ಬುಧವಾರ, ಆಗಸ್ಟ್ 17, 2022
26 °C
ಗೋಕಾಕ ಬಿಇಒ ಉಪಕ್ರಮಕ್ಕೆ ಸಾರ್ವಜನಿಕರ ಸ್ಪಂದನೆ

ಪುಸ್ತಕ ಜೋಳಿಗೆಗೆ ನಿಮ್ಮದೊಂದು ಹೋಳಿಗೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯ ಗೋಕಾಕ ತಾಲ್ಲೂಕಿನ ಬಿಇಒ ಜಿ.ಬಿ. ಬಳಗಾರ ಅವರು ಸಾರ್ವಜನಿಕರಿಂದ ಪುಸ್ತಕಗಳ ಸಂಗ್ರಹಕ್ಕಾಗಿ ಆರಂಭಿಸಿರುವ ‘ಬಿಇಒ ಅವರ ಪುಸ್ತಕ ಜೋಳಿಗೆಗೆ ನಿಮ್ಮದೊಂದು ಪುಸ್ತಕ ಹೋಳಿಗೆ’ ಉಪಕ್ರಮ ಗಮನಸೆಳೆದಿದೆ.

ಬಿಇಒ ಕಚೇರಿಯಲ್ಲಿ ಗ್ರಂಥಾಲಯ ಸ್ಥಾಪಿಸುವ ಉದ್ದೇಶದಿಂದ, ತಮ್ಮಲ್ಲಿರುವ ಹಳೆಯ ಪುಸ್ತಕಗಳನ್ನು ದಾನ ಕೊಡುವಂತೆ ಸಾಮಾಜಿಕ ಮಾಧ್ಯಮ ಮತ್ತು ಶಿಕ್ಷಕರ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಅವರು ಕೋರಿದ್ದರು. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.

ಕೇವಲ 15 ದಿನಗಳಲ್ಲಿ 5ಸಾವಿರಕ್ಕೂ ಹೆಚ್ಚಿನ ಪುಸ್ತಕಗಳು ದಾನಿಗಳಿಂದ ಬಂದಿವೆ. ಶಿಕ್ಷಕರು ಕೂಡ ತಮ್ಮ ಮನೆಗಳಲ್ಲಿದ್ದ ಪುಸ್ತಕಗಳನ್ನು ನೀಡಿದ್ದಾರೆ. ಈ ಮೂಲಕ ಜ್ಞಾನ ಪ್ರಸಾರದ ಮಹತ್ವದ ಕೆಲಸಕ್ಕೆ ಸಾರ್ವಜನಿಕರನ್ನು ತೊಡಗಿಸಿಕೊಳ್ಳುವ ಮಹತ್ವದ ಕಾರ್ಯ ಇಲ್ಲಿ ನಡೆದಿದೆ.

ಪುಸ್ತಕ ನೀಡಿದವರಿಗೆ ಈ ಕಚೇರಿಯಿಂದ ಅಭಿನಂದನಾ ಪತ್ರ ಕೊಡುತ್ತಿದ್ದಾರೆ.

ನಿರೀಕ್ಷೆಗೂ ಮೀರಿ: ‘ನಮ್ಮ ಕಚೇರಿ ಇರುವ ಕಟ್ಟಡದಲ್ಲಿರುವ ಒಂದು ಕೊಠಡಿಯಲ್ಲಿ ಸಾರ್ವಜನಿಕರ ಗ್ರಂಥಾಲಯ ಸ್ಥಾಪಿಸಲು ಯೋಜಿಸಲಾಗಿದೆ. ಇದಕ್ಕಾಗಿ ಸಾರ್ವಜನಿಕರ ಸಹಕಾರ ಕೇಳಿದ್ದೆ. ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಸಿಕ್ಕಿದೆ. ನಾವು 3ಸಾವಿರ ಪುಸ್ತಕ ಸಿಗಬಹುದು ಎಂದುಕೊಂಡಿದ್ದೆವು. ಕೆಲವೇ ದಿನಗಳಲ್ಲಿ ಅವುಗಳ ಸಂಖ್ಯೆ ಐದು ಸಾವಿರ ದಾಟಿದೆ. ‘ನಿಮ್ಮ ಹಳೆಯ ಪುಸ್ತಕ ನಮಗೆ ಹೊಸತು’ ಎನ್ನುವ ಆಶಯಕ್ಕೆ ಶಿಕ್ಷಣ ಪ್ರೇಮಿಗಳು ಸ್ಪಂದಿಸಿದ್ದಾರೆ. ಇನ್ನೂ ಬಹಳ ಮಂದಿ ಕಳುಹಿಸುವುದಾಗಿ ತಿಳಿಸಿದ್ದಾರೆ’ ಎಂದು ಬಳಗಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕಚೇರಿಗೆ ಬರುವ ಶಿಕ್ಷಕರು, ಸಂದರ್ಶಕರು, ಸಾರ್ವಜನಿಕರು ಅಥವಾ ಮಕ್ಕಳು ಪುಸ್ತಕ ಓದಲೆಂದು ಗ್ರಂಥಾಲಯ ಸ್ಥಾಪಿಸಲಾಗುತ್ತಿದೆ. ಸಾರ್ವಜನಿಕರ ಸಹಕಾರದಿಂದಾಗಿ ಇಲ್ಲೀಗ ವೈವಿಧ್ಯಮಯ ಪುಸ್ತಕಗಳು ದೊರೆಯಲಿವೆ. ಶಿಕ್ಷಣ, ಸಾಹಿತ್ಯ, ಆಧ್ಯಾತ್ಮಿಕ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಬೇಕಾಗುವ ಪುಸ್ತಕಗಳು, ಮಕ್ಕಳಿಗೆ ಸಂಬಂಧಿಸಿದವು, ಶಿಕ್ಷಕರಿಗೆ ಅಗತ್ಯವಾಗುವಂಥವು... ಹೀಗೆ ಹಲವು ರೀತಿಯ ಪುಸ್ತಕಗಳು ಜನರಿಂದ ಬಂದಿವೆ.  ವಿಶೇಷವಾಗಿ ಹಿರಿಯ ನಾಗರಿಕರು, ವರ್ತಕರು ಹಾಗೂ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಕೊಟ್ಟಿದ್ದಾರೆ’ ಎಂದು ತಿಳಿಸಿದರು.

ಪ್ರೌಢಶಾಲೆಗೆ

‘ಎಲ್ಲವನ್ನೂ ವಿಷಯವಾರು ವಿಂಗಡಿಸುತ್ತಿದ್ದವೆ. ಮೂರುಸಾವಿರ ಪುಸ್ತಕಗಳನ್ನು ಇಲ್ಲಿಟ್ಟುಕೊಂಡು, ಉಳಿದ ಪುಸ್ತಕಗಳನ್ನು ಸರ್ಕಾರಿ ಪ್ರೌಢಶಾಲೆಗಳಿಗೆ  ಒದಗಿಸಲಾಗುವುದು. ಸರ್ಕಾರದಿಂದಲೂ ಶಾಲೆಗಳಿಗೆ ಪುಸ್ತಕ ನೀಡಲಾಗುತ್ತಿದೆ. ನಾವು ಹೆಚ್ಚುವರಿಯಾಗಿ ವಿವಿಧ ಪುಸ್ತಕ ಕೊಡುವುದರಿಂದ ಅಲ್ಲಿನ ಗ್ರಂಥಾಲಯ ಬಲಗೊಳ್ಳಲಿದೆ. ರಾಷ್ಟ್ರೀಯ ನಾಯಕರ ಜೀವನಚರಿತ್ರೆ ಮೊದಲಾದವುಗಳನ್ನು ನೀಡಲಾಗುವುದು’ ಎಂದರು.

‘ದಾನಿಗಳು ಎಷ್ಟೇ ಸಂಖ್ಯೆಯ ಪುಸ್ತಕಗಳನ್ನು ಕೊಟ್ಟರೂ ಪಡೆಯಲಾಗುವುದು. ಶಾಲೆಗಳಲ್ಲಿ ಮಕ್ಕಳು ಮತ್ತು ಬಿಇಒ ಕಚೇರಿಗೆ ಬರುವ ಸಾರ್ವಜನಿಕರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು ಎನ್ನುವುದು ನನ್ನ ಆಶಯವಾಗಿದೆ’ ಎನ್ನುತ್ತಾರೆ ಅವರು. ಸಂಪರ್ಕಕ್ಕೆ
ಮೊ: 9902715414.

***

ಮಕ್ಕಳು ಕೇವಲ ಅಂಕಕ್ಕಾಗಿ ಓದಬಾರದು. ಜ್ಞಾನ ವೃದ್ಧಿಗಾಗಿ ಓದಬೇಕು. ಹೀಗಾಗಿ, ಶಾಲೆಗಳಲ್ಲಿ ನಿಯಮಿತವಾಗಿ ‘ನಾನು ಓದಿದ ಪುಸ್ತಕ’ ಎಂಬ ಸ್ಪರ್ಧೆ ನಡೆಸುವ ಉದ್ದೇಶವಿದೆ
ಜಿ.ಬಿ. ಬಳಗಾರ, ಬಿಇಒ, ಗೋಕಾಕ

***

ಬಿಇಒ ಅವರ ಉಪಕ್ರಮ ಮಾದರಿಯಾಗಿದೆ. ನಾನೂ ನಮ್ಮ ಮನೆಯಲ್ಲಿದ್ದ 20 ಪುಸ್ತಕಗಳನ್ನು ಗ್ರಂಥಾಲಯಕ್ಕಾಗಿ ನೀಡಿದ್ದೇನೆ
ಎಸ್‌.ಕೆ. ಕೃಷ್ಣಕುಮಾರ್, ಮಾರ್ಕಂಡೇಯ ನಗರ, ಗೋಕಾಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು