ಗುರುವಾರ , ಜೂನ್ 17, 2021
22 °C

ಕಾಳಸಂತೆಯಲ್ಲಿ ‘ರೆಮ್‌ಡಿಸಿವಿರ್‌’ ಮಾರಾಟ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಳಸಲಾಗುವ ‘ರೆಮ್‌ಡಿಸಿವಿರ್’ ಔಷಧಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ನಗರ ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಸದ್ಯ ಇಲ್ಲಿನ ಶಾಹೂನಗರದ ಸಮರ್ಥ ಗಲ್ಲಿ ನಿವಾಸಿ, ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿಯ ರಾಮಾಪೂರದ ಮಂಜುನಾಥ ದಾನವಾಡಕರ (35) ಹಾಗೂ ಶಿವಾಜಿನಗರದ ನಿವಾಸಿಯಾಗಿರುವ ಬೈಲಹೊಂಗಲ ತಾಲ್ಲೂಕು ನಯಾನಗರದವರಾದ ಸಂಜೀವ ಚಂದ್ರಶೇಖರ ಮಾಳಗಿ (33) ಬಂಧಿತರು.

ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್‌ ಅವರ ಸೂಚನೆಯಂತೆ ಕಾರ್ಯಾಚರಣೆ ಆರಂಭಿಸಿರುವ ಸಿಸಿಬಿ ಇನ್‌ಸ್ಪೆಕ್ಟರ್‌ ನಿಂಗನಗೌಡ ಪಾಟೀಲ ಅವರು ಆರೋಪಿಗಳನ್ನು ಬಂಧಿಸಿದ್ದಾರೆ. ತಮ್ಮ ಸಿಬ್ಬಂದಿ ಮೂಲಕ ಸಾಮಾನ್ಯ ನಾಗರಿಕರಂತೆ ಮೊಬೈಲ್‌ ಫೋನ್‌ನಲ್ಲಿ ಮಾತನಾಡಿ ಕುಂಟುಂಬ ಸದಸ್ಯರಿಗಾಗಿ ರೆಮ್‌ಡಿಸಿವರ್ ಔಷಧಿ ಬೇಕೆಂದು ಕೇಳಿಸಿದ್ದರು. ಕೇಳಿದಷ್ಟು ಹಣವನ್ನು ಆರೋಪಿಗಳ ಖಾತೆಗೆ ವರ್ಗಾಯಿಸಿ, ನಗರದ ಹೋಟೆಲ್‌ವೊಂದಕ್ಕೆ ಬರಲು ತಿಳಿಸಿ ಬಲೆಗೆ ಬೀಳಿಸಿದ್ದಾರೆ. ಆರೋಪಿಗಳು ಚುಚ್ಚುಮದ್ದನ್ನು ಅಕ್ರಮವಾಗಿ ಮಾರುತ್ತಿದ್ದುದ್ದನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅವರಿಬ್ಬರೂ ಖಾಸಗಿ ಆಸ್ಪತ್ರೆಗಳಲ್ಲಿ ಸ್ಟಾಫ್ ನರ್ಸ ಆಗಿ ಕೆಲಸ ಮಾಡುತ್ತಿದ್ದಾರೆ. ₹ 3,400 ಬೆಲೆಯ ಔಷಧಿಯನ್ನು ₹ 25ಸಾವಿರದಿಂದ ₹ 30ಸಾವಿರಕ್ಕೆ ಕಾಳಸಂತೆಯಲ್ಲಿ ಮಾರಿ ಹಣ ಗಳಿಸುವ ಒಳ ಸಂಚು ರೂಪಿಸಿದ್ದರು. ಅವರಿಂದ ₹ 11,600 ಮೌಲ್ಯದ 3 ಔಷಧಿಯ ಬಾಟಲಿಗಳು, ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನ ಮತ್ತು 2 ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಅವರ ವಿರುದ್ಧ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

‘ರೆಮ್‌ಡಿಸಿವಿರ್‌ ಔಷಧಿ ಅಕ್ರಮವಾಗಿ ಮಾರುವುದು ಕಂಡುಬಂದಲ್ಲಿ, ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ನಗರ ಪೊಲೀಸ್ ಆಯುಕ್ತರು ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು