ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಹಣದ ಕೇಂದ್ರಗಳಿಗಿಲ್ಲ ಕಾವಲು!

ಭದ್ರತೆ ಒದಗಿಸಬೇಕೆಂಬ ಆದೇಶ ಕಾಗದದಲ್ಲೇ ಉಳಿದಿದೆ
Last Updated 22 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಆಧುನಿಕ ‘ಸ್ಕಿಮ್ಮರ್‌ ಉಪಕರಣ’ ಹಾಗೂ ಮೈಕ್ರೊ ಕ್ಯಾಮೆರಾ ಬಳಸಿ ಎಟಿಎಂ ಕಾರ್ಡ್‌ಗಳ ದತ್ತಾಂಶ (ಡೇಟಾ) ಕದ್ದು ಬ್ಯಾಂಕ್‌ ಖಾತೆಗೆ ಕನ್ನ ಹಾಕುವ ‘ಗ್ಯಾಂಗ್‌’ ರಾಜ್ಯದಲ್ಲಿ ಸಕ್ರಿಯವಾಗಿದ್ದು, ವಿವಿದ ಜಿಲ್ಲೆಗಳಲ್ಲಿ ಗ್ರಾಹಕರು ವಂಚನೆಗೆ ಒಳಗಾಗಿದ್ದಾರೆ. ಆದರೆ, ಜನರಲ್ಲಿ ಉಂಟಾಗಿರುವ ‘ಹೊಸ ಆತಂಕ’ ನಿವಾರಣೆಗೆ ಕ್ರಮ ಕೈಗೊಳ್ಳಬೇಕಾದವರು ಎಚ್ಚೆತ್ತುಕೊಂಡಿಲ್ಲ. ನಗರದಲ್ಲಿ ಬಹುತೇಕ ಎಟಿಎಂ ಕೇಂದ್ರಗಳ ಬಳಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ಇದು, ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ವಿವಿಧ 31 ಬ್ಯಾಂಕ್‌ಗಳ 665 ಶಾಖೆಗಳಿವೆ. ಒಟ್ಟು 590 ಎಟಿಎಂ ಕೇಂದ್ರಗಳಿವೆ. ಇವುಗಳಲ್ಲಿ ಹೆಚ್ಚಿನವು ಬೆಳಗಾವಿ ಸೇರಿದಂತೆ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲೇ ಇವೆ. ಈ ಪೈಕಿ ಬಹುತೇಕ ಕೇಂದ್ರಗಳಲ್ಲಿ ಭದ್ರತೆಯ ವ್ಯವಸ್ಥೆ ಇಲ್ಲ. ಅಲ್ಲದೇ, ಎಷ್ಟು ಕೇಂದ್ರಗಳಲ್ಲಿ ನಿಯಮಿತವಾಗಿ ಭದ್ರತಾ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ ಎನ್ನುವ ನಿಖರ ಮಾಹಿತಿಯೂ ಮಾರ್ಗದರ್ಶಿ ಬ್ಯಾಂಕ್ ಬಳಿ ಇಲ್ಲ.

ಬರೋಬ್ಬರಿ 3 ರಾಜ್ಯಗಳಿಗೆ (ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ) ಸಂಪರ್ಕ ಕಲ್ಪಿಸುವ ಬೆಳಗಾವಿ ನಗರದಲ್ಲಿ ಹೊರ ರಾಜ್ಯದವರ ಓಡಾಟ ಇರುತ್ತದೆ. ‘ಕಳ್ಳರ ಗ್ಯಾಂಗ್‌’ ಯಾವ ರೂಪದಲ್ಲಿ ಬರುತ್ತಾರೆಯೋ ಹೇಳಲಾಗದು. ‘ಕಳವು ಮಾಡಲು ತಂತ್ರಜ್ಞಾನ ಬಳಸಿಕೊಳ್ಳುವವರು’ ಎಟಿಎಂ ಕೇಂದ್ರಗಳ ಬಳಿ ಇರುವ ಭದ್ರತಾ ಲೋಪವನ್ನು ‘ದುರ್ಬಳಕೆ ಮಾಡಿಕೊಂಡು’ ಜನರ ಖಾತೆಗಳಲ್ಲಿನ ಹಣ ಲಪಟಾಯಿಸಿದರೆ ದೂರುವುದು ಯಾರನ್ನು ಎನ್ನುವ ಪ್ರಶ್ನೆಯೂ ಉಂಟಾಗುತ್ತಿದೆ.

ಅನುಕೂಲವಾದ ವಾತಾವರಣ!:ಎಟಿಎಂ ಕಾರ್ಡ್‌ನ ವಿವರಗಳನ್ನು ಕಳವು ಮಾಡಲು ‘ಅನುಕೂಲ’ ಕಲ್ಪಿಸುವಂತಹ ಪರಿಸ್ಥಿತಿ ಇಲ್ಲಿದೆ! ಭದ್ರತೆ ಇಲ್ಲದ ಎಟಿಎಂಗಳೇ ಈ ಗ್ಯಾಂಗ್‌ನ ಟಾರ್ಗೆಟ್‌ ಆಗಿರುವುದು ರಾಜ್ಯದ ವಿವಿಧೆಡೆ ಪೊಲೀಸರು ನಡೆಸಿದ ತನಿಖೆಯಿಂದ ಹೊರಬಿದ್ದಿದೆ. ಭದ್ರತೆ ಇಲ್ಲದ ಎಟಿಎಂ ಕೇಂದ್ರಗಳಲ್ಲಿ ಎಟಿಎಂ ಕಾರ್ಡ್‌ ಹಾಕುವ ಸಾಧನಕ್ಕೆ ‘ಸ್ಕಿಮ್ಮರ್‌’ ಉಪಕರಣ ಅಳವಡಿಸಿ, ಪಿನ್‌ಕೋಡ್‌ ಒತ್ತುವ ಕೀಪ್ಯಾಡ್‌ ಮೇಲ್ಭಾಗದಲ್ಲಿ ಪುಟ್ಟ ಕ್ಯಾಮೆರಾ ಇಟ್ಟು ದತ್ತಾಂಶ ಕಳವು ಮಾಡಿ, ಖಾತೆಗೆ ಕನ್ನ ಹಾಕುವುದು ಇತರ ನಗರಗಳಲ್ಲಿ ಕಂಡುಬಂದಿದೆ. ಇಲ್ಲೂ ಎಟಿಎಂ ಕಳವಿಗೆ ಯತ್ನಿಸಿದ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇವೆ.

ಕಳ್ಳರ ವ್ಯವಸ್ಥಿತ ತಂತ್ರದಿಂದಾಗಿ, ಎಟಿಎಂಗೆ ಗ್ರಾಹಕರು ಕಾರ್ಡ್‌ ಹಾಕಿದ ತಕ್ಷಣ ಅದರ ದತ್ತಾಂಶವು ‘ಸ್ಕಿಮ್ಮರ್‌’ಗೆ ರವಾನೆ ಆಗುತ್ತದೆ. ಪಿನ್‌ ಸಂಖ್ಯೆಯನ್ನು ಪುಟ್ಟ ಕ್ಯಾಮೆರಾ ಸೆರೆಹಿಡಿಯುತ್ತದಯಂತೆ. ಈ ದತ್ತಾಂಶವನ್ನು ಲ್ಯಾಪ್‌ಟಾಪ್‌ಗೆ ವರ್ಗಾಯಿಸಿ ನಕಲಿ ಎಟಿಎಂ ಕಾರ್ಡ್‌ ಸೃಷ್ಟಿಸಿ, ಗ್ರಾಹಕರ ಬ್ಯಾಂಕ್‌ ಖಾತೆಯಿಂದ ಹಣ ಡ್ರಾ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆದರೆ, ಇಂತಹ ಘಟನೆಗಳು ಬೆಳಗಾವಿಯಲ್ಲೂ ನಡೆಯಬಹುದಾದ ಸಾಧ್ಯತೆಗಳಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎನ್ನುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ವ್ಯವಸ್ಥೆಯೇ ಇಲ್ಲ:ಸಾರ್ವಜನಿಕರ ಹಣವನ್ನು ಒಡಲಲ್ಲಿ ಇಟ್ಟುಕೊಂಡಿರುವ ಎಟಿಎಂ ಕೇಂದ್ರಗಳ ಬಳಿ ‘ಕಾವಲು’ ಕಾಯುವ ವ್ಯವಸ್ಥೆಯೇ ಇಲ್ಲ! ಗ್ರಾಹಕರು ವಂಚನೆಗೆ ಒಳಗಾಗುವುದಕ್ಕೆ ಮುನ್ನವೇ ಮುಂಜಾಗ್ರತೆ ವಹಿಸಲು ಅಧಿಕಾರಿಗಳು ಆದ್ಯತೆ ನೀಡಿಲ್ಲ. ಇದು ಸಾರ್ವಜನಿಕರ ಹಣಕ್ಕೆ ಬ್ಯಾಂಕ್‌ಗಳು ಅಥವಾ ವ್ಯವಸ್ಥೆಯಲ್ಲಿ ಎಷ್ಟರ ಮಟ್ಟಿಗೆ ಸುರಕ್ಷತೆ ಇದೆ ಎನ್ನುವುದೇ ಪ್ರಶ್ನೆಯಾಗಿದೆ.

2013ರಲ್ಲಿ ಬೆಂಗಳೂರಿನ ಎಟಿಎಂ ಕೇಂದ್ರದಲ್ಲಿ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದ. ಇದಾದ ಬಳಿಕ ಪೊಲೀಸ್‌ ಇಲಾಖೆ ಸಾರ್ವಜನಿಕ ಸುರಕ್ಷತಾ ಮಾರ್ಗಸೂಚಿ ರೂಪಿಸಿ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿತ್ತು. ಇದಾಗಿ 6 ವರ್ಷಗಳು ಕಳೆಯುತ್ತಿದ್ದರೂ ಬಹುತೇಕ ಎಟಿಎಂಗಳಲ್ಲಿ ಮಾರ್ಗಸೂಚಿ ಪಾಲನೆಯಾಗುತ್ತಿಲ್ಲ. ಕೇಂದ್ರಗಳ ಬಳಿ ಭದ್ರತಾ ಸಿಬ್ಬಂದಿ ನೇಮಿಸಬೇಕು ಎನ್ನುವ ಪ್ರಮುಖ ಸೂಚನೆಯೇ ಕಾಗದದಲ್ಲಿ ಉಳಿದಿದೆ! ಆದೇಶಿಸಿದವರಾಗಲೀ ಅಥವಾ ಪಾಲಿಸಬೇಕಾದವರಾಗಲೀ ಇತ್ತ ತಲೆಯನ್ನೇ ಕೆಡಿಸಿಕೊಂಡಿಲ್ಲ!

ಗಾಳಿಗೆ ತೂರಲಾಗಿದೆ:ನಗರದ ಯಾವುದೇ ರಸ್ತೆ, ವೃತ್ತದಲ್ಲಿರುವ ಎಟಿಎಂ ಕೇಂದ್ರಗಳಿಗೆ ಹೋದರೆ ಅಲ್ಲಿ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿರುವುದನ್ನು ಸ್ಪಷ್ಟವಾಗಿ ಗಮನಿಸಬಹುದು. ಸೂಕ್ಷ್ಮ ಅಥವಾ ‘ಕಳವಿಗೆ ಪೂರಕವಾದ ವಾತಾವರಣವಿರುವ’ ಪ್ರದೇಶಗಳಲ್ಲಿನ ಎಟಿಎಂಗಳಲ್ಲೂ ಭದ್ರತಾ ಸಿಬ್ಬಂದಿ ಕಾಣಸಿಗುತ್ತಿಲ್ಲ. ಕೇಂದ್ರಗಳ ಹೊರಭಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಆದರೆ, ಎಲ್ಲ ಕೇಂದ್ರಗಳಲ್ಲೂ ಈ ವ್ಯವಸ್ಥೆ ಇಲ್ಲ. ಕೇಂದ್ರದ ಬಾಗಿಲಿಗೆ ಅಳವಡಿಸಿರುವ ‘ಕಾರ್ಡ್‌ ಸ್ವೈಪ್‌’ ಲಾಕ್‌ ಸಿಸ್ಟ್‌ಂ ಕೂಡ ಕೆಲಸ ಮಾಡುತ್ತಿಲ್ಲ.

‘ಅಕ್ರಮ’ಕ್ಕೆ ದಾರಿ ಮಾಡಿಕೊಡುವ ಮುನ್ನ ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ, ಜಿಲ್ಲಾಧಿಕಾರಿ ಅಥವಾ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT