ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿ ಜೋಡೆತ್ತು ಸಾವು

Last Updated 5 ಜುಲೈ 2019, 14:32 IST
ಅಕ್ಷರ ಗಾತ್ರ

ಅಥಣಿ: ತಾಲ್ಲೂಕಿನ ನಂದೇಶ್ವರ ಗ್ರಾಮದ ರೈತ ಗುಂಡೂರಾವ ಯಲ್ಲಪ್ಪ ಲಾಲಸಿಂಗಿ ಅವರಿಗೆ ಸೇರಿದ ಜೋಡೆತ್ತುಗಳು ಕೃಷ್ಣಾ ನದಿ ನೀರಿನ ರಭಸದಲ್ಲಿ ಕೊಚ್ಚಿ ಹೋಗಿ ಶುಕ್ರವಾರ ಮಧ್ಯಾಹ್ನ ಸಾವಿಗೀಡಾಗಿವೆ. ದಡದಲ್ಲಿ ಮೇಯಲು ಬಿಟ್ಟಿದ್ದಾಗ, ನೀರು ಕುಡಿಯಲು ಇಳಿದಾಗ ಘಟನೆ ನಡೆದಿದೆ.

ಒಂದರ ಹಗ್ಗ ಇನ್ನೊಂದಕ್ಕೆ ಸಿಕ್ಕಿಕೊಂಡು ಕುತ್ತಿಗೆಗೆ ಬಿಗಿದ ಪರಿಣಾಮ ಅವು ನೀರಲ್ಲಿ ಮುಳುಗಿವೆ. ಗಮನಿಸಿದ ರೈತ ಜೋರಾಗಿ ಚೀರಾಡಿ ಜನರನ್ನು ಕರೆಯುವುದರಲ್ಲಿ ಅವು ಕೊಚ್ಚಿಕೊಂಡು ಹೋಗಿವೆ. ನೀರು ಕುಡಿದು, ಉಸಿರುಗಟ್ಟಿ ಅಸುನೀಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಅವುಗಳು ₹ 2 ಲಕ್ಷ ಬೆಲೆ ಬಾಳುತ್ತಿದ್ದವು ಎಂದು ಗುಂಡೂರಾವ ಅಳಲು ತೋಡಿಕೊಂಡರು.

ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಯ ಒಳ ಹರಿವು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಒಳ ಹರಿವು ಹೆಚ್ಚಾಗಿದ್ದರಿಂದ, ಸ್ಥಳೀಯರು ಎತ್ತುಗಳನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಆದರೆ, ಬಳಿಕ ಕಳೆಬರಗಳನ್ನು ಮೇಲೆತ್ತಲು ಯಶಸ್ವಿಯಾದರು.

‘ಬೇಸಿಗೆ ಇದ್ದಾಗ ಎಷ್ಟು ಕೇಳಿಕೊಂಡರೂ ಮಹಾರಾಷ್ಟ್ರ ಸರ್ಕಾರವು ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಿಲ್ಲ. ಆದರೆ, ಈಗ ಮಳೆ ಹೆಚ್ಚಾದ್ದರಿಂದ ನೀರು ಹರಿಸುತ್ತಿದೆ. ಇದರಿಂದ ಜನ–ಜಾನುವಾರುಗಳ ಪ್ರಾಣಕ್ಕೆ ಹಾನಿಯಾಗುತ್ತಿದೆ. ಬೆಳೆ ಹಾನಿಯೂ ಸಂಭವಿಸುತ್ತಿದೆ. ಹೀಗಾಗಿ, ನಷ್ಟಕ್ಕೆ ಒಳಗಾದವರಿಗೆ ಮಹಾರಾಷ್ಟ್ರ ಸರ್ಕಾರವೇ ಪರಿಹಾರ ನೀಡಬೇಕು’ ಎಂದು ಮುಖಂಡ ಶಿವಾನಂದ ಪಾಟೀಲ ಆಗ್ರಹಿಸಿದರು.

ಸತ್ತಿ ಪಶು ಆಸ್ಪತ್ರೆ ಡಾ.ಬಿ.ಎಸ್. ಅಜ್ಜನಗಿ ಮರಣೋತ್ತರ ಪರೀಕ್ಷೆ ನಡೆಸಿದರು. ಡಾ.ಎಸ್.ಕೆ. ಪೂಜಾರ, ಪಿಡಿಒ ಸಿ.ಎಲ್. ಶಿರಗಾರ, ಗ್ರಾಮ ಲೆಕ್ಕಾಧಿಕಾರಿ ಆರ್.ಪಿ. ಛತ್ರಿ, ಮುಖಂಡರಾದ ಮುರಗಯ್ಯ ಹಿರೇಮಠ, ಅಶೋಕ ಲಾಲಸಿಂಗಿ, ಸದಾಶಿವ ಲಾಲಸಿಂಗಿ, ಮಲ್ಲಪ್ಪ ಲಾಲಸಿಂಗಿ ಇದ್ದರು.

‘ಎತ್ತುಗಳನ್ನು ಕಳೆದುಕೊಂಡ ರೈತ ಗುಂಡೂರಾವ ಅವರಿಗೆ ಸರ್ಕಾರದಿಂದ ಪರಿಹಾರ ಕೊಡಿಸಲು ಪರಿಶೀಲಿಸಲಾಗುವುದು’ ಎಂದು ತಹಶೀಲ್ದಾರ್‌ ಎಂ.ಎನ್. ಬಳಿಗಾರ ಪ‍್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT