ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಟಿಸಿಗಳ ಬದಲಿ ವ್ಯವಸ್ಥೆ ವಿಳಂಬ; ನೀರಿದ್ದರೂ ಒಣಗುತ್ತಿದೆ ಬೆಳೆ!

ಅಕ್ಷರ ಗಾತ್ರ

ಚಿಕ್ಕೋಡಿ: ಹೋದ ವರ್ಷ ನೀರಿಲ್ಲದೆ ಕೃಷಿಕರು ಬೆಳೆ ಕಳೆದುಕೊಂಡು ಕೈ ಸುಟ್ಟುಕೊಂಡಿದ್ದರು. ಪ್ರಸಕ್ತ ವರ್ಷ ನೀರಿನ ಲಭ್ಯತೆ ಇದ್ದರೂ ಸುಟ್ಟು ಹೋದ ವಿದ್ಯುತ್ ಪರಿವರ್ತಕಗಳಿಗೆ ಹೆಸ್ಕಾಂನಿಂದ ಸಕಾಲದಲ್ಲಿ ಬದಲಿ ವ್ಯವಸ್ಥೆ ಆಗದೆ ಇರುವುದರಿಂದ ಬೆಳೆ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.

ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತಾಲ್ಲೂಕಿನ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯಲ್ಲಿ ಕೃಷಿಕರು ಪಡುತ್ತಿರುವ ಕಷ್ಟದ ಪರಿ ಇದು.

ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾದ ಪರಿಣಾಮ ಹಿಂಗಾರು ಹಂಗಾಮಿನಲ್ಲೂ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯ ಕೃಷಿಕರು ಸಾಂಪ್ರದಾಯಿಕ ಶೇಂಗಾ, ಗೋವಿನಜೋಳ, ಹತ್ತಿ, ಮೊದಲಾದ ಅಲ್ಪಾವಧಿ ಬೆಳೆಗಳ ಬದಲಿಗೆ ಕಬ್ಬು ಮೊದಲಾದ ವಾಣಿಜ್ಯ ಬೆಳೆಗಳನ್ನು ಬೆಳೆದಿದ್ದಾರೆ. ಇದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ, ಸುಟ್ಟು ಹೋಗುತ್ತಿರುವ ವಿದ್ಯುತ್ ಪರಿವರ್ತಕಗಳನ್ನು ಹೆಸ್ಕಾಂ ಸಕಾಲದಲ್ಲಿ ಬದಲಿ ವ್ಯವಸ್ಥೆ ಮಾಡದೆ ಇರುವುದರಿಂದ, ಬೆಳೆದು ನಿಂತಿರುವ ಬೆಳಗಳು ಕಮರಿ ಹೋಗುತ್ತಿವೆ ಎಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ.

‘ಸುಟ್ಟ ವಿದ್ಯುತ್ ಪರಿವರ್ತಕವನ್ನು 74 ಗಂಟೆಗಳಲ್ಲಿ ಬದಲಿಸಿಕೊಡಬೇಕು ಎಂಬುದು ಸರ್ಕಾರದ ನಿಯಮವಾಗಿದೆ. ಆದರೆ, ತಾಲ್ಲೂಕಿನ ಕುಂಗಟೋಳಿ-ಬೆಣ್ಣಿಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಹಂಜಿ ತೋಟ ಮತ್ತು ಪಾಟೀಲ ತೋಟದಲ್ಲಿ ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗಿ 10ರಿಂದ 15 ದಿನಗಳಾದರೂ ಬದಲಿ ವ್ಯವಸ್ಥೆ ಮಾಡಿಲ್ಲ. ಕೃಷಿಕರ ಕಷ್ಟಕ್ಕೆ ಹೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ರೈತರಿಂದ ಅಕ್ರಮವಾಗಿ ಹಣ ಪಡೆದಿರುವುದೂ ಇದೆ. ಹೆಸ್ಕಾಂ ಹಿರಿಯ ಅಧಿಕಾರಿಗಳೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಇದರಿಂದ ರೈತರು ರೋಸಿ ಹೋಗಿದ್ದಾರೆ’ ಎಂದು ಬಂಬಲವಾಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದುಂಡಪ್ಪ ಬೆಂಡವಾಡೆ ದೂರಿದರು.

‘ಹೆಸ್ಕಾಂ ಅಧಿಕಾರಿಗಳು ಬದಲಿ ವಿದ್ಯುತ್ ಪರಿವರ್ತಕಗಳ ವಿತರಣೆಯಲ್ಲಿ ತಾರತಮ್ಯ ಎಸಗುತ್ತಿದ್ದಾರೆ. ಇದರ ಹಿಂದೆ ಭ್ರಷ್ಟಾಚಾರದ ಶಂಕೆ ವ್ಯಕ್ತವಾಗುತ್ತಿದೆ. ಹಣ ನೀಡುವವರಿಗೆ ತುರ್ತಾಗಿ ಬದಲಿ ಟಿಸಿಗಳ ವ್ಯವಸ್ಥೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಹೆಸ್ಕಾಂ ಚಿಕ್ಕೋಡಿ ಎಇಇ ರಮೇಶ ಶಿಡ್ಲ್ಯಾಳೆ, ‘ಕೋವಿಡ್–19 ಲಾಕ್‌ಡೌನ್‌ ಪರಿಣಾಮ ಕಾರ್ಮಿಕರ ಕೊರತೆಯಿಂದಾಗಿ ವಿದ್ಯುತ್ ಪರಿವರ್ತಕಗಳ ದುರಸ್ತಿ ಕಾರ್ಯ ವಿಳಂಬವಾಗಿದೆ. 2-3 ದಿನಗಳಲ್ಲಿ ಶೇ 25ರಷ್ಟು ವಿದ್ಯುತ್ ಪರಿವರ್ತಕಗಳ ಬದಲಿ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT