಪ್ಪ ಗ್ರಾಮದ ಶಿವಕುಮಾರ ದೇವರಕೊಂಡಮಠ.

‘ಸಂಚಾರ ಅಯೋಗ್ಯವಾಗಿರುವ ಅನೇಕ ಇಂಥ ಕೆಳಸೇತುವೆ ದುರಸ್ತಿಗೊಳಿಸಬೇಕು. ಭೀತಿಯಿಲ್ಲದೆ ಜನಸಂಚರಿಸುವಂತೆ ಮಾಡಬೇಕು’ ಎನ್ನುವುದು ಜನರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT