ಚಿಕ್ಕೋಡಿ: ಸೇತುವೆಗಳ ನಿರ್ಮಾಣಕ್ಕೆ ₹178.60 ಕೋಟಿ ಮಂಜೂರಾಗಿದೆ. ಒಂದೆಡೆ ಹಣ ಕೊಳೆಯುತ್ತಿದೆ, ಇನ್ನೊಂದೆಡೆ ಕಾಮಗಾರಿ ನಿಂತಿದೆ, ಮತ್ತೊಂದೆಡೆ ಜನರು ಪ್ರವಾಹಕ್ಕೆ ಸಿಲುಕಿ ತತ್ತರಿಸಿದ್ದಾರೆ. ಸರ್ಕಾರ ಮಾತ್ರ ಇದೆಲ್ಲವನ್ನೂ ನೋಡಿಕೊಂಡು ಸಾಂತ್ವನದ ಮಾತನಾಡಿ ಸುಮ್ಮನಾಗುತ್ತಿದೆ.
ಕಳೆದ ಎರಡು ದಶಕಗಳಿಂದ ಈ ಭಾಗದ ಸೇತುವೆಗಳನ್ನು ನವೀಕರಣ ಮಾಡಿಲ್ಲ. ಅಗತ್ಯವಿದ್ದಲ್ಲಿ ಹೊಸ ಸೇತುವೆ ನಿರ್ಮಿಸಿಲ್ಲ. ಹಳೆ ಸೇತುವೆಗಳು ಪ್ರತಿವರ್ಷ ಪ್ರವಾಹದಲ್ಲಿ ಮುಳುಗಿ ಸಂಚಾರ ಬಂದ್ ಆಗುತ್ತದೆ. ಮಳೆಗಾಲ ಬಂದರೆ ಸಾಕು; ಚಿಕ್ಕೋಡಿ ಉಪವಿಭಾಗದ ಜನ ಸರ್ಕಾರವನ್ನು ನಿರಂತರವಾಗಿ ದೂರುತ್ತಾರೆ.
ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಕೃಷ್ಣಾ, ದೂಧಗಂಗಾ, ವೇದಗಂಗಾ ನದಿ ತೀರದ ಜನ ಪ್ರತಿ ವರ್ಷ ಪ್ರವಾಹ ಭೀತಿ ಎದುರಿಸುತ್ತಲೇ ಇದ್ದಾರೆ. ವೇದಗಂಗಾ ನದಿಯ 4, ದೂಧಗಂಗಾ ನದಿಯ 4, ಕೃಷ್ಣಾ ನದಿಯ 2 ಸೇತುವೆಗಳು ಜಲಾವೃತಗೊಳ್ಳುತ್ತವೆ. ಇದರಿಂದ ನದಿ ತೀರದ ಎರಡೂ ಕಡೆಗಿನ ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತದೆ.
ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ ಅವರು ಪ್ರಯತ್ನದಿಂದ ಕೃಷ್ಣಾ ನದಿಗೆ 5, ದೂಧಗಂಗಾ 2 ಸೇತುವೆಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಕೆ.ಆರ್.ಡಿ.ಸಿ.ಎಲ್ ಯೋಜನೆ ಅಡಿಯಲ್ಲಿ 2017-18ರಲ್ಲಿ ₹178.64 ಕೋಟಿ ಮಂಜೂರಾತಿ ದೊರೆತಿದೆ. ಆದರೆ, ಬಹುತೇಕ ಸೇತುವೆಗಳ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಇದ್ದುದ್ದರಿಂದ ಪ್ರಸಕ್ತ ಸಾಲಿನಲ್ಲಿ ನದಿ ತೀರದ ಜನರು ಪ್ರವಾಹ ಪರಿಸ್ಥಿತಿ ಎದುರಿಸದೇ ಬೇರೆ ದಾರಿಯೇ ಇಲ್ಲದಂತಾಗಿದೆ.
ಖಿದ್ರಾಪೂರ– ಜುಗೂಳ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಲ್ಲಿ ಮಹಾರಾಷ್ಟದ ಕೊಲ್ಹಾಪುರ ಜಿಲ್ಲೆಯ ಖಿದ್ರಾಪುರದಲ್ಲಿಯ 12ನೇ ಶತಮಾನದ ಐತಿಹಾಸಿಕ ಕೋಪೇಶ್ವರ ದೇವಾಲಯ, ಕಾಗವಾಡ ತಾಲ್ಲೂಕಿನ ಶಿರಗುಪ್ಪಿಯ ಹಜರತ್ ಮಾಸಾಬಿ ದರ್ಗಾಗಳಿಗೆ ಕರ್ನಾಟಕ– ಮಹಾರಾಷ್ಟದ ಭಕ್ತರು ಬರಲು ಹೋಗಲು ಅನುಕೂಲವಾಗುತ್ತದೆ.
ಮಳವಾಡ– ಚಿಂಚಲಿ ಸೇತುವೆ ಕಾಮಗಾರಿ ಪೂರ್ಣಗೊಂಡಲ್ಲಿ ಚಿಂಚಲಿ ಪಟ್ಟಣದ ಪೌರಾಣಿಕ ಮಾಯಕ್ಕಾ ದೇವಿ ದೇವಸ್ಥಾನಕ್ಕೆ ಮಹಾರಾಷ್ಟ್ರದ ಲಕ್ಷಾಂತರ ಭಕ್ತರು ಆಗಮಿಸಲು, ಮೀರಜ್ ನಗರದಲ್ಲಿ ಆಸ್ಪತ್ರೆಗಳಿಗೆ ತೆರಳಲು ಕರ್ನಾಟಕದ ಜನತೆಗೆ ಅನುಕೂಲವಾಗುತ್ತದೆ. ಏಳು ಸೇತುವೆಗಳ ಕಾಮಗಾರಿ ಪೂರ್ಣಗೊಂಡಲ್ಲಿ ಕರ್ನಾಟಕ– ಮಹಾರಾಷ್ಟ್ರ ನಡುವೆ ವ್ಯಾಪಾರ ವಹಿವಾಟು, ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಾಟ, ಧಾರ್ಮಿಕ ಕ್ಷೇತ್ರಗಳ ದರ್ಶನ, ಆರೋಗ್ಯ ಸೇವೆ ಮುಂತಾದ ಕಾರ್ಯಗಳಿಗೆ ನೆರವಾಗುತ್ತದೆ.
ಇದೀಗ ಚಿಂಚಲಿ– ಮಳವಾಡ ಗ್ರಾಮಗಳ ನಡುವೆ ರಾಣಿ ಎಂಬ ಯುವತಿ ಪ್ರತಿ ದಿನ ದೋಣಿ ಮೂಲಕ 300ರಿಂದ 400 ಜನರನ್ನು ಒಂದೆಡೆಯಿಂದ ಮತ್ತೊಂದೆಡೆ ಸ್ಥಳಾಂತರಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ಭಾರಿಗೆ 50 ಜನರನ್ನು ದಡ ತಲುಪಿಸುವ ಸಾಹಸ ಮಾಡುತ್ತಿದ್ದಾರೆ. ನದಿ ಉಕ್ಕಿ ಹರಿಯುವ ಸಂದರ್ಭದಲ್ಲಿ ಸ್ಥಳೀಯರು 44 ಕಿ.ಮೀ ಸುತ್ತುಬಳಸಿ ಪ್ರಯಾಣ ಮಾಡುವುದು ಅನಿವಾರ್ಯವಾಗಿದೆ.
ಚಂದೂರ– ಸೈನಿಕ ಟಾಕಳಿ ಸೇತುವೆ ಕಾಮಗಾರಿಯು 2013-14ರಲ್ಲಿ ಪ್ರಾರಂಭಗೊಂಡಿದ್ದರೂ ಗುತ್ತಿಗೆದಾರರ ವಿಳಂಬ ಧೋರಣೆಯಿಂದ ಕಾಮಗಾರಿ ಪ್ರಾರಂಭಗೊಂಡು 9 ವರ್ಷ ಕಳೆದರೂ ಶೇ 70ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ರಾಷ್ಟೀಯ ಹೆದ್ದಾರಿ ವಿಭಾಗದಿಂದ ಸಿ.ಆರ್.ಎಫ್ ಯೋಜನೆ ಅಡಿಯಲ್ಲಿ 2016-17ನೇ ಸಾಲಿನಲ್ಲಿ ಪ್ರಾರಂಭವಾದ ಮಲಿಕವಾಡ– ದತ್ತವಾಡ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೂ, ಸೇತುವೆ ಇನ್ನೊಂದು ಬದಿ 5 ಕಿ.ಮೀ ರಸ್ತೆ ನಿರ್ಮಾಣ ಮಾಡಬೇಕಿದೆ.
ಕಾರದಗಾ– ಭೋಜ ಸೇತುವೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಅಪ್ರೋಚ್ ರಸ್ತೆ ಮಾಡುವ ಬದಲಾಗಿ ಡಕ್ ರಸ್ತೆ ನಿರ್ಮಾಣ ಮಾಡಿ ಎಂಬುವುದು ಸ್ಥಳೀಯರ ಬೇಡಿಕೆಯಾಗಿದೆ.
ಪಟ್ಟಿ– ನಿರ್ಮಾಣ ಹಂತದ ಸೇತುವೆಗಳು
ಸೇತುವೆ;ನದಿ;ಅನುದಾನ(₹ ಕೋಟಿಗಳಲ್ಲಿ) ಕಲ್ಲೋಳ–ಯಡೂರ;ಕೃಷ್ಣಾ;₹27.89 ಚಿಂಚಲಿ–ಮಳವಾಡ;ಕೃಷ್ಣಾ;₹30.73 ಜುಗೂಳ–ಖಿದ್ರಾಪೂರ;ಕೃಷ್ಣಾ;₹20.86 ಕಾರದಗಾ–ಭೋಜ;ದೂಧಗಂಗಾ ₹13.37 ಚಂದೂರ–ಸೈನಿಕ ಟಾಕಳಿ;ಕೃಷ್ಣಾ;₹18.64 ಮಲಿಕವಾಡ–ದತ್ತವಾಡ;ದೂಧಗಂಗಾ;₹22 ಕುಡಚಿ–ಉಗಾರ ಖುರ್ದ್;ಕೃಷ್ಣಾ;₹37.18
ಇವರೇನಂತಾರೆ?
ಜುಗೂಳ– ಖಿದ್ರಾಪೂರ ಸೇತುವೆ ಕಾಮಗಾರಿಯು ಬಹುತೇಕ ಮುಕ್ತಾಯದ ಹಂತದಲ್ಲಿದೆ. ಮುಂದಿನ ಮಳೆಗಾಲದ ಒಳಗೆ ಕಾಮಗಾರಿ ಪೂರ್ಣಗೊಳಿಸಿದರೆ ಪ್ರವಾಹ ಸಂದರ್ಭದಲ್ಲಿ ಕರ್ನಾಟಕ– ಮಹಾರಾಷ್ಡ್ರ ನಡುವೆ ಸಂಪರ್ಕ ಕಲ್ಪಿಸುವಂತಾಗುತ್ತದೆ
–ಉಮೇಶ ಪಾಟೀಲ ಜುಗೂಳ ನಿವಾಸಿ
ಕಾರದಗಾ– ಬೋಜ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಎರಡೂ ಬದಿಯಲ್ಲಿ ಅಪ್ರೋಚ್ ರಸ್ತೆ ಮಾಡಲು ಪಿಲ್ಲರ್ ಹಾಕಿ ಡಕ್ ರಸ್ತೆ ನಿರ್ಮಾಣ ಮಾಡಿದರೆ ಒಳಿತು. ಇಲ್ಲದೇ ಹೋದಲ್ಲಿ ಗ್ರಾಮದೊಳಗೆ ನದಿ ನೀರು ನುಗ್ಗುತ್ತದೆ
–ನಿತೀಶ ಖೋತ ಮಾಜಿ ಅಧ್ಯಕ್ಷ ಕಾರದಗಾ ಗ್ರಾಮ ಪಂಚಾಯಿತಿ
ಪ್ರತಿ ದಿನ 400ಕ್ಕೂ ಹೆಚ್ಚು ಜನ ಅಪಾಯಕಾರಿ ರೀತಿಯಲ್ಲಿ ದೋಣಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಚಿಂಚಲಿ– ಮಳವಾಡ ಸೇತುವೆ ಪೂರ್ಣಗೊಂಡಲ್ಲಿ ಇದಕ್ಕೆ ಕೊನೆಯಾಗಲಿದೆ
–ಅಪ್ಪಾಸಾಹೇಬ ಸೌಂದಲಗಿ ಚಿಂಚಲಿ ನಿವಾಸಿ
ಪ್ರತಿ ವರ್ಷ ಮಳೆಗಾಲದಲ್ಲಿ ಕೃಷ್ಣಾ ನದಿ ತೀರದ ಜನರು ಪಡುವ ತೊಂದರೆ ವಿಪರೀತವಾಗಿದೆ. ಮುಂಬರುವ ಮಳೆಗಾಲದ ಒಳಗಾದರೂ ಸೇತುವೆ ನಿರ್ಮಾಣ ಮುಗಿಸಬೇಕು. ಗುತ್ತಿಗೆದಾರರಿಗೆ ಸರ್ಕಾರ ಚುರುಕು ಮುಟ್ಟಿಸಿ ಪೂರ್ಣಗೊಳಿಸಬೇಕಿದೆ
–ಮಹಾಂತೇಶ ಕವಟಗಿಮಠ ವಿಧಾನ ಪರಿಷತ್ ಮಾಜಿ ಸದಸ್ಯ ಬೆಳಗಾವಿ
ಕರ್ನಾಟಕ– ಮಹಾರಾಷ್ಟ್ರ ನಡುವೆ ವ್ಯಾಪಾರ ವಹಿವಾಟು ಹೆಚ್ಚಿಸಲು ಪ್ರವಾಹ ಪರಿಸ್ಥಿತಿಯಿಂದ ಪಾರಾಗಲು ಧಾರ್ಮಿಕ ಕ್ಷೇತ್ರಗಳ ದರ್ಶನ ಕೊಡುವ ದೃಷ್ಟಿಯಿಂದ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಮುಂದಿನ ಮಳೆಗಾಲದ ಒಳಗಾಗಿ ಏಳೂ ಸೇತುವೆಗಳು ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ
–ಪ್ರಕಾಶ ಹುಕ್ಕೇರಿ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಚಿಕ್ಕೋಡಿ
ಸಿದ್ದಗೊಳ್ಳದ ಸೇತುವೆಗಳು ಕಲ್ಲೋಳ– ಯಡೂರ ಚಿಂಚಲಿ– ಮಳವಾಡ ಜುಗೂಳ– ಖಿದ್ರಾಪೂರ ಕಾರದಗಾ– ಭೋಜ ಚಂದೂರ– ಸೈನಿಕ ಟಾಕಳಿ ಮಲಿಕವಾಡ– ದತ್ತವಾಡ ಕುಡಚಿ– ಉಗಾರ ಖುರ್ದ್ ಸೇತುವೆಗಳ ಪೈಕಿ ಜುಗೂಳ– ಖಿದ್ರಾಪೂರ ಚಂದೂರ– ಸೈನಿಕ ಟಾಕಳಿ ಮಲಿಕವಾಡ– ದತ್ತವಾಡ ಸೇತುವೆಗಳು ಕರ್ನಾಟಕ– ಮಹಾರಾಷ್ಟ ರಾಜ್ಯಗಳನ್ನು ಸಂಪರ್ಕಿಸುವ ಸೇತುವೆಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.