ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ ಸ್ತಂಭ ಕಸಿದ ಕೋವಿಡ್

ಮೂವರು ಮಕ್ಕಳ ಪೋಷಣೆ ಹೊಣೆ ತಾಯಿ ಹೆಗಲಿಗೆ
Last Updated 16 ಜೂನ್ 2021, 12:43 IST
ಅಕ್ಷರ ಗಾತ್ರ

ಮೂಡಲಗಿ (ಬೆಳಗಾವಿ ಜಿಲ್ಲೆ): ಕುಟುಂಬದ ಆಧಾರ ಸ್ತಂಭವಾಗಿದ್ದ ತುಕ್ಕಾನಟ್ಟಿ ಗ್ರಾಮದ ಯಲ್ಲಪ್ಪ ಲಕ್ಷ್ಮಣ ಮರ್ದಿ ಕೋವಿಡ್ –19ನಿಂದ ಮೃತಪಟ್ಟಿದ್ದು ತಾಯಿ, ಪತ್ನಿ, ಮೂವರು ಮಕ್ಕಳು ಕಂಗಾಲಾಗಿದ್ದಾರೆ.

ಯಲ್ಲಪ್ಪ ಕೃಷಿ ಕೂಲಿ, ವಾಹನ ಚಾಲನೆ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಸರೆ ಆಗಿದ್ದರು. ಅವರ ಅಕಾಲಿಕ ಮರಣದಿಂದ ಕುಟುಂಬವು ಕಣ್ಣೀರಿಡುವಂತಾಗಿದೆ. ಮಕ್ಕಳು ಏಕ ಪೋಷಕರ ಆರೈಕೆಯಲ್ಲಿದ್ದಾರೆ.

‘ಕೆಮ್ಮು, ಸುಸ್ತು, ಜ್ವರ ಬಂತರೀ ತುಕ್ಕಾನಟ್ಟಿಯಲ್ಲಿ ತೋರಿಸಿದಾಗ ಕೋವಿಡ್ ಐತಿ ಅಂದ್ರ. ಗೋಕಾಕದಾಗ ಸ್ಕ್ಯಾನ್ ಮಾಡಿಸಿದಾಗ ಕೋವಿಡ್ ಖಾತ್ರಿ ಆತರೀ. ಗೋಕಾಕ ಸರ್ಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿ ಹಾಸಿಗೆ ಮತ್ತು ಆಮ್ಲಜನಕ ದೊರೆಯಲಿಲ್ಲರೀ. ಆಮ್ಲಜನಕ ಬೇಕಾಗಿತ್ತರೀ, ಅದಕ್ಕ ಸರ್ಕಾರಿ ಆಸ್ಪತ್ರೆಗಾಗಿ ಕಾಯದೆ ಖಾಸಗಿ ಆಸ್ಪತ್ರೆಗೆ ಸೇರಿಸಿದಿವಿರೀ' ಎಂದು ಪತ್ನಿ ಶಾಂತವ್ವ ಎದುರಿಸಿದ ಕಷ್ಟವನ್ನು ತಿಳಿಸಿದರು.

‘ಏನೆಲ್ಲ ಪ್ರಯತ್ನ ಮಾಡಿದರೂ ಖಾಸಗಿ ಆಸ್ಪತ್ರೆ ಸೇರಿಸಿದ ಒಂದೇ ದಿನದಾಗ ಸಾವನ್ನಪ್ಪಿದರೀ. ಮರಳಿ ಮನಿಗೆ ಬರಲಿಲ್ಲರೀ’ ಎಂದು ಕಣ್ಣೀರಾದರು.

65 ವಯಸ್ಸಿನ ಯಲ್ಲಪ್ಪನ ತಾಯಿ ಸತ್ಯವ್ವ, 7ನೇ ತರಗತಿ ಓದುತ್ತಿರುವ ಮಗಳು ಐಶ್ವರ್ಯಾ, 5ನೇ ತರಗತಿಯಲ್ಲಿರುವ ಮಗ ಅಕ್ಷಯ ಮತ್ತು 4ನೇ ತರಗತಿಯಲ್ಲಿರುವ ಲಕ್ಷ್ಮಣ ಇವರ ಶಿಕ್ಷಣ ಸೇರಿದಂತೆ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಪತ್ನಿ ಶಾಂತವ್ವ ಹೆಗಲಿಗೆ ಬಂದಿದೆ. ‘ನನ್ನಂಗ ನನ್ನ ಮಕ್ಕಳು ಕೂಲಿ ಮಾಡಬಾರದು. ಅವರಿಗೆ ಸಾಲೀ ಕಲಿಸ್ತೀನಿ ಎನ್ನುವುದು ಗಂಡನ ಬಾಳ ಇಚ್ಛಾ ಆಗಿತ್ತರೀ. ಈಗ ಅವರ ಇಲ್ಲ ಆಗಿದಾರೀ’ ಎಂದು ತಿಳಿಸಿ ಕಣ್ತುಂಬಿಕೊಂಡರು.

ಬಹಳ ಸಾಲ: ಹೋದ ವರ್ಷ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ₹ 22 ಲಕ್ಷ ಸಾಲ ಮಾಡಿ ಟಿಪ್ಪರ್ ಖರೀದಿಸಿದ್ದ ಯಲ್ಲಪ್ಪ, ಜೀವನದಲ್ಲಿ ಮುಂದೆ ಬರಬೇಕೆಂಬ ಕನಸು ಕಂಡಿದ್ದರು. ಆದರೆ ಕೊರೊನಾ ಅಟ್ಟಹಾಸದಲ್ಲಿ ಕಳೆದ ವರ್ಷವೂ ಟಿಪ್ಪರ್‌ಗೆ ಬಾಡಿಗೆ ಸಿಗದೆ ಬಡ್ಡಿ ಸೇರಿ ಸಾಲದ ಹೊರೆ ಬೆಟ್ಟದಷ್ಟಾಗಿದೆ. ಕೋವಿಡ್ 2ನೇ ಅಲೆಯ ಪ್ರಾರಂಭದಲ್ಲಿಯೇ ಅಂದರೆ ಒಂದೂವರೆ ತಿಂಗಳ ಹಿಂದೆಯೇ ಯಲ್ಲಪ್ಪ ಕೋವಿಡ್‌ಗೆ ಬಲಿಯಾಗಿದ್ದಾರೆ. ಟಿಪ್ಪರ್‌ ಮಾಲೀಕನಿಲ್ಲದೆ ನಿಂತಿದೆ.

‘ಹೋದ ವರ್ಷ ಗಾಡಿ ತಗೋಂಡಾಗಿನಿಂದ ಕೆಲಸ ಸಿಗದೆ ಲುಕ್ಸಾನ್‌ ಆಗೈತ್ರೀ. ನಮಗ ಕೋವಿಡ್‌ ಹೈರಾಣ ಮಾಡಿತ್ತೀರೀ‘ ಎಂದು ಪತ್ನಿ ತಿಳಿಸಿದರು.

ಆಸ್ಪತ್ರೆಯಲ್ಲಿ ಒಂದೇ ದಿನಕ್ಕೆ ₹ 1.20 ಲಕ್ಷ ಖರ್ಚನ್ನು ಸಹೋದರ ಸಂಬಂಧಿಕರು ನಿಭಾಯಿಸಿದ್ದಾರೆ. 'ಯಲ್ಲಪ್ಪನನ್ನು ಉಳಿಸಬೇಕಂತ ಸಂಬಂಧಿಕರು, ಗೆಳೆಯರೆಲ್ಲ ಕೂಡಿ ಬಾಳ ಪ್ರಯತ್ನ ಮಾಡಿದ್ದೀವರೀ’ ಸೋದರ ಸಂಬಂಧಿ ಮತ್ತು ತುಕ್ಕಾನಟ್ಟಿ ಗ್ರಾ.ಪಂ. ಅಧ್ಯಕ್ಷ ಕುಮಾರ ಮರ್ದಿ ಹೇಳಿದರು.

ಈ ಕುಟುಂಬ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದೆ. ಸಂಪರ್ಕಕ್ಕೆ ಮೊ: 9008850370.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT