ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಸೂಳಿ ಗ್ರಾಮದ ಈ ಕೋಣಕ್ಕೆ ₹1.50 ಕೋಟಿ ಬೆಲೆ ನಿರೀಕ್ಷೆ!

ಪ್ರೀತಿಯಿಂದ ಪೋಷಣೆ ಮಾಡಿರುವ ರೈತಾಪಿ ಕುಟುಂಬ
Last Updated 14 ಮಾರ್ಚ್ 2022, 8:42 IST
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಗಜಗಾಂಭೀರ್ಯ, ಗತ್ತು ಗೈರತ್ತಿನ ‘ಗಜೇಂದ್ರ’ ಆ ಮನೆ ಮಂದಿಯ ಮುದ್ದಿನ ಸದಸ್ಯ. ಆತನಿಗೆ ನಿತ್ಯವೂ 15 ಲೀಟರ್ ಹಾಲು, ತಿಂಡಿ ತಿನಸು ಬೇಕೇಬೇಕು. ನಾಲ್ಕು ವರ್ಷ ಹರೆಯದ ಆತ ಬರೋಬರಿ ಒಂದೂವರೆ ಟನ್ ತೂಗುತ್ತಾನೆ. ಆತನಿಗೆ ಕುಟುಂಬದವರು ಕಟ್ಟಿರುವ ಬೆಲೆ ಎಷ್ಟು ಗೊತ್ತೇ? ಒಂದೂವರೆ ಕೋಟಿ ರೂಪಾಯಿ!

–ಇದು ರೈತಾಪಿ ಕುಟುಂಬವೊಂದು ಪ್ರೀತಿಯಿಂದ ಸಾಕಿರುವ ಮುರ‍್ರಾ ತಳಿಯ ಕೋಣ ‘ಗಜೇಂದ್ರ’ನ ಕಥೆ.

ಕಾಗವಾಡ ತಾಲ್ಲೂಕಿನ ಮಂಗಸೂಳಿ ಗ್ರಾಮದ ವಿಲಾಸ ಗಣಪತಿ ನಾಯಿಕ ಕುಟುಂಬದವರು ಸಾಕಿರುವ ಕೋಣ ಇದು. ಈ ಕುಟುಂಬ ಹೈನುಗಾರಿಕೆ ನೆಚ್ಚಿಕೊಂಡು ಉಪಜೀವನ ನಡೆಸುತ್ತಿದೆ. 4 ವರ್ಷಗಳ ಹಿಂದೆ ತಾವು ಸಾಕಿದ್ದ ಎಮ್ಮೆಯೊಂದರ ಕರುವೇ ಈ ‘ಗಜೇಂದ್ರ’. ದಷ್ಟಪುಷ್ಟವಾಗಿ ಅದು ಬೆಳೆದಿದ್ದು, ನಾಯಿಕ ಕುಟುಂಬದವರು ಬಹಳ ಕಾಳಜಿಯಿಂದ ಸಾಕುತ್ತಿದ್ದಾರೆ.

ಗಜೇಂದ್ರನಿಗೆ ಪ್ರತಿ ದಿನ 15 ಲೀಟರ್‌ ಹಾಲು ಕುಡಿಸುತ್ತಾರೆ. 2ರಿಂದ 3 ಕಿ.ಗ್ರಾಂ.ನಷ್ಟು ಹತ್ತಿ ಹಿಂಡಿ, ಕಬ್ಬು, ಹಸಿ ಮತ್ತು ಒಣ ಮೇವನ್ನೂ ನಿಯಮಿತವಾಗಿ ನೀಡುತ್ತಾರೆ. ಅಥಣಿ ತಾಲ್ಲೂಕಿನ ಐನಾಪುರ, ಮಹಾರಾಷ್ಟ್ರದ ತಾಸಗಾಂವ, ಅಹಮದಾಬಾದ್‌ನಲ್ಲಿ ನಡೆದ ಜಾನುವಾರುಗಳ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ‘ಗಜೇಂದ್ರ’ನ ಗಜ ಗಾತ್ರದ ಮೈಕಟ್ಟು ಕಂಡು ಜನ ಬೆರಗಾಗಿದ್ದಾರೆ.

‘ತಾಸಗಾಂವದಲ್ಲಿ ಗಜೇಂದ್ರನನ್ನು ₹ 80 ಲಕ್ಷಕ್ಕೆ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಈಚೆಗೆ ಸಾಂಗ್ಲಿಯಲ್ಲಿ ನಡೆದ ಜಾನುವಾರು ಪ್ರದರ್ಶನದಲ್ಲಿ ₹ 1 ಕೋಟಿ ಬೆಲೆ ಕಟ್ಟಲಾಗಿದೆ. ಆದರೆ, ಒಂದೂವರೆ ಕೋಟಿ ರೂಪಾಯಿಗೂ ಅಧಿಕ ಬೆಲೆ ಬಂದರೆ ಮಾತ್ರ ಮಾರುತ್ತೇನೆ’ ಎನ್ಜುತ್ತಾರೆ ಗಜೇಂದ್ರನ ಮಾಲೀಕ ವಿಲಾಸ ಗಣಪತಿ ನಾಯಿಕ.

‘ನಮ್ಮ ಕುಟುಂಬ ಹೈನುಗಾರಿಕೆಯನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದೆ. ಹರಿಯಾಣ ಮೊದಲಾದ ಕಡೆಗಳಿಂದ 50 ಎಮ್ಮೆಗಳನ್ನು ತಂದು ಸಾಕಿದ್ದೇವೆ. ನಮಗೆ ಹೊಲವಿಲ್ಲ. ಪ್ರತಿ ತಿಂಗಳು ₹ 50ಸಾವಿರ ಮೌಲ್ಯದ ಮೇವು, ಹಿಂಡಿ ಖರೀದಿಸಿ ಜಾನುವಾರುಗಳಿಗೆ ನೀಡುತ್ತೇವೆ. ನಿತ್ಯ ಸಂಜೆ ಮತ್ತು ಬೆಳಿಗ್ಗೆ ಸೇರಿ 100 ಲೀಟರ್ ಹಾಲು ಮಾರುತ್ತೇವೆ. ನಿತ್ಯ ₹ 5ಸಾವಿರ ಆದಾಯವಿದೆ. ಕೊಟ್ಟಿಗೆ ಗೊಬ್ಬರ ಮಾರಾಟದಿಂದ ಪ್ರತಿ ವರ್ಷ ಅಂದಾಜು ₹ 2 ಲಕ್ಷ ಬರುತ್ತದೆ. ಮನೆಯ ಎಲ್ಲರೂ ಜಾನುವಾರು ಸಾಕಣೆಯಲ್ಲೇ ತೊಡಗಿಕೊಂಡಿದ್ದೇವೆ’ ಎಂದು ವಿಲಾಸ ನಾಯಿಕ, ಪುತ್ರರಾದ ಜ್ಞಾನದೇವ ಮತ್ತು ಆನಂದ ನಾಯಿಕ ಹೇಳುತ್ತಾರೆ. ಸಂಪರ್ಕಕ್ಕೆ ಮೊ.ಸಂಖ್ಯೆ: 6361898410.

ನಿರೀಕ್ಷೆ ಇದೆ

ಹೈನುಗಾರಿಕೆಯನ್ನು ಯೋಜನಾಬದ್ಧವಾಗಿ ಮಾಡಿದರೆ ಅಧಿಕ ಆದಾಯ ಗಳಿಸಬಹುದಾಗಿದೆ. ಪ್ರೀತಿಯಿಂದ ಸಾಕಿರುವ ‘ಗಜೇಂದ್ರ’ ಒಂದೂವರೆ ಕೋಟಿ ರೂಪಾಯಿಗೆ ಮಾರಾಟವಾಗುವ ನಿರೀಕ್ಷೆ ಹೊಂದಿದ್ದೇನೆ.

–ವಿಲಾಸ ನಾಯಿಕ, ಮಂಗಸೂಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT