ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಂಗುದಾಣ’ಗಳೇ ಇಲ್ಲದ ತಾಲ್ಲೂಕು ಕೇಂದ್ರ!

ಚಿಕ್ಕೋಡಿಯಲ್ಲಿ ಬಸ್‌ಗಳಿಗೆ ಕಾಯುವ ಪ್ರಯಾಣಿಕರಿಗೆ ತೊಂದರೆ
Last Updated 25 ನವೆಂಬರ್ 2019, 9:35 IST
ಅಕ್ಷರ ಗಾತ್ರ

ಚಿಕ್ಕೋಡಿ: ತಾಲ್ಲೂಕು ಹಾಗೂ ಉಪ ವಿಭಾಗದ ಪ್ರಮುಖ ಕೇಂದ್ರವಾಗಿರುವ ಪಟ್ಟಣದ ಹಲವು ಕಡೆಗಳಲ್ಲಿ ಬಸ್ ತಂಗುದಾಣಗಳೇ ಇಲ್ಲ. ಇದರಿಂದಾಗಿ ಪ್ರಯಾಣಿಕರು ಗಾಳಿ, ಮಳೆ, ಬಿಸಿಲು ಎನ್ನದೇ ರಸ್ತೆ ಬದಿಯಲ್ಲೇ ಬಸ್‌ಗಾಗಿ ಕಾದು ನಿಂತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ನಗರ, ಪಟ್ಟಣಗಳಿಗೆ ಸಂಪರ್ಕ ಕೊಂಡಿಯಾಗಿರುವ ಚಿಕ್ಕೋಡಿ ಬಸ್‌ನಿಲ್ದಾಣದ ಮೂಲಕ ನಿತ್ಯವೂ ಸಾವಿರಾರು ಬಸ್‌ಗಳು ಸಂಚರಿಸುತ್ತಿವೆ. ಆದರೆ, ಪ್ರಯಾಣಿಕರ ಸುರಕ್ಷತೆಗೆ ಗಮನಹರಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ಕಚೇರಿ ಇಲ್ಲಿದೆ. ₹ 5.25 ಕೋಟಿ ವೆಚ್ಚದಲ್ಲಿ ಹೈಟೆಕ್ ಕೇಂದ್ರ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ. ಆದರೆ, ಅಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ. ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಿಲ್ಲ. ಅಂತೆಯೇ, ಬಡಾವಣೆಗಳಲ್ಲಿ ತಂಗುದಾಣಗಳನ್ನು ನಿರ್ಮಿಸುವ ಕಡೆಗೆ ಯೋಚಿಸಿಲ್ಲ.

ಚಿಕ್ಕೋಡಿ ಸುತ್ತಮುತ್ತಲಿನ ಹಲವು ಗ್ರಾಮಗಳು ಹಾಗೂ ತಾಲ್ಲೂಕಿನ ವಿವಿಧೆಡೆಯಿಂದ ಶಾಲೆ-ಕಾಲೇಜುಗಳಿಗೆ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬರುತ್ತಾರೆ. ಹಲವು ಕೆಲಸಗಳಿಗಾಗಿ ರೈತರು, ಮಹಿಳೆಯರು, ವಯೋವೃದ್ಧರು ಬರುವುದು ಕೂಡ ಸಾಮಾನ್ಯವಾಗಿದೆ. ಕೇಂದ್ರ ಬಸ್ ನಿಲ್ದಾಣದಲ್ಲಿ ಕಿಸೆಗಳ್ಳತನ, ಆಭರಣ ಕಳ್ಳತನಗಳು ನಡೆದಿದ್ದರೂ ಅದನ್ನು ತಡೆಯಲು ಸಂಸ್ಥೆ ಅಧಿಕಾರಿಗಳು ಗಮನಹರಿಸದೇ ಇರುವುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆ ಬದಿಯಲ್ಲೇ:

ಚಿಕ್ಕೋಡಿ ಕೇಂದ್ರ ಬಸ್‌ ನಿಲ್ದಾಣದಿಂದ ಹೊರಡುವ ಬಸ್‌ಗಳಿಗೆ ಪಟ್ಟಣದ ಬಸವ ವೃತ್ತ, ಅಂಕಲಿಖೂಟ್, ಝಾರಿ ಗಲ್ಲಿ, ಇಂದಿರಾನಗರ, ಹಾಲಟ್ಟಿ ಮುಂತಾದೆಡೆ ನಿಲುಗಡೆ ಇದೆ. ಆದರೆ, ಈ ಸ್ಥಳಗಳಲ್ಲಿ ತಂಗುದಾಣಗಳೇ ಇಲ್ಲ. ಇದರಿಂದಾಗಿ ಪ್ರಯಾಣಿಕರು ಮಳೆ, ಗಾಳಿ, ಬಿಸಿಲು ಎನ್ನದೇ ರಸ್ತೆ ಬದಿಯಲ್ಲೇ ನಿಂತುಕೊಳ್ಳಬೇಕಾಗಿದೆ. ತೊಂದರೆ ಅನುಭವಿಸಬೇಕಾಗಿದೆ. ತಾಲ್ಲೂಕು ಕೇಂದ್ರವಾದ ಇಲ್ಲಿ ಮೂಲಸೌಲಭ್ಯವಾದ ತಂಗುದಾಣಗಳ ನಿರ್ಮಾಣಕ್ಕೆ ಆದ್ಯತೆ ನೀಡದಿರುವುದು ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಿದೆ.

ಮಿನಿ ವಿಧಾನಸೌಧ ಎದುರು ಮತ್ತು ಅಂಕಲಿ ಖೂಟ್‌ನಲ್ಲಿ ಪ್ರಯಾಣಿಕರ ತಂಗುದಾಣಗಳಿವೆ. ಆದರೆ, ಸಂಸ್ಥೆಯ ಸಿಬ್ಬಂದಿ ಬಸ್‌ಗಳನ್ನು ಸ್ಥಳಗಳಲ್ಲಿ ನಿಲುಗಡೆ ಮಾಡುವುದೇ ಇಲ್ಲ. ಹೀಗಾಗಿ ಆ ತಂಗುದಾಣಗಳು ನಿಷ್ಪ್ರಯೋಜಕವಾಗಿವೆ. ಪ್ರಯಾಣಿಕರು ಬಸ್‌ ಹತ್ತವುದಕ್ಕಾಗಿ ದಾವಂತದಲ್ಲಿ ಓಡ್ಹೋಡಿ ಹೋಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಲಭ್ಯವಿರುವ ತಂಗುದಾಣಗಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಬಸ್ ತಂಗುದಾಣದ ಬಳಿಯೇ ಬಸ್ ನಿಲ್ಲಿಸುವಂತೆ ಬಸ್ ಚಾಲಕ-ನಿರ್ವಾಹಕರಿಗೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎನ್ನುವುದು ಜನರು ಒತ್ತಾಯವಾಗಿದೆ.

ಟ್ರಾಫಿಕ್ ಸಿಗ್ನಲ್ ಅಳವಡಿಸಿ:

ಪಟ್ಟಣದ ಬಸವ ವೃತ್ತ ಸದಾ ವಾಹನ ಮತ್ತು ಜನದಟ್ಟಣೆ ಹೊಂದಿರುವ ವೃತ್ತ. ಇಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ಪೊಲೀಸ್ ಸಿಬ್ಬಂದಿ ಪರದಾಡುವಂತಾಗಿದೆ. ಬಸವ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಿ ಸುಗಮ ಸಾರಿಗೆ ವ್ಯವಸ್ಥೆ ಕೈಗೊಳ್ಳಬೇಕಾಗಿದೆ. ಮುಧೋಳ, ವಿಜಯಪುರ, ಸಾಂಗ್ಲಿ, ನಿಪ್ಪಾಣಿ ಮತ್ತು ಬೆಳಗಾವಿ ರಸ್ತೆಗಳನ್ನು ಸಂದಿಸುವ ಬಸವವೃತ್ತವು ಸದಾ ವಾಹನ ಸಂಚಾರದಿಂದ ಗಿಜಿಗುಡುತ್ತದೆ. ಬಸವ ವೃತ್ತದ ಬಳಿಯೇ ಮಿನಿವಿಧಾನಸೌಧ, ನ್ಯಾಯಾಲಯ ಸಂಕೀರ್ಣ, ಶಾಲೆ-ಕಾಲೇಜುಗಳು ಇರುವುದರಿಂದ ಪ್ರಯಾಣಿಕರಿಂದಲೂ ಹೆಚ್ಚಿರುತ್ತಾರೆ. ಇಲ್ಲಿ ಟ್ರಾಫಿಕ್‌ ಸಿಗ್ನಲ್ ಅಳವಡಿಸಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

‘ಚಿಕ್ಕೋಡಿ ವೇಗವಾಗಿ ಬೆಳೆಯುತ್ತಿದೆ. ಆದರೆ ಅಲ್ಲಲ್ಲಿ ತಂಗುದಾಣಗಳೇ ಇಲ್ಲ. ಇಲ್ಲಿಗೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಾರೆ. ಅವರಿಗೆ ತೀವ್ರ ತೊಂದರೆಯಾಗುತ್ತಿದೆ. ರಸ್ತೆ ವಿಸ್ತರಣೆ ನೆಪದಲ್ಲಿ ಬಸವ ವೃತ್ತದಲ್ಲಿದ್ದ ಬಸ್ ಶೆಲ್ಟರ್‌ ತೆರವುಗೊಳಿಸಲಾಗಿದೆ. ಪ್ರಯಾಣಿಕರು ಜೀವಭಯದಲ್ಲೇ ರಸ್ತೆಯ ಬದಿಯಲ್ಲಿ ವಾಹನಗಳಿಗಾಗಿ ಕಾಯುವುದು ಸಾಮಾನ್ಯವಾಗಿದೆ. ಯಕ್ಸಂಬಾ ರಸ್ತೆ, ಅಂಕಲಿಖೂಟ್, ಇಂದಿರಾ ನಗರ, ಹಾಲಟ್ಟಿ ಹಾಗೂ ಬಸವಸ ವೃತ್ತದ ಎಲ್ಲ ದಿಕ್ಕುಗಳಲ್ಲೂ ತಂಗುದಾಣಗಳನ್ನು ನಿರ್ಮಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನಹರಿಸಬೇಕು. ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಮುಖಂಡ ರಾಜು ಕೊಂಡೆಬೆಟ್ಟು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT