ಶನಿವಾರ, ಫೆಬ್ರವರಿ 27, 2021
20 °C
ಶ್ರೀರಾಮ ಸೇನೆ ಕಾರ್ಯಕರ್ತರಿಂದ ಮಳೆಯಲ್ಲೂ ‍ಪ್ರತಿಭಟನೆ

ಶಿವು ಉ‍ಪ್ಪಾರ ಪ್ರಕರಣ: ಸಿಬಿಐಗೆ ವಹಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಅನುಮಾನಾಸ್ಪದವಾಗಿ ಸಾವಿಗೀಡಾದ ಗೋ‍ಪ್ರೇಮಿ ಶಿವು ಉಪ್ಪಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಆಗ್ರಹಿಸಿ ಶ್ರೀರಾಮ ಸೇನಾ ಕಾರ್ಯಕರ್ತರು ಹಾಗೂ ವಿವಿಧ ಮಠಾಧೀಶರು ಇಲ್ಲಿನ ಸಿಪಿಇಡಿ ಮೈದಾನದಲ್ಲಿ ಸೋಮವಾರ ಜಿಟಿಜಿಟಿ ಮಳೆಯಲ್ಲೇ ಪ್ರತಿಭಟನೆ ನಡೆಸಿದರು.‌

‘ಗೋಕಾಕ ತಾಲ್ಲೂಕು ಅಂಕಲಗಿಯ, ಬೆಳಗಾವಿಯಲ್ಲಿ ಐಟಿಐ ಓದುತ್ತಿದ್ದ ಶಿವು ಹಿರೇಬಾಗೇವಾಡಿ ಎಪಿಎಂಸಿ ಸಾರ್ವಜನಿಕ ಶೌಚಾಲಯದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಯಲ್ಲ. ಗೋವುಗಳನ್ನು ಅಕ್ರಮವಾಗಿ ಸಾಗಿಸುವವರಿಂದ ಅವರಿಗೆ ಜೀವ ಬೆದರಿಕೆ ಇದ್ದ ಬಗ್ಗೆ ಹಲವು ವಿಡಿಯೊ, ಆಡಿಯೊಗಳ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಆದರೂ ಪೊಲೀಸರು ಆತ್ಮಹತ್ಯೆ ಎಂದು ಹೇಳಿ ಪ್ರಕರಣವನ್ನು ಮುಚ್ಚಿ ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.

‘ಶಿವು ಸಾವಿಗೆ ಮುನ್ನ ಮಾಡಿದ್ದ ವಿಡಿಯೊದಲ್ಲಿ ಉಲ್ಲೇಖಿಸಿದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಬೇಕು. ಫೋನ್‌ ಕರೆಗಳನ್ನು ಸಂಪೂರ್ಣವಾಗಿ ತನಿಖೆ ನಡೆಸಬೇಕು. ಮೃತರ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ನೀಡಬೇಕು. ಅಕ್ರಮ ಗೋಸಾಗಣೆ ತಡೆಯಬೇಕು. ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು. ಗೋಹತ್ಯೆ ನಿಷೇಧಿಸಬೇಕು. ಗೋಮಾಂಸ ರಫ್ತು ಬಂದ್ ಮಾಡಬೇಕು’ ಎಂದು ಆಗ್ರಹಿಸಿದರು.

ಗೃಹಸಚಿವರ ವಿರುದ್ಧ ಆಕ್ರೋಶ:

ಕಲಬುರ್ಗಿ ಜಿಲ್ಲೆ ಅಂದೋಲಾ ಕರಣೇಶ್ವರಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘ಪೊಲೀಸರು ಐಪಿಎಸ್ ಬದಲಿಗೆ ಇಂಡಿಯನ್‌ ಪೊಲಿಟಿಕಲ್ ಸರ್ವಿಸ್ ಮಾಡುತ್ತಿದ್ದಾರೆ. ಹೀಗಾಗಿ, ಹಿಂದೂ ಪರ ಕಾರ್ಯಕರ್ತರು ತೊಂದರೆ ಅನುಭವಿಸುವಂತಾಗಿದೆ. ಶಿವು ಉಪ್ಪಾರ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇ ಇರಲಿಲ್ಲ. ಪೊಲೀಸರು ಎಲ್ಲರ ದಾರಿ ತಪ್ಪಿಸಿ, ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಾರೆ. ಈ ವಿಷಯದಲ್ಲಿ ಗೃಹ ಸಚಿವರು ಗಂಭೀರವಾಗಿ ಕ್ರಮ ಕೈಗೊಂಡಿಲ್ಲ. ಹುಚ್ಚ ವೆಂಕಟ್‌ ರೀತಿ ಆಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಹಿಂದೂಗಳ ಪರ ಕಾರ್ಯನಿರ್ವಹಿಸದೇ ಇದ್ದಿದ್ದಕ್ಕೆ ಹಾಗೂ ಶಿವು ಸಾವಿನ ಪ್ರಕರಣ ಗಂಭೀರವಾಗಿ ಪರಿಗಣಿಸದಿರುವುದಕ್ಕೆ ರಾಜ್ಯ ಸರ್ಕಾರ ಅಲುಗಾಡುತ್ತಿದೆ. ಹಿಂದೂಗಳ ಹಿತ ಕಡೆಗಣಿಸುವವರು, ಗೋರಕ್ಷಕರ ಪರ ನಿಲ್ಲದವರು ನೆಗೆದು ಬೀಳುತ್ತಾರೆ’ ಎಂದರು.

ಮುಸ್ಲಿಮರ ಮತಕ್ಕಾಗಿ:

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿ, ‘ಶಿವು ಗೋರಕ್ಷಕನಾಗಿದ್ದ. ಆತನ ಹತ್ಯೆಯಾಗಿ ಇಷ್ಟು ದಿನಗಳಾದರೂ ಪೊಲೀಸರು ತನಿಖೆ ಪೂರ್ಣಗೊಳಿಸಿಲ್ಲ. ಅವರು ವರದಿ ಬಹಿರಂಗಪಡಿಸುವವರೆಗೂ ಹೋರಾಟ ಮುಂದುವರಿಸುತ್ತೇವೆ’ ಎಂದು ತಿಳಿಸಿದರು.

‘ದೇಶಭಕ್ತಿ, ಧಾರ್ಮಿಕ ಕಾರ್ಯಕ್ರಮಕ್ಕೆ ತಕರಾರು ಮಾಡುವ ಅಧಿಕಾರಿಗಳು, ಪೊಲೀಸರನ್ನು ಪ್ರಧಾನಿ ನರೇಂದ್ರ ಮೋದಿ ಕಿತ್ತು ಬಿಸಾಡಬೇಕು. ಗೋಮಾತೆ ರಕ್ಷಿಸಿಕೊಳ್ಳಲಾರದಂತಹ ಸ್ಥಿತಿ ದೇಶದಲ್ಲಿದೆ. ಈ‌ ವಿಷಯದಲ್ಲೂ ವೋಟಿನ ಲೆಕ್ಕಾಚಾರ ಮಾಡಲಾಗುತ್ತಿದೆ. ಗೋಹತ್ಯೆ ನಿಷೇಧಿಸಲು ಹಾಗೂ ಗೋಮಾಂಸ ರಫ್ತು ಮಾಡುವುದನ್ನು ನಿಲ್ಲಿಸುವುದಕ್ಕೆ ಆಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮುಸ್ಲಿಮರ ಮತ ಮಾಂಸದ ತುಂಡಿನಂತಾಗಿದೆ. ಅದಕ್ಕಾಗಿ ಎಲ್ಲ ಪಕ್ಷದವರೂ ನಾಯಿಗಳಂತೆ ಬೊಗಳುತ್ತಿವೆ; ಮುಂದಾಗುತ್ತಿವೆ. ಶಿವು ಪ್ರಕರಣದಲ್ಲಿ ಇಲ್ಲಿನ ಪೊಲೀಸ್ ಇಲಾಖೆಯವರು ಜನರ ದಾರಿ‌ ತಪ್ಪಿಸುತ್ತಿದ್ದಾರೆ. ಎಂ.ಬಿ. ಪಾಟೀಲ ಅಯೋಗ್ಯ ಗೃಹ ಮಂತ್ರಿ’ ಎಂದು ಟೀಕಿಸಿದರು.

ಸದಲಗಾದ ಧರೇಶ್ವರ ದೇವಸ್ಥಾನದ ಧರಿಕಣ್ಣ ಅಜ್ಜ ಅವರು ಮುತಾಲಿಕ್‌ ಅವರಿಗೆ 11 ತೊಲೆ ಬೆಳ್ಳಿ ಕಡಗ ತೊಡಿಸಿದ್ದು ವಿಶೇಷವಾಗಿತ್ತು.

ಬೆಂಗಳೂರಿನ ಋಷಿಕುಮಾರ ಸ್ವಾಮೀಜಿ, ಹಾವೇರಿಯ ಪ್ರಣವಾನಂದ ಸ್ವಾಮೀಜಿ, ಚಿತ್ರದುರ್ಗದ ಸೇವಾಲಾಲ ಸ್ವಾಮೀಜಿ, ಸಂಘಟನೆಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ರಾಜ್ಯ ಸಂಪರ್ಕ ಪ್ರಮುಖ ಪರಶುರಾಮ ನಡಮನಿ, ಪ್ರಧಾನ ಕಾರ್ಯದರ್ಶಿ ಮಹಾಲಿಂಗಣ್ಣ ಗುಂಜಗಾವಿ, ಜಿಲ್ಲಾ ಘಟಕದ ಅಧ್ಯಕ್ಷ ವಿಕ್ರಮ ಬನಗೆ, ಶಿವ ಪೋಷಕರು ಭಾಗವಹಿಸಿದ್ದರು. ನಂತರ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು