ಬೆಳಗಾವಿ: ವಾಸ್ಕೊ– ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸೋಮವಾರ ಪ್ರಜ್ಞೆ ತಪ್ಪಿದ್ದ ಎಂಟು ಮಂದಿಯ ಆರೋಗ್ಯದಲ್ಲಿ ತುಸು ಸುಧಾರಣೆ ಕಂಡಿದೆ. ಆರು ಮಂದಿಗೆ ಪ್ರಜ್ಞೆ ಮರಳಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇನ್ನಿಬ್ಬರು ಪ್ರಜ್ಞಾಹೀನರಾಗಿದ್ದು, ಅವರಿಗೆ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಈ ಎಂಟೂ ಜನ ಮಧ್ಯಪ್ರದೇಶದ ಖಂಡ್ವಾ ಎಂಬ ಊರಿನವರು ಎಂದು ಗೊತ್ತಾಗಿದೆ. ಎಲ್ಲರೂ ಅಂದಾಜು 25ರಿಂದ 30 ವರ್ಷ ವಯಸ್ಸಿನವರಿದ್ದು, ಗೋವಾದಲ್ಲಿ ಕಾರ್ಮಿಕರಾಗಿದ್ದರು. ಹಬ್ಬದ ಕಾರಣ ವಾಸ್ಕೊ– ನಿಜಾಮುದ್ದೀನ್ ರೈಲಿನ ಜನರಲ್ ಬೋಗಿಯಲ್ಲಿ ತಮ್ಮ ಊರಿಗೆ ಹೊರಟಿದ್ದರು.
ಗೋವಾರ– ಕರ್ನಾಟಕದ ಗಡಿಗೆ ರೈಲು ಬಂದಾಗ ಅಪರಿಚಿತ ವ್ಯಕ್ತಿಗಳು ಇವರಿಗೆ ಚಾಕೊಲೇಟ್, ಬಿಸ್ಕತ್ತು ಹಾಗೂ ಕುರುಕುರೆ ತಿನ್ನಲು ಕೊಟ್ಟಿದ್ದರು. ಅದನ್ನು ತಿಂದ ಕೆಲವೇ ನಿಮಿಷಗಳಲ್ಲಿ ಎಂಟೂ ಜನ ಪ್ರಜ್ಞೆ ತಪ್ಪಿದರು. ಬಹಳಷ್ಟು ಸಮಯದ ಬಳಿಕವೂ ಅವರು ಎಚ್ಚರವಾಗದ್ದನ್ನು ಕಂಡ ಸಹ ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು.
ರೈಲು ರಾತ್ರಿ ಬೆಳಗಾವಿಗೆ ತಲುಪಿದಾಗ ರಕ್ಷಣೆಗೆ ಮುಂದಾದ ರೈಲ್ವೆ ಪೊಲೀಸರು, ಎಂಟೂ ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಘಟನೆ ನಡೆದ 28 ತಾಸುಗಳ ಬಳಿಕ ಆರು ಮಂದಿ ಕಣ್ಣು ತೆರೆದಿದ್ದಾರೆ. ಆದರೆ, ಮಾತನಾಡುವಷ್ಟು ಚೈತನ್ಯ ಬಂದಿಲ್ಲ. ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾಗಿ ರೈಲ್ವೆ ಪಿಎಸ್‌ಐ ವೆಂಕಟೇಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಎಂಟೂ ಮಂದಿ ಚೇತರಿಸಿಕೊಂಡ ನಂತರ ಅವರಿಂದ ಮಾಹಿತಿ ಪಡೆಯಲಾಗುವುದು. ಬಳಿಕ ತನಿಖೆ ನಡೆಯಲಿದೆ. ಗೋವಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದರಿಂದ ಪ್ರಕರಣವನ್ನು ಗೋವಾ ಪೊಲೀಸರಿಗೆ ಒಪ್ಪಿಸುವ ವಿಚಾರವಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.