ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಕ್ಷೇತ್ರದಿಂದ ಪ್ರಕಾಶ ಹುಕ್ಕೇರಿ ಸ್ಪರ್ಧಿಸಿದ್ದು ಸರಿಯಲ್ಲ: ಉಮೇಶ ಕತ್ತಿ

Last Updated 26 ಮೇ 2022, 12:33 IST
ಅಕ್ಷರ ಗಾತ್ರ

ಬೆಳಗಾವಿ: ‘ವಾಯವ್ಯ ಶಿಕ್ಷಕರ ಮತಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಅವರು ಸ್ಪರ್ಧಿಸಿದ್ದು ಸರಿಯಲ್ಲ. ಅವರೊಬ್ಬ ಒಳ್ಳೆಯ ರಾಜಕಾರಣಿ ಇರಬಹುದು. ಆದರೆ, ಅವರು ಶಿಕ್ಷಕರಲ್ಲ. ಹೀಗಾಗಿ ಕಣಕ್ಕಿಳಿಯಬೇಕಿರಲಿಲ್ಲ’ ಎಂದು ಆಹಾರ ಸಚಿವ ಉಮೇಶ ಕತ್ತಿ ಹೇಳಿದರು.

ವಿಧಾನಪರಿಷತ್‌ ಚುನಾವಣೆ ಬಿಜೆಪಿ ಅಭ್ಯರ್ಥಿಗಳ ಪ್ರಚಾರಾರ್ಥ ಇಲ್ಲಿನ ಸದಾಶಿವನಗರದ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಶಿಕ್ಷಕರ ಮತಕ್ಷೇತ್ರದಿಂದ ಶಿಕ್ಷಕರು ಸ್ಪರ್ಧಿಸುವುದು ಯೋಗ್ಯ ಎನ್ನುವುದು ನನ್ನ ಅಸಿಕೆ. ನಾನೂ ಸ್ಪರ್ಧಿಸಬಹುದು. ಶಿಕ್ಷಕರು ವಿಚಾರ ಮಾಡುತ್ತಾರೆ. ನಮ್ಮ ಅರುಣ ಶಹಾಪುರ ಅವರನ್ನು ಗೆಲ್ಲಿಸುತ್ತಾರೆ’ ಎಂದರು.

ಅಧಿಕಾರಕ್ಕಾಗಿ:‘ಪ್ರಕಾಶ ಹುಕ್ಕೇರಿ ಅವರಿಗೆ ಶಿಕ್ಷಕರ ಕುರಿತಂತೆ ಯಾವುದೇ ಕಾಳಜಿ ಇಲ್ಲ. ಅಂಥವರು ಈಗ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದಾರೆ. ಎಲ್ಲಿ ಅಧಿಕಾರ ಸಿಗುತ್ತದೆಯೋ ಅಲ್ಲಿ ಚುನಾವಣೆಗೆ ನಿಲ್ಲುತ್ತಾರೆ’ ಎಂದು ಟೀಕಿಸಿದರು.

‘ಸಂಸದ, ಶಾಸಕ, ಸಚಿವ, ವಿಧಾನಪರಿಷತ್‌ ಸದಸ್ಯರಾಗಿ ಕೆಲಸ ಮಾಡಿದ್ದ ಹುಕ್ಕೇರಿ ಮತ್ತೆ ಸ್ಪರ್ಧಿಸಿದ್ದಾರೆ. ಅವರಿಗೆ ಶಿಕ್ಷಕರ ಕುರಿತು ಸ್ವಲ್ಪವೂ ಗೊತ್ತಿಲ್ಲ’ ಎಂದು ದೂರಿದರು.

‘ಮೂರು ಜಿಲ್ಲೆಗಳನ್ನು ಒಳಗೊಂಡಂತೆ ವಾಯವ್ಯ ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ವಾರದಿಂದ ಎಲ್ಲ ತಾಲ್ಲೂಕುಗಳಿಗೂ ಭೇಟಿ ನೀಡಿ ಶಿಕ್ಷಕರು ಹಾಗೂ ಪದವೀಧರರ ಸಭೆಗಳನ್ನು ಮಾಡುತ್ತಿದ್ದೇವೆ. ಕಾಂಗ್ರೆಸ್‍ನವರು ಗೆಲ್ಲುವುದನ್ನು ಮಾತ್ರ ಹೇಳುತ್ತಾರೆ. ಆದರೆ, ಏನು ಬದಲಾವಣೆ ಮಾಡುತ್ತೇವೆ ಎನ್ನುವುದನ್ನು ಹೇಳುವುದಿಲ್ಲ’ ಎಂದು ವ್ಯಂಗ್ಯವಾಡಿದರು.

‘ಪದವೀಧರರ ಕ್ಷೇತ್ರದ ನಮ್ಮ ಅಭ್ಯರ್ಥಿ ಹಣಮಂತ ನಿರಾಣಿ ಯುವಕರಿಗೆ ಉದ್ಯೋಗ ಸೃಷ್ಟಿಸಲು ಸದಾಕಾಲ ಕೆಲಸ ಮಾಡುತ್ತಿದ್ದಾರೆ’ ಎಂದರು.

ಬಹಿರಂಗ ಚರ್ಚೆಯಾಗಲಿ:ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ‘ರಾಜ್ಯದಲ್ಲಿ ಶಿಕ್ಷಕರ ಸಮಸ್ಯೆ ಹಾಗೂ ಶಿಕ್ಷಣ ವ್ಯವಸ್ಥೆ ಕುರಿತಂತೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ–ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ನಡುವೆ ಬಹಿರಂಗ ಚರ್ಚೆಯಾಗಲಿ’ ಎಂದು ಸವಾಲು ಹಾಕಿದರು. ‘ಇದಕ್ಕೊಂದು ವೇದಿಕೆ ನಿರ್ಮಾಣ ಮಾಡಿ’ ಎಂದು ವೇದಿಕೆಯಲ್ಲಿದ್ದ ಸಚಿವ ಉಮೇಶ ಕತ್ತಿ ಅವರಿಗೆ ತಿಳಿಸಿದರು.

‘ನಮ್ಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಹಣಮಂತ ಸಜ್ಜನ ರಾಜಕಾರಣಿ. ಈ ಭಾಗದಲ್ಲಿ ಶಿಕ್ಷಣ ನೀರಾವರಿ ಹಾಗೂ ಅಭಿವೃದ್ಧಿ ಕುರಿತಂತೆ ಕಾಳಜಿ ಹೊಂದಿದ್ದಾರೆ. ಇಂತಹ ವ್ಯಕ್ತಿಗಳು ಆಯ್ಕೆಯಾದರೆ ನಮ್ಮ ಘನತೆ ಹೆಚ್ಚಾಗುತ್ತದೆ’ ಎಂದು ಹೇಳಿದರು.

ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದರಾದ ಮಂಗಲಾ ಅಂಗಡಿ, ರಮೇಶ ಜಿಗಜಿಣಗಿ, ಪಿ.ಸಿ. ಗದ್ದಿಗೌಡರ, ಈರಣ್ಣ ಕಡಾಡಿ, ಶಾಸಕರಾದ ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡರ, ಎನ್. ಮಹೇಶ್, ವಿಧಾನಪರಿಷತ್‌ ಸದಸ್ಯ ಎನ್.ರವಿಕುಮಾರ್, ಅಭ್ಯರ್ಥಿಗಳಾದ ಅರುಣ ಶಹಾಪುರ ಮತ್ತು ಹಣಮಂತ ನಿರಾಣಿ, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT