ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಪರಿಶ್ರಮವಿದ್ದರೆ ಸಾಧನೆ ಪಥವೇರುವುದು ನಿಶ್ಚಿತ: ಅಕ್ಷಯ ಗಿರೀಶ ನಾಡಗೌಡ

Published 15 ಜನವರಿ 2024, 4:19 IST
Last Updated 15 ಜನವರಿ 2024, 4:19 IST
ಅಕ್ಷರ ಗಾತ್ರ

ಮೂಡಲಗಿ: ‘ಸೋಲು ಗೆಲುವಿನ ಪ್ರಥಮ ಮೆಟ್ಟಿಲು ಎಂದು ತಿಳಿದು ಮುನ್ನಡೆಯಬೇಕು. ಶ್ರದ್ಧೆ, ಸತತ ಪರಿಶ್ರಮದ ಮೂಲಕ ಸಾಗಿದರೆ, ಯಶಸ್ಸಿನ ಪಥವೇರುವುದು ನಿಶ್ಚಿತ. ಇದಕ್ಕೆ ನಾನೇ ಸಾಕ್ಷಿ’

ಇದು ಯುಪಿಎಸ್‌ಸಿಯ ಜಿಯೋಸೈಂಟಿಸ್ಟ್‌ ಗೆಜೆಟೆಡ್‌ ‘ಎ’ ದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ತಾಲ್ಲೂಕಿನ ಹೊಸ ಯರಗುದ್ರಿ ಗ್ರಾಮದ ಅಕ್ಷಯ ಗಿರೀಶ ನಾಡಗೌಡ ಅವರ ಆತ್ಮವಿಶ್ವಾಸದ ಮಾತು.

ಯೋಜನಾಬದ್ಧವಾಗಿ ಅಭ್ಯಸಿಸಿ ದರೆ, ಕನ್ನಡ ಮಾಧ್ಯಮದಲ್ಲಿ ಓದಿದ ಗ್ರಾಮೀಣ ಭಾಗದ ಯುವಕರೂ ಇಂಥ ಪರೀಕ್ಷೆಯಲ್ಲಿ ತೇರ್ಗಡೆಯಾಗಬಹುದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

‘ರಾಜ್ಯದಲ್ಲಿ 5 ಸಾವಿರ ಅಭ್ಯರ್ಥಿಗಳು ಈ ಪರೀಕ್ಷೆ ಎದುರಿಸಿದ್ದರು. ಆದರೆ, ನಾನೊಬ್ಬನೇ ಉತ್ತೀರ್ಣವಾಗಿದ್ದೇನೆ. 186ನೇ ರ್‍ಯಾಂಕ್‌ ಗಳಿಸಿದ್ದೇನೆ’ ಎಂದು ಅಕ್ಷಯ ಹೆಮ್ಮೆಯಿಂದ ಹೇಳಿದರು.

ಡಿಪ್ಲೊಮಾ ಪದವೀಧರರಾಗಿರುವ ತಂದೆ ಗಿರೀಶ ಕೃಷಿಕರಾಗಿದ್ದಾರೆ. ಗೃಹಿಣಿಯಾಗಿರುವ ತಾಯಿ ಗಾಯತ್ರಿ ಅವರ ತವರೂರಾದ ರಾಮದುರ್ಗ ತಾಲ್ಲೂಕಿನ ಹೊಸಕೋಟಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಕ್ಷಯ ಪ್ರಾಥಮಿಕ ಶಿಕ್ಷಣ ಶಿಕ್ಷಣ ಪಡೆದರು. ಬಾಗಲಕೋಟೆ ಜಿಲ್ಲೆಯ ಮುಧೋಳದ ತ್ರಿವೇಣಿ ಸಂಗಮನಾಥ ಖಾಸಗಿ ಶಾಲೆಯಲ್ಲಿ ಪ್ರೌಢಶಿಕ್ಷಣ ಮುಗಿಸಿದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ, ಬಿ.ಎಸ್ಸಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಕೋರ್ಸ್‌ ಪೂರ್ಣಗೊಳಿಸಿದರು. ಕೆ–ಸೆಟ್‌ನಲ್ಲಿ ಉತ್ತೀರ್ಣರಾಗಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಭೂವಿಜ್ಞಾನ ಇಲಾಖೆಯಲ್ಲಿ ಭೂಗರ್ಭ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ.ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ: ‘ಬಿ.ಎಸ್ಸಿ ಓದು ಮುಗಿಯುತ್ತಲೇ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದೆ. ಆದರೆ, ಸಿದ್ಧತೆ ಇಲ್ಲದ್ದರಿಂದ ಮೊದಲ ಪ್ರಯತ್ನದಲ್ಲಿ ನಿರೀಕ್ಷಿತ ಅಂಕ ಬರಲಿಲ್ಲ. ಸತತ ಮೂರು ವರ್ಷ ತಯಾರಿ ನಡೆಸಿ, ಈ ಬಾರಿಯ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದೇನೆ’ ಎಂದು ಅಕ್ಷಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಪರೀಕ್ಷೆಗಾಗಿ ನಾನು ಎಲ್ಲಿಯೂ ಕೋಚಿಂಗ್‌ ಪಡೆದಿಲ್ಲ. ನಾನೇ ನೋಟ್ಸ್‌ ಮಾಡಿಕೊಂಡು, ನಿತ್ಯ 7ರಿಂದ 8 ತಾಸು ಓದುತ್ತಿದ್ದೆ. ಹಳೆಯ ಮಾದರಿ ಪ್ರಶ್ನೆಪತ್ರಿಕೆ ಬಿಡಿಸುತ್ತಿದ್ದೆ. ಉತ್ತಮ ಬರವಣಿಗೆ ರೂಢಿಸಿಕೊಂಡಿದ್ದೆ. ನಿಯತಕಾಲಿಕೆಗೆಳು, ದಿನಪತ್ರಿಕೆಗಳನ್ನು ನಿಯಮಿತವಾಗಿ ಓದಿ, ಶೈಕ್ಷಣಿಕ ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತಿದ್ದೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆಗೆ ಸರಿಯಾದ ಸಿದ್ದತೆ ಮಾಡಿಕೊಂಡಿದ್ದೆ. ನಿರಾಂತಕವಾಗಿ ಸಂದರ್ಶನ ಎದುರಿಸಿದೆ. ಇವೆಲ್ಲ ಕಾರಣದಿಂದ ಕನಸು ಸಾಕಾರವಾಯಿತು’ ಎಂದು ಸಂಭ್ರಮಿಸಿದರು.

‘ಹಿಮಾಲಯ ಪ್ರದೇಶಗಳಲ್ಲಿ ನಿರಂತರವಾಗಿ ಭೂಕಂಪ ನಡೆಯುತ್ತಿವೆ. ಸರ್ಕಾರ ಸಾಕಷ್ಟು ಹಣ ವ್ಯಯಿಸಿದರೂ ಪ್ರಯೋಜನವಾಗುತ್ತಿಲ್ಲ. ಭೂಕಂಪ ತಡೆಯುವ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳಲಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT