ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಖಂಡ ಭಾರತದ ಕನಸು ಕಂಡಿದ್ದ ಶಿವಾಜಿ: ಮೆಹಬೂಬಿ

Published 20 ಫೆಬ್ರುವರಿ 2024, 4:27 IST
Last Updated 20 ಫೆಬ್ರುವರಿ 2024, 4:27 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ಛತ್ರಪತಿ ಶಿವಾಜಿ ಮಹಾರಾಜರು ಧೀರ ಮತ್ತು ಪರಾಕ್ರಮಿ ಆಗಿದ್ದರು. ಅವರು ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಭಾರತವೇ ತನ್ನ ದೇಶ, ಭಾರತೀಯರೆಲ್ಲರೂ ತನ್ನವರು ಎಂಬ ಭಾವ ಹೊಂದಿದ್ದರು’ ಎಂದು ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮೆಹಬೂಬಿ ಹೇಳಿದರು.

ಪಟ್ಟಣದ ಪ್ರಭುವಾಡಿ ಬಡಾವಣೆಯ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಬಳಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶಿವಾಜಿ ಮಹಾರಾಜ ಹಾಗೂ ರಾಜಮಾತಾ ಜೀಜಾವೋ ಅವರ ಆದರ್ಶಗಳನ್ನು ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆಯರು ಅರಿಯಬೇಕು’ ಎಂದರು.

ನಿವೃತ್ತ ಎಂಜಿನಿಯರ್‌ ಬಿ.ಡಿ.ನಸಲಾಪುರೆ ಮಾತನಾಡಿ, ‘ಅಖಂಡ ಹಿಂದೂಸ್ಥಾನದ ಕನಸನ್ನು ನನಸು ಮಾಡಿದವರು ಛತ್ರಪತಿ ಶಿವಾಜಿ ಮಹಾರಾಜ’ ಎಂದರು.

ಮರಾಠಾ ಸಮಾಜದ ಮುಖಂಡ ಬಿ.ಆರ್. ಯಾದವ ಮಾತನಾಡಿ, ‘ಶಿವಾಜಿ ಮಹಾರಾಜರು ಪ್ರಥಮ ಬಾರಿಗೆ ರೈತರಿಂದ ತೆರಿಗೆ ಸಂಗ್ರಹಿಸಿದರು. ಭಾರತೀಯ ನೌಕಾಪಡೆಯನ್ನು ಪ್ರಾರಂಭಿಸಿದ್ದರಿಂದ ಅವರನ್ನು ಭಾರತೀಯ ನೌಕಾಪಡೆಯ ಸಂಸ್ಥಾಪಕ ಎಂದು ಕರೆಯಲಾಗುತ್ತದೆ. ಅವರ ಸೈನ್ಯದಲ್ಲಿ ಮುಸ್ಲಿಂ ಸೈನಿಕರಿದ್ದರು. ಅವರು ಮುಸ್ಲಿಂ ವಿರೋಧಿ ಅಲ್ಲ. ಆದರೆ ಅನ್ಯಾಯದ ವಿರುದ್ಧ ಹೋರಾಡಿದವರು. ದೇಶಕ್ಕಾಗಿ ಮತ್ತು ಸಮಾಜಕ್ಕಾಗಿ ದುಡಿದ ಮಹಾನ್ ವ್ಯಕ್ತಿ’ ಎಂದು ಹೇಳಿದರು.

ಸಿಪಿಐ ನಾಗೇಶ ಕಾಡದೇವರಮಠ ಮಾತನಾಡಿದರು. ಇದಕ್ಕೂ ಮುನ್ನ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಮಹಿಳೆಯರು ಬಾಲ ಶಿವಾಜಿಯ ನಾಮಕರಣ, ತೊಟ್ಟಿಲು ಶಾಸ್ತ್ರ ಮಾಡಿದರು.

ಸಂಜೆ ವಿವಿಧ ವಾದ್ಯ ಮೇಳದೊಂದಿಗೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ತಹಶೀಲ್ದಾರ್‌ ಚಿದಂಬರ ಕುಲಕರ್ಣಿ, ಸಿಪಿಐ ನಾಗೇಶ ಕಾಡದೇವರಮಠ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ, ಪುರಸಭೆ ಸದಸ್ಯ ರಾಮಾ ಮಾನೆ, ಅನಿಲ ಮಾನೆ, ಸಮಾಜದ ಮುಖಂಡರಾದ ಟಿ.ಎಸ್.ಮೋರೆ, ಜ್ಯೋತಿಬಾ ಖಾಮಕರ, ಜ್ಯೋತಿಬಾ ಠಾಣೇಕರ, ಚಂದ್ರಕಾಂತ ಯಾದವ, ಬಾಲು ಮೋಹಿತೆ ಭಾಗವಹಿಸಿದ್ದರು.

ಚಿಕ್ಕೋಡಿಯಲ್ಲಿ ಸೋಮವಾರ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಡೆದ ತೊಟ್ಟಿಲು ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಮೆಹಬೂಬಿ ಪೂಜೆ ನೆರವೇರಿಸಿದರು
ಚಿಕ್ಕೋಡಿಯಲ್ಲಿ ಸೋಮವಾರ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಡೆದ ತೊಟ್ಟಿಲು ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಮೆಹಬೂಬಿ ಪೂಜೆ ನೆರವೇರಿಸಿದರು

ನಗರದಲ್ಲೂ ಸಂಭ್ರಮದ ಜಯಂತಿ

ಹಿಂದವೀ ಸ್ವರಾಜ್ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಸೋಮವಾರ ಶಿವಾಜಿ ಉದ್ಯಾನಕ್ಕೆ ತೆರಳಿ ಪ್ರತಿಮೆಗೆ ಪೂಜೆ ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮೇಯರ್‌ ಸವಿತಾ ಕಾಂಬಳೆ ಉಪಮೇಯರ್ ಆನಂದ ಚವ್ಹಾಣ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಪಾಲಿಕೆಯ ಸದಸ್ಯರು ಅಧಿಕಾರಿಗಳು ಹಾಗೂ ಶಿವಾಜಿ ಯುವಕ ಮಂಡಳದ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT