ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಕಲುಷಿತ ನೀರು ಕುಡಿದು ಇಬ್ಬರ ಸಾವು

ಬೆಳಗಾವಿ ಜಿಲ್ಲೆ ಮುದೇನೂರ ಗ್ರಾಮದಲ್ಲಿ 186 ಮಂದಿ ಅಸ್ವಸ್ಥ
Last Updated 27 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ರಾಮದುರ್ಗ (ಬೆಳಗಾವಿ): ತಾಲ್ಲೂಕಿನ ಮುದೇನೂರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಇಬ್ಬರು ಮೃತಪಟ್ಟಿದ್ದಾರೆ. 12 ಬಾಲಕರು, 8 ಬಾಲಕಿಯರು ಸೇರಿ 186 ಮಂದಿ ಅಸ್ವಸ್ಥ ರಾಗಿದ್ದಾರೆ.

ಇವರಲ್ಲಿ ಆರೋಗ್ಯ ಸ್ಥಿತಿ ಗಂಭೀರ ವಾಗಿರುವ 94 ಮಂದಿಯನ್ನು ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉಳಿದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.

ಇದೇ ಊರಿನ ಸರಸ್ವತಿ ನಿಂಗಪ್ಪ ಹಾವಳ್ಳಿ (70) ಅವರು ಅ.23ರಂದು, ಶಿವಪ್ಪ ಯಂಡಿಗೇರಿ (70) ಬುಧವಾರ ಮೃತಪಟ್ಟರು. ಅಸ್ಪತ್ರೆಗೆ ದಾಖಲಾಗಿರುವ ಹಲವರಿಗೆ ಗುರುವಾರವು ವಾಂತಿ– ಭೇದಿ ಬಾಧಿಸಿದೆ. ತೀವ್ರ ನಿತ್ರಾಣ ಗೊಂಡಿದ್ದ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಲಿಸಲಾಗಿದೆ.

ಕುಡಿಯುವ ನೀರು ಪೂರೈಕೆ ಕೊಳವೆಯಲ್ಲಿ ಚರಂಡಿ ನೀರು ಸೇರಿಕೊಂಡಿದ್ದೇ ಸಾವಿಗೆ ಕಾರಣ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕೋಣಿ ಸ್ಪಷ್ಟಪಡಿಸಿದ್ದಾರೆ.

ಗ್ರಾಮದಲ್ಲಿ ಮುಂಜಾಗ್ರತೆಯಾಗಿ ಎಂಟು ವೈದ್ಯರು, 33 ಸಿಬ್ಬಂದಿಯ ತಂಡ ಬೀಡುಬಿಟ್ಟಿದ್ದು, ಮೂರು ಆಂಬುಲೆನ್ಸ್‌ ಗಳನ್ನೂ ನಿಯೋಜಿಸಲಾಗಿದೆ.

5 ದಿನಗಳ ಹಿಂದೆಯೇ ಕೆಲವರಲ್ಲಿ ವಾಂತಿ–ಭೇದಿ ಕಾಣಿಸಿಕೊಂಡಿತ್ತು. ಇದೇ ಕಾರಣದಿಂದ ಸರಸ್ವತಿ ನಿಧನರಾದರು. ಆದರೆ, ಗ್ರಾಮ ಪಂಚಾಯಿತಿಯವರು ಅದನ್ನು ವಯೋಸಹಜ ಸಾವು ಎಂದು ಪರಿಗಣಿಸಿ ನಿರ್ಲಕ್ಷ್ಯಿಸಿದರು. ಅ. 25 ಹಾಗೂ 26ರಂದು ಏಕಾಏಕಿ ಕಾಯಿಲೆ ಉಲ್ಬಣವಾಗಿದೆ. ನಂತರ ಹಲವರು ಕುಟುಂಬ ಸಮೇತ ಬಂದು ಆಸ್ಪತ್ರೆ ದಾಖಲಾಗಿದ್ದಾರೆ.

₹ 10 ಲಕ್ಷ ಪರಿಹಾರ: ಮೃತ ಶಿವಪ್ಪ ಯಂಡಿಗೇರಿ (70) ಅವರ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ₹ 10 ಲಕ್ಷ ಪರಿಹಾರ ಘೋಷಿಸಿದ್ದಾರೆ.

‘ಆದರೆ, ಸರಸ್ವತಿ ಅವರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಯಾವುದೇ ಮಾತು ಹೇಳಿಲ್ಲ. ಸರಸ್ವತಿ ಕೂಡ ವಾಂತಿ– ಭೇದಿಯಿಂದಲೇ ಸತ್ತಿದ್ದು, ಪರಿಹಾರ ಒದಗಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT