ಗುರುವಾರ , ಅಕ್ಟೋಬರ್ 21, 2021
21 °C

ಕೆ.ಚಂದರಗಿ ವಸತಿ ಕ್ರೀಡಾ ಕಾಲೇಜು: ಆಟಕ್ಕೂ ಸೈ, ಪಾಠಕ್ಕೂ ಜೈ

ಚನ್ನಪ್ಪ ಮಾದರ Updated:

ಅಕ್ಷರ ಗಾತ್ರ : | |

Prajavani

ರಾಮದುರ್ಗ: ಸಶಕ್ತ, ಚೈತನ್ಯಯುಕ್ತ ಕ್ರೀಡಾಪಟುಗಳನ್ನು ತಯಾರಿಸಿ ಶೈಕ್ಷಣಿಕವಾಗಿಯೂ ಸುಧಾರಿಸಿ ಉತ್ತಮ ಚಾರಿತ್ರ್ಯವುಳ್ಳ ನಾಗರಿಕರನ್ನು ರೂಪಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕಿನ ಕೆ.ಚಂದರಗಿ ವಸತಿ ಕ್ರೀಡಾ ಕಾಲೇಜು ರಾಜ್ಯದಲ್ಲಿಯೇ ಹೆಸರು ಮಾಡಿದೆ.

ಸಹಕಾರ ತತ್ವದ ತಳಹದಿಯಲ್ಲಿ ಸ್ಥಾಪನೆಗೊಂಡ ದೇಶದ ಪ್ರಥಮ ಕಾಲೇಜು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡ ಈ ಕ್ರೀಡಾ ವಸತಿ ಕಾಲೇಜು ಮಕ್ಕಳಿಗೆ ಕ್ರೀಡೆ ಮತ್ತು ಶಿಕ್ಷಣದಲ್ಲಿ ಹೆಚ್ಚಿನ ಒತ್ತು ನೀಡಿ ಗಮನಸೆಳೆದಿದೆ.

ರಾಜ್ಯದ ವಿವಿಧ ಭಾಗಗಳಿಂದ ಬರುವ ಮಕ್ಕಳಿಗೆ ಪ್ರವೇಶ ಪರೀಕ್ಷೆಗಳನ್ನು ನಡೆಸಿ ದಾಖಲಿಸಿಕೊಳ್ಳಲಾಗುತ್ತಿದೆ. ಇಲ್ಲಿ ಅಧ್ಯಯನ ಪೂರ್ಣಗೊಳಿಸಿದ ನಂತರ ಬಹಳಷ್ಟು ಜನ ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ. ಇದರಿಂದ ಇಲ್ಲಿನವರಿಗಲ್ಲದೇ ರಾಜ್ಯದ ಬಹುತೇಕರಿಗೆ ಇದೊಂದು ಉತ್ತಮ ಶೈಕ್ಷಣಿಕ ಕೇಂದ್ರವಾಗಿ ಪರಿಣಮಿಸಿದೆ.

ಅತ್ಯುತ್ತಮ ಪಠ್ಯಕ್ರಮ ಬೋಧನೆ, ಪೂರ್ಣ ಪ್ರಮಾಣದ ಉಪನ್ಯಾಸಕರು, ತರಬೇತಿ ಪಡೆದ ದೈಹಿಕ ಶಿಕ್ಷಣ ನಿರ್ದೇಶಕರು ಇಲ್ಲಿರುವುದರಿಂದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ. ಜೊತೆಗೆ ಆಟದಲ್ಲೂ ರಾಷ್ಟ್ರಮಟ್ಟದ ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಾಧನೆ ತೋರುತ್ತಿದ್ದಾರೆ.

ಕಾಲೇಜಿನಲ್ಲಿ 6ನೇ ತರಗತಿಯಿಂದ ಪಿಯುಸಿವರೆಗಿನ ತರಗತಿಗಳು ನಡೆಯುತ್ತಿವೆ. ಒಟ್ಟು 600 ವಿದ್ಯಾರ್ಥಿಗಳು, 80 ಉಪನ್ಯಾಸಕರು ಇದ್ದಾರೆ. ಇತ್ತೀಚೆಗೆ ಧಾರವಾಡದ ಹಂಚಿನಮನಿ ಕಾಲೇಜಿನ ಸಹಭಾಗಿತ್ವದಲ್ಲಿ ಪಿಯು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ.

ರಾಮದುರ್ಗ ತಾಲ್ಲೂಕು ತೊರಗಲ್‌ ಮಹಾರಾಜರ ಬೇಸಿಗೆಯ ವಾಯುವಿಹಾರಕ್ಕೆಂದು ನಿರ್ಮಿಸಿದ ಪುರಾತನ ಕಾಲದ ಕಟ್ಟಡದಲ್ಲಿ ಆರಂಭಗೊಂಡ ಕಾಲೇಜು ನೂರು ಎಕರೆ ವಿಸ್ತೀರ್ಣದ ಜಮೀನು ಹೊಂದಿದೆ. ಅದರಲ್ಲಿ ಸುಸಜ್ಜಿತ ವಸತಿ ಗೃಹಗಳು, ಬೋಧನಾ ಕೊಠಡಿಗಳಿವೆ. 700 ಮಂದಿ ಒಟ್ಟಿಗೆ ಸೇರಬಹುದಾದಷ್ಟು ಸಾಮರ್ಥ್ಯದ ಭೋಜನಾಲಯವಿದೆ. ಅದರ ಮೇಲೆ ವಿಶಾಲವಾದ ಗ್ರಂಥಾಲಯ ನಿರ್ಮಿಸಲಾಗಿದೆ. ಹೊರ ಮತ್ತು ಒಳಾಂಗಣ ಕ್ರೀಡಾಂಗಣಗಳು, ಈಜುಕೊಳ ಸೇರಿದಂತೆ ಕ್ರೀಡಾ ಬೆಳವಣಿಗೆಗೆ ಬೇಕಿರುವ ಎಲ್ಲ ಸೌಲಭ್ಯಗಳನ್ನು ಮಾಡಿಕೊಳ್ಳಲಾಗಿದೆ. ಕ್ಯಾಂಪಸ್‌ ಜಮೀನಿನಲ್ಲೇ ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಬೆಳೆದು ಬಳಸಲಾಗುತ್ತಿದೆ. ಮಕ್ಕಳಿಗೆ ಹಣ್ಣುಗಳನ್ನು ವಿತರಿಸಲಾಗುತ್ತಿದೆ. ಮಕ್ಕಳಿಗೆ ಹಾಲು, ಮೊಟ್ಟೆ ಪೂರೈಕೆಯನ್ನೂ ಮಾಡಲಾಗುತ್ತಿದೆ.

ಕ್ರೀಡೆಗೆ ಮಾತ್ರವೇ ಪ್ರಾಧಾನ್ಯತೆ ನೀಡದೆ ವಿದ್ಯಾರ್ಥಿಗಳ ಸಮಗ್ರ ಪ್ರಗತಿಗೂ ಆದ್ಯತೆ ಕೊಡಲಾಗುತ್ತಿದೆ. ಪ್ರತಿ ವರ್ಷದ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಇಲ್ಲಿನ ಮಕ್ಕಳು ತೋರುತ್ತಿದ್ದಾರೆ. ಅಲ್ಲದೇ ಕ್ರೀಡೆಯಲ್ಲೂ ಉತ್ತಮ ಪ್ರದರ್ಶನ ನೀಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಪ್ರಸ್ತುತ ಬಾಲಕರಿಗೆ ಮಾತ್ರವೇ ಇಲ್ಲಿ ಪ್ರವೇಶಕ್ಕೆ ಅವಕಾಶವಿದೆ. ಬಾಲಕಿಯರಿಗೂ ಅವಕಾಶ ಕೊಡಬೇಕು ಎನ್ನುವ ಬೇಡಿಕೆ ಪೋಷಕರದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು