ಬುಧವಾರ, ಅಕ್ಟೋಬರ್ 16, 2019
27 °C

ಸ್ಮಾರ್ಟ್ ಸಿಟಿ ಕಾಮಗಾರಿ ಚುರುಕುಗೊಳಿಸಲು ಅಂಗಡಿ ಸೂಚನೆ

Published:
Updated:
Prajavani

ಬೆಳಗಾವಿ: ‘ದಂಡುಮಂಡಳಿಯ (ಕಂಟೋನ್ಮೆಂಟ್) ಜಾಗದಲ್ಲಿ ಸ್ಮಾರ್ಟ್ ಸಿಟಿ, ಮಹಾನಗರ ಪಾಲಿಕೆ ಅಥವಾ ಸಾರಿಗೆ ಸಂಸ್ಥೆಯ ಕಾಮಗಾರಿ ಕೈಗೊಳ್ಳಲು ಅಥವಾ ಜಾಗ ಸ್ವಾಧೀನ ಪಡಿಸಿಕೊಳ್ಳಬೇಕಾದರೆ ಜಿಲ್ಲಾಧಿಕಾರಿ ಅವರ ಮೂಲಕ ದಂಡುಮಂಡಳಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬಹುದು’ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸ್ಮಾರ್ಟ್ ಸಿಟಿ ಹಾಗೂ ನಗರೋತ್ಥಾನ ಯೋಜನೆಗಳ ತುರ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದ ಯಾವುದೇ ಕಾಮಗಾರಿಗಳು ಬಾಕಿ ಉಳಿಯದಂತೆ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು. ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಕೈಗೊಳ್ಳುವ ಮುಂಚೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಹೆಸ್ಕಾಂ, ಬಿ.ಎಸ್.ಎನ್.ಎಲ್. ಹಾಗೂ ಮಹಾನಗರ ಪಾಲಿಕೆ ಸಮನ್ವಯದೊಂದಿಗೆ ನಿರ್ಧಾರ ಕೈಗೊಳ್ಳಬೇಕು’ ಎಂದರು.

‘ಯಾವುದೇ ಹೊಸ ಯೋಜನೆಯ ಪ್ರಸ್ತಾವ ಸಲ್ಲಿಸುವಾಗ ಪಾಲುದಾರ ಇಲಾಖೆಯ ಜತೆ ಸಮಗ್ರವಾಗಿ ಚರ್ಚಿಸಿ ಸೂಕ್ತ ಯೋಜನೆ ರೂಪಿಸಬೇಕು. ಪ್ರತಿ ಹದಿನೈದು ದಿನಗಳಿಗೊಮ್ಮೆ ಸಮನ್ವಯ ಸಭೆ ನಡೆಸಬೇಕು. ಮುಂಬರುವ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಭೆ ನಡೆಸಬೇಕು’  ಎಂದು ತಿಳಿಸಿದರು.

‘ಅಶೋಕ ವೃತ್ತ ರಸ್ತೆ ಹಾಗೂ ತರಕಾರಿ ಮಾರುಕಟ್ಟೆ ರಸ್ತೆ ಅಗಲೀಕರಣಕ್ಕೆ ಅಗತ್ಯವಾದ ಜಾಗೆಯನ್ನು ಪಡೆದುಕೊಂಡು ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿ ಆರಂಭಿಸಬೇಕು. ಅದೇ ರೀತಿ ವೆಂಗುರ್ಲಾ ಮತ್ತು ಗಣೇಶಪುರ ರಸ್ತೆ ಅಭಿವೃದ್ಧಿ ಕೆಲಸವನ್ನು ಮಹಾನಗರ ಪಾಲಿಕೆ ವತಿಯಿಂದ ಕೈಗೊಳ್ಳಬೇಕು’ ಎಂದು ಹೇಳಿದರು.

‘ಇಲ್ಲಿನ ದಂಡುಮಂಡಳಿ ವ್ಯಾಪ್ತಿಯ ಜಾಗೆಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಏನೇ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಾದರೆ ಜಿಲ್ಲಾಧಿಕಾರಿ ಮೂಲಕ ಪ್ರಸ್ತಾವ ಸಲ್ಲಿಸಿ ಅಗತ್ಯ ಅನುಮತಿ ಪಡೆದುಕೊಳ್ಳಬೇಕು. ತಾಂತ್ರಿಕ ಕಾರಣ ನೆಪ ಹೇಳಿ ಯಾವುದೇ ಅಭಿವೃದ್ಧಿ ಕಾಮಗಾರಿ ವಿಳಂಬಗೊಳಿಸಬಾರದು. ತಕ್ಷಣ ಸಮಸ್ಯೆಗೆ ಪರಿಹಾರ ಕಂಡುಕೊಂಡು ಕಾಮಗಾರಿ ಮುಂದುವರಿಸಬೇಕು’ ಎಂದರು. 

ಪ್ರಸ್ತಾವ ಸಲ್ಲಿಕೆಗೆ ಸಲಹೆ: ‘ವಿವಿಧ ಇಲಾಖೆಗಳ ಮೂಲಕ ನಡೆಯಬೇಕಾದ ಕಾರ್ಯಗಳಿಗೂ ಸ್ಮಾರ್ಟ್ ಸಿಟಿ ವತಿಯಿಂದ ಪ್ರಸ್ತಾವ ಸಲ್ಲಿಸಿ ಹೆಚ್ಚುವರಿ ಅನುದಾನ ಪಡೆಯಬಹುದು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸಲಹೆ ನೀಡಿದರು.

‘ಮಹಾನಗರ ಪಾಲಿಕೆ ಅಥವಾ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಎಷ್ಟು ಜಾಗೆ ಅಗತ್ಯವಿದೆ ಎಂಬುದರ ಬಗ್ಗೆ ಹಾಗೂ ಯೋಜನೆಯ ರೂಪುರೇಷೆಯ ಕುರಿತು ನಿಗದಿತ ನಮೂನೆಯಲ್ಲಿ ಮಾಹಿತಿ ನೀಡಿದರೆ ಎನ್.ಓ.ಸಿ. ನೀಡುವ ಬಗ್ಗೆ ಪರಿಶೀಲಿಸಿ ತಕ್ಷಣವೇ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ದಂಡುಮಂಡಳಿ ಅಧ್ಯಕ್ಷ ಬ್ರಿಗೇಡಿಯರ್ ಗೋವಿಂದ ಕಾಲವಾಡ ಹೇಳಿದರು.

‘ದಂಡುಮಂಡಳಿ ವ್ಯಾಪ್ತಿಯ ಬೀದಿದೀಪ ನಿರ್ವಹಣೆ ಹಾಗೂ ವಿದ್ಯುತ್‌ ಶುಲ್ಕವನ್ನು  ರಾಜ್ಯ ಸರ್ಕಾರದ ವತಿಯಿಂದ ಪಾವತಿಸಲು ಕ್ರಮ ಕೈಗೊಳ್ಳಬೇಕು ಮತ್ತು ದಂಡುಮಂಡಳಿಯ ವ್ಯಾಪ್ತಿಯಲ್ಲಿ ಇರುವ ಕಸಾಯಿಖಾನೆ ಬೇರೆ ಕಡೆ ಸ್ಥಳಾಂತರಿಸಬೇಕು’ ಎಂದು ದಂಡುಮಂಡಳಿಯ ಸಿಇಒ ಅಧಿಕಾರಿ ಬರ್ಚಸ್ವಾ ಮನವಿ ಮಾಡಿಕೊಂಡರು.

ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರಾದ ಶಿರೀನ್ ನದಾಫ್, ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಎಚ್.,  ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Post Comments (+)