ಹೆದ್ದಾರಿ ಗಸ್ತಿಗೆ ಅತ್ಯಾಧುನಿಕ ವಾಹನಗಳು

7
ಪೊಲೀಸ್‌ ಆಯುಕ್ತರಿಂದ ಹಸಿರುನಿಶಾನೆ

ಹೆದ್ದಾರಿ ಗಸ್ತಿಗೆ ಅತ್ಯಾಧುನಿಕ ವಾಹನಗಳು

Published:
Updated:

ಬೆಳಗಾವಿ: ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಹಾದು ಹೋಗುವ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗಸ್ತಿಗಾಗಿ ರಾಜ್ಯ ಸರ್ಕಾರದಿಂದ ಒದಗಿಸಿರುವ ಎರಡು ಹೊಸ ವಾಹನಗಳ ಸೇವೆಗೆ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ ಸೋಮವಾರ ಹಸಿರುನಿಶಾನೆ ತೋರಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿ, ‘ಆಯುಕ್ತಾಲಯ ವ್ಯಾಪ್ತಿಯಲ್ಲಿ 50 ಕಿ.ಮೀ.ನಷ್ಟು ಹೆದ್ದಾರಿ ಹಾದು ಹೋಗುತ್ತದೆ. ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರ ಸ್ಪಂದನೆಗಾಗಿ ವಾಹನಗಳನ್ನು ಒದಗಿಸಲಾಗಿದೆ. ಕೆಎಲ್‌ಇ ಆಸ್ಪತ್ರೆ ಕೇಂದ್ರವಾಗಿಟ್ಟುಕೊಂಡು ಒಂದನ್ನು ಧಾರವಾಡ ರಸ್ತೆ (ಎಂ.ಕೆ. ಹುಬ್ಬಳ್ಳಿವರೆಗೆ) ಹಾಗೂ ಇನ್ನೊಂದನ್ನು ಕೊಲ್ಲಾಪುರ ರಸ್ತೆ ಕಡೆಗೆ (ವಂಟಮುರಿವರೆಗೆ) ನಿಯೋಜಿಸಲಾಗಿದೆ. ಇವು ನಿರಂತರವಾಗಿ ಗಸ್ತು ತಿರುಗುತ್ತಿರುತ್ತವೆ’ ಎಂದು ಮಾಹಿತಿ ನೀಡಿದರು.

‘ಹೊಸ ಟೊಯೊಟಾ ಇನ್ನೋವಾ ವಾಹನಗಳಿವು. ಲೈಟ್‌ ಬಾರ್ ಸಿಸ್ಟಂ, ಸಾರ್ವಜನಿಕರೊಂದಿಗೆ ಸಂವಹನ ವ್ಯವಸ್ಥೆ, ಸರ್ಚ್‌ ಎಮರ್ಜೆನ್ಸಿ ಲೈಟ್, ಪಿಡಿಝಡ್‌ ಸರ್ವೆಲೆನ್ಸ್ ಕ್ಯಾಮೆರಾ, ಸ್ಟಿಲ್‌ ಸರ್ವೆಲೆನ್ಸ್ ಕ್ಯಾಮೆರಾ, ಮೊಬೈಲ್‌ ಎನ್‌ವಿಆರ್, ಮಡಚಿಡಬಹುದಾದ ಸ್ಟ್ರಚರ್‌, ಅಗ್ನಿನಂದಕವನ್ನು ಹೊಂದಿವೆ. ಸಣ್ಣದಾದ ಮರ, ರೆಂಬೆ, ಕೊಂಬೆಗಳನ್ನು ತೆರವುಗೊಳಿಸುವುದಕ್ಕಾಗಿ ಸಣ್ಣ ಗರಗಸ, ಕೊಡಲಿ ನೀಡಲಾಗಿದೆ. ಬ್ಯಾರಿಕೇಡ್‌ ಕೂಡ ಇದೆ. ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಯುಪಿಎಸ್‌ ಹಾಗೂ ಬ್ಯಾಟರಿ ಕೊಡಲಾಗಿದೆ. ಬಹಳ ದೂರದಲ್ಲಿ ಬರುತ್ತಿರುವ ವಾಹನವನ್ನು ಇಲ್ಲಿನ ಕ್ಯಾಮೆರಾದಲ್ಲಿ ವೀಕ್ಷಿಸಬಹುದಾಗಿದೆ. ತುರ್ತು ಸಂದರ್ಭದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಕರೆತರುವುದಕ್ಕೂ ವ್ಯವಸ್ಥೆ ಇದೆ’ ಎಂದು ತಿಳಿಸಿದರು.

‘ಚಾಲಕರೊಂದಿಗೆ ನಾಲ್ವರು ಎಎಸ್‌ಐಗಳನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ವಿಪತ್ತು ನಿರ್ವಹಣೆ ಕುರಿತು ಅವರಿಗೆ ತರಬೇತಿ ನೀಡಲಾಗಿದೆ. ಇವು ಎನ್‌ಎಚ್‌ನಲ್ಲೇ ಗಸ್ತಿನಲ್ಲಿರುವುದರಿಂದ, ಅಪಘಾತ ಸಂಭವಿಸಿದ ಸ್ಥಳಕ್ಕೆ ತುರ್ತಾಗಿ ತೆರಳುವುದು ಸಾಧ್ಯವಾಗಲಿದೆ’ ಎಂದು ಹೇಳಿದರು.

ರಸ್ತೆ ಸುರಕ್ಷತಾ ಸಪ್ತಾಹ:

‘ಜುಲೈ ತಿಂಗಳನ್ನು ರಸ್ತೆ ಸುರಕ್ಷತಾ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ. ನಿತ್ಯವೂ ಒಂದಿಲ್ಲೊಂದು ಕಾರ್ಯಕ್ರಮ ನಡೆಸಲಾಗುತ್ತಿದೆ. ಸಂಚಾರ ನಿಯಮಗಳ ಕುರಿತು ಶಾಲಾ–ಕಾಲೇಜುಗಳಲ್ಲಿ ಅರಿವು ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು. ‘ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ಸುವ್ಯವಸ್ಥೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜನವರಿಯಿಂದ ಈವರೆಗೆ, ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಸವಾರರು ಹಾಗೂ ಚಾಲಕರಿಂದ ₹ 1.44 ಕೋಟಿ ದಂಡ ವಸೂಲಿ ಮಾಡಲಾಗಿದೆ. 1,34,231 ‍ಪ್ರಕರಣ ದಾಖಲಿಸಲಾಗಿದೆ. 2017ರಲ್ಲಿ ಇಡೀ ವರ್ಷ 1.68 ಲಕ್ಷ ಪ್ರಕರಣ ದಾಖಲಿಸಿ ₹ 1.83 ಕೋಟಿ ದಂಡ ಸಂಗ್ರಹಿಸಲಾಗಿತ್ತು. ಈ ವರ್ಷ ₹ 3 ಕೋಟಿ ಮೀರುವ ಸಾಧ್ಯತೆ ಇದೆ. ಸಂಚಾರ ನಿರ್ವಹಣಾ ಕೇಂದ್ರವೊಂದರಿಂದಲೇ ₹ 84 ಲಕ್ಷ ದಂಡ ಸಂಗ್ರಹಿಸಲಾಗಿದೆ. ಇನ್ನೂ ₹ 25 ಲಕ್ಷದಷ್ಟು ಬರಬೇಕಿದೆ (ನೋಟಿಸ್‌ ನೀಡಿರುವುದು)’ ಎಂದು ವಿವರಿಸಿದರು.

‘ಸೆಲ್ಲಾರ್‌ಗಳು ಅನ್ಯ ಉದ್ದೇಶಕ್ಕೆ ಬಳಕೆಯಾಗಿದ್ದು, ವಾಹನಗಳ ನಿಲುಗಡೆಗೆ ತೊಂದರೆಯಾಗಿದೆ. ಹೀಗಾಗಿ, ಸೆಲ್ಲಾರ್‌ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ನಗರಪಾಲಿಕೆ ಪತ್ರ ಬರೆಯಲಾಗಿದೆ. ಕಾರ್ಯಾಚರಣೆಗೆ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಲಾಗಿದೆ. ಹೆಚ್ಚಿನ ಮಕ್ಕಳನ್ನು ಕರೆದುಕೊಂಡು ಹೋಗುವ ಆಟೊರಿಕ್ಷಾದವರ ವಿರುದ್ಧವೂ ಕ್ರಮ ವಹಿಸಲಾಗುತ್ತಿದೆ. ಮೀಟರ್‌ ಹಾಕದ ಆಟೊರಿಕ್ಷಾದವರ ವಿರುದ್ಧ ಸಾರ್ವಜನಿಕರು ದೂರು ನೀಡಿದರೆ, ಕಠಿಣ ಕ್ರಮ ವಹಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !