ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ದಿನವಷ್ಟೆ ಕಿತ್ತೂರು ಉತ್ಸವ; ಪೂರ್ವ ಸಿದ್ಧತಾ ಸಭೆಯಲ್ಲಿ ನಿರ್ಣಯ

Last Updated 30 ಸೆಪ್ಟೆಂಬರ್ 2020, 14:31 IST
ಅಕ್ಷರ ಗಾತ್ರ

ಬೆಳಗಾವಿ: ಈ ಬಾರಿಯ ಕಿತ್ತೂರು ಉತ್ಸವವನ್ನು ಕೋವಿಡ್-19 ಕಾರಣದಿಂದ ಅ. 23ರಂದು ಒಂದು ದಿನ ಮಾತ್ರ ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆಸಲು ನಿರ್ಧರಿಸಲಾಗಿದೆ.

ಚನ್ನಮ್ಮನ ಕಿತ್ತೂರಿನ ವೀರಭದ್ರೇಶ್ವರ ಕಲ್ಯಾಣಮಂಟಪದಲ್ಲಿ ಬುಧವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಈ ವಿಷಯ ಪ್ರಕಟಿಸಿದರು.

‘ಪ್ರಬುದ್ಧತೆ ಮೆರೆದ ಸಾರ್ವಜನಿಕರಿಂದ ವ್ಯಕ್ತವಾದ ಅಭಿಪ್ರಾಯದಂತೆ ಈ ತೀರ್ಮಾನಕ್ಕೆ ಬರಲಾಗಿದೆ’ ಎಂದು ತಿಳಿಸಿದರು.

‘ಚನ್ನಮ್ಮ ಸ್ವಾಭಿಮಾನದ ಸಂಕೇತ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಸಾರ್ವಜನಿಕರ ಆರೋಗ್ಯ ಮತ್ತು ಜೀವ ರಕ್ಷಣೆ ಮುಖ್ಯವಾಗಿದೆ. ಆದ್ದರಿಂದ ಈ ಬಾರಿ, ಮೂರು ದಿನಗಳ ಅದ್ಧೂರಿ ಉತ್ಸವದ ಬದಲಿಗೆ ಸಂಪ್ರದಾಯದಂತೆ ಜ್ಯೋತಿ ಯಾತ್ರೆ, ವಿಜಯದ ಸಂಕೇತವಾದ ದೀಪೋತ್ಸವ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರಳವಾಗಿ ನಡೆಸಲಾಗುವುದು’ ಎಂದು ಹೇಳಿದರು.

ಸಹಕಾರ ನೀಡಬೇಕು: ‘ಕೊರೊನಾದಿಂದ ಮುಕ್ತರಾಗುವ ಕಡೆಗೆ ನಾವು ಹೆಜ್ಜೆ ಇಟ್ಟಿದ್ದೇವೆ. ಇಂತಹ ಸಂದರ್ಭದಲ್ಲಿ ಉತ್ಸವವನ್ನು ಸರಳವಾಗಿ ಆಚರಿಸುವುದು ಸೂಕ್ತವಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹಾಂತೇಶ, ‘24 ವರ್ಷಗಳಿಂದ ಕಿತ್ತೂರು ಉತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಾ ಬರಲಾಗಿದೆ. ಆದರೆ ಈ ವರ್ಷ ಕೊರೊನಾದಿಂದ ಜನರನ್ನು ರಕ್ಷಿಸಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಒಂದು ದಿನಕ್ಕೆ ಸೀಮಿತಗೊಳಿಸಿ ಸರಳವಾಗಿ ಆಚರಿಸೋಣ’ ಎಂದರು.

‘ಹೋದ ವರ್ಷ ಭಾರಿ ಪ್ರವಾಹದ ನಡುವೆಯೂ ಮೂರು ದಿನಗಳವರೆಗೆ ವಿಜೃಂಭಣೆಯಿಂದ ಆಚರಿಸಿದೆವು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯ ಸೇರಿದಂತೆ ಅನೇಕ ಮಹನೀಯರನ್ನು ಕಳೆದುಕೊಂಡಿರುವ ಈ ಸಂದರ್ಭದಲ್ಲಿ ಆಡಂಬರದ ಉತ್ಸವ ಆಯೋಜಿಸುವುದು ಬೇಡ ಎಂಬ ತೀರ್ಮಾನಕ್ಕೆ ಬರಲಾಗಿದೆ’ ಎಂದು ಹೇಳಿದರು.

ಮುಂದಿನ ವರ್ಷ ಅದ್ಧೂರಿಯಾಗಿ:

‘ಮುಂದಿನ ವರ್ಷ ಬರಲಿರುವ 25ನೇ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು’ ಎಂದು ಭರವಸೆ ನೀಡಿದರು.

ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ‘ಸರ್ಕಾರದ ಮಾರ್ಗಸೂಚಿ ಪ್ರಕಾರ ಸರಳವಾಗಿ ಉತ್ಸವ ಆಚರಿಸಬೇಕು. ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ನಡೆಸಬೇಕು’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ನಿಚ್ಚಣಿಕಿ ಮಠದ ಪಂಚಾಕ್ಷರಿ ಸ್ವಾಮೀಜಿ, ‘ಚನ್ನಮ್ಮ ಜ್ಯೋತಿ ಬರಮಾಡಿಕೊಂಡು ಒಂದು ದಿನದ ಉತ್ಸವ ಆಚರಿಸಬೇಕು. ಸಂಜೆ 5ರ ಒಳಗೆ ಕಾರ್ಯಕ್ರಮ ಮುಗಿಸುವುದು ಸೂಕ್ತ’ ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚನ್ನಮ್ಮ ಹೊಸಮನಿ, ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ್ ಎಚ್.ವಿ., ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಭಜಂತ್ರಿ, ಉಪ ವಿಭಾಗಾಧಿಕಾರಿ ಅಶೋಕ ತೇಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT