ಎಸ್‌ಟಿಪಿ ಇಲ್ಲದ್ದಕ್ಕೆ ಬೆಳಗಾವಿಗೆ ಕಡಿಮೆ ಅಂಕ!

ಮಂಗಳವಾರ, ಮಾರ್ಚ್ 19, 2019
21 °C

ಎಸ್‌ಟಿಪಿ ಇಲ್ಲದ್ದಕ್ಕೆ ಬೆಳಗಾವಿಗೆ ಕಡಿಮೆ ಅಂಕ!

Published:
Updated:

ಬೆಳಗಾವಿ: ಕೇಂದ್ರ ಸರ್ಕಾರದ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯವು ನಡೆಸಿದ ಸ್ವಚ್ಛ ಸರ್ವೇಕ್ಷಣ– 2019ರಲ್ಲಿ ಬೆಳಗಾವಿ ನಗರಕ್ಕೆ ರಾಷ್ಟ್ರಮಟ್ಟದಲ್ಲಿ 277ನೇ ಹಾಗೂ ರಾಜ್ಯ ಮಟ್ಟದಲ್ಲಿ 9ನೇ ರ‍್ಯಾಂಕ್‌ ದಕ್ಕಿದೆ.

ನಗರ ಪ್ರದೇಶಗಳಲ್ಲಿ ಇರುವ ಮೂಲಸೌಕರ್ಯ ಹಾಗೂ ಇತರ ಅಂಶಗಳ ಆಧಾರದ ಮೇಲೆ ಖಾಸಗಿ ಏಜೆನ್ಸಿ ಮೂಲಕ ಸಮೀಕ್ಷೆ ನಡೆಸಲಾಗಿದೆ. ದೇಶದ ಸುಮಾರು 551 ನಗರಗಳಲ್ಲಿ ಸಮೀಕ್ಷೆ ನಡೆದಿತ್ತು. ಪ್ರತಿಯೊಂದು ಕಾರ್ಯಗಳಿಗೆ ಒಂದಿಷ್ಟು ಅಂಕಗಳನ್ನು ನೀಡಿ, ರ‍್ಯಾಂಕ್‌ ಪಟ್ಟಿ ತಯಾರಿಸಲಾಗಿದೆ. ಆ ಪಟ್ಟಿಯಲ್ಲಿ ಮೊದಲ ಸ್ಥಾನವು ಮಧ್ಯಪ್ರದೇಶದ ಇಂದೋರ್‌ಗೆ ದಕ್ಕಿದ್ದರೆ, ನಮ್ಮ ರಾಜ್ಯದ ಮೈಸೂರು ನಗರಕ್ಕೆ ಮೂರನೇ ಸ್ಥಾನ ದೊರೆತಿದೆ. ಬೆಳಗಾವಿಗೆ 277ನೇ ಸ್ಥಾನ ದೊರೆತಿದೆ. ರಾಜ್ಯದಲ್ಲಿ ಹೇಳುವುದಾದರೆ 27 ಜಿಲ್ಲೆಗಳ ಪೈಕಿ ಬೆಳಗಾವಿಗೆ 9ನೇ ಸ್ಥಾನ ದೊರೆತಿದೆ.

ಕಳೆದ ವರ್ಷವೂ ಇಂತಹ ಸಮೀಕ್ಷೆ ರಾಷ್ಟ್ರಮಟ್ಟದಲ್ಲಿ ನಡೆದಿತ್ತು. ಆಗ, 485 ನಗರಗಳ ಪೈಕಿ ಬೆಳಗಾವಿಗೆ 268ನೇ ಸ್ಥಾನ ದಕ್ಕಿತ್ತು.

ಎಸ್‌ಟಿಪಿ ಕೊರತೆ: ಇತರ ನಗರಗಳಿಗೆ ಹೋಲಿಸಿದರೆ ಬೆಳಗಾವಿಯಲ್ಲಿ ಹೆಚ್ಚು ಸ್ವಚ್ಚತೆ ಇದ್ದರೂ, ಸರ್ವೇಯಲ್ಲಿ ಉನ್ನತ ರ‍್ಯಾಂಕ್‌ ಲಭಿಸಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಮುಖ್ಯವಾಗಿ ನಗರದಲ್ಲಿ ತ್ಜಾಜ್ಯ ಸಂಸ್ಕರಣಾ ಘಟಕ (ಎಸ್‌ಟಿಪಿ) ಇಲ್ಲದಿರುವುದು ಹಿನ್ನಡೆಯಾಗಿದೆ.

ಹಲಗಾ ಬಳಿ ಎಸ್‌ಟಿಪಿ ಸ್ಥಾಪಿಸಬೇಕೆಂದು ಹಲವು ವರ್ಷಗಳ ಹಿಂದೆಯೇ ನಿರ್ಧಾರವಾಗಿತ್ತು. ಅದಕ್ಕಾಗಿ ಬೇಕಾದ ಜಮೀನನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಿತ್ತು. ಮಹಾನಗರ ಪಾಲಿಕೆಗೂ ಹಸ್ತಾಂತರಿಸಿತ್ತು. ಆದರೆ, ಕೆಲವು ರಾಜಕೀಯ ವ್ಯಕ್ತಿಗಳು ಮಧ್ಯೆಪ್ರವೇಶಿಸಿ, ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಎಸ್‌ಟಿಪಿ ಇದುವರೆಗೂ ನಿರ್ಮಾಣಗೊಂಡಿಲ್ಲ. ಎಸ್‌ಟಿಪಿ ಇಲ್ಲದಿರುವುದರಿಂದ ಕಡಿಮೆ ಅಂಕಗಳು ಲಭಿಸಿವೆ.

ಸಾರ್ವಜನಿಕ ಶೌಚಾಲಯಕ್ಕೂ ಕಡಿಮೆ ಅಂಕ: ಸಮೀಕ್ಷೆಯಲ್ಲಿ ಸಾರ್ವಜನಿಕ ಶೌಚಾಲಯಗಳಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ನಗರದಲ್ಲಿ ಸಾರ್ವಜನಿಕ  ಶೌಚಾಲಯಗಳ ಕೊರತೆ ಇರುವುದು ಕಂಡುಬಂದಿತ್ತು. ಮಾರ್ಕೆಟ್‌, ಮುಖ್ಯರಸ್ತೆ ಹಾಗೂ ಹೆಚ್ಚು ಜನರ ಓಡಾಟ ಇರುವ ಸ್ಥಳಗಳಲ್ಲಿ ಶೌಚಾಲಯಗಳಿಲ್ಲ. ಶೌಚಾಲಯಗಳನ್ನು ಮಹಾನಗರ ಪಾಲಿಕೆಯವರು ನಿರ್ಮಿಸಲು ಮುಂದಾದರೆ, ಅದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ. ಹೀಗಾಗಿ ಜನಸಂಖ್ಯೆಗೆ ಹೋಲಿಸಿ ನೋಡಿದರೆ ಶೌಚಾಲಯಗಳ ಸಂಖ್ಯೆ ಅತ್ಯಂತ ಕಡಿಮೆಯಾಗಿದೆ. ಅಲ್ಲದೇ, ಇವುಗಳ ಬಳಕೆಯೂ ತುಂಬಾ ಕಡಿಮೆಯಾಗಿದೆ. ಈ ಕಾರಣದಿಂದಲೂ ಕೆಲವು ಅಂಕಗಳು ಕಡಿತಗೊಂಡಿವೆ.

ನಗರದಾದ್ಯಂತ ಚರಂಡಿ ವ್ಯವಸ್ಥೆ ಇಲ್ಲ. ಹಲವು ಕಡೆ ಅಕ್ರಮ ಬಡಾವಣೆಗಳನ್ನು ನಿರ್ಮಿಸಲಾಗಿದೆ. ರಸ್ತೆ ಫುಟ್‌ಪಾತ್‌ ಸಮರ್ಪಕವಾಗಿಲ್ಲ. ಎಲ್ಲ 58 ವಾರ್ಡ್‌ಗಳಲ್ಲಿ 24x7 ಕುಡಿಯುವ ನೀರು ವ್ಯವಸ್ಥೆ ಇಲ್ಲ, ವೃತ್ತಗಳು, ರಸ್ತೆಗಳು, ಫ್ಲೈಓವರ್‌ ಸೌಂದರ್ಯರೀಕರಣ ಇಲ್ಲದಿರುವುದಕ್ಕೂ ಅಂಕಗಳು ಕಡಿತಗೊಂಡಿವೆ.

ನೀರಸ ಸ್ಪಂದನೆ: ಸರ್ವೇ ನಡೆಸುವ ವೇಳೆ ಗೂಗಲ್‌ ಪ್ಲೇ ಸ್ಟೋರ್‌ ಮೂಲಕ ‘ಸ್ವಚ್ಛತಾ’ ಆ್ಯಪ್‌ ಬಿಡುಗಡೆ ಮಾಡಲಾಗಿತ್ತು. ಈ ಆ್ಯಪ್‌ನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವಂತೆ ನಾಗರಿಕರಿಗೆ ಕೋರಿಕೊಳ್ಳಲಾಗಿತ್ತು. ಬೆಳಗಾವಿಯಲ್ಲಿ ಸಾಕಷ್ಟು ಜನ ಸುಶಿಕ್ಷಿತರು ಇದ್ದರೂ, ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಇವೆಲ್ಲ ಕಾರಣದಿಂದಾಗಿ ಬೆಳಗಾವಿಗೆ ಕಡಿಮೆ ಅಂಕಗಳು ದೊರೆತಿವೆ.

ಹೆಚ್ಚು ಅಂಕ ಬಂದಿರುವುದು
ಪ್ರತಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸುವುದು ಹಾಗೂ ಅದನ್ನು ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿರುವ ಕೆಲಸಕ್ಕೆ ಹೆಚ್ಚು ಅಂಕಗಳು ಲಭಿಸಿವೆ. ಪ್ರತಿದಿನ ಬೆಳಿಗ್ಗೆ ಕಸಗೂಡಿಸುವ ಕೆಲಸ, ವೈಯಕ್ತಿಕ ಶೌಚಾಲಯಗಳ ನಿರ್ಮಾಣ, ಶೌಚಾಲಯ ನಿರ್ಮಾಣದ ಬಗ್ಗೆ ಅರಿವು ಮೂಡಿಸುವ ಕ್ರಮಗಳು ಸೇರಿದಂತೆ ಇತರ ಕೆಲಸ ಕಾರ್ಯಗಳಿಗೆ ಉತ್ತಮ ಅಂಕಗಳು ಲಭಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !