ದೇಶದ ಸಂಸ್ಕೃತಿ ಜಗತ್ತಿಗೆ ಸಾರಿದ ವಿವೇಕಾನಂದರು: ಎಂ.ಗೋವಿಂದರಾಯ

7
ಚಿಕಾಗೋ ಸಮ್ಮೇಳನ: 125ನೇ ವರ್ಷಾಚರಣೆ ಕಾರ್ಯಕ್ರಮ

ದೇಶದ ಸಂಸ್ಕೃತಿ ಜಗತ್ತಿಗೆ ಸಾರಿದ ವಿವೇಕಾನಂದರು: ಎಂ.ಗೋವಿಂದರಾಯ

Published:
Updated:
Deccan Herald

ಬೆಳಗಾವಿ: ಸ್ವಾಮಿ ವಿವೇಕಾನಂದರು ಷಿಕಾಗೊ ಸಮ್ಮೇಳನದಲ್ಲಿ ಭಾಗವಹಿಸಿ ಮಾಡಿದ ಉಪನ್ಯಾಸ ವಿಶ್ವದ ಶ್ರೇಷ್ಠ  ಉಪನ್ಯಾಸವಾಗಿದ್ದು, ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಉಪನ್ಯಾಸವಾಗಿದೆ ಎಂದು ಕುಣಿಗಲ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಂ.ಗೋವಿಂದರಾಯ ಅವರು ಹೇಳಿದರು.

ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ‘ಸ್ವಾಮಿ ವಿವೇಕಾನಂದರ ಷಿಕಾಗೊ ಉಪನ್ಯಾಸಕ್ಕೆ 125 ವರ್ಷ’ ಕಾರ್ಯಕ್ರಮದಲ್ಲಿ ಮಾತನಾಡಿದರು.

1893ರಲ್ಲಿ ಜರುಗಿದ ಸಮ್ಮೇಳನದ ಮೂಲಕ ಅವರು ತಮ್ಮ ಅಗಾಧ ಜ್ಞಾನ ಹಾಗೂ ದೇಶದ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಪರಿಚಯಿಸಿದರು. ಆ ಸಮ್ಮೇಳನ ಸಮಸ್ತ ಮಾನವ ಜನಾಂಗದ ಸಮ್ಮೇಳನವಾಗಿತ್ತು ಎಂದು ಹೇಳಿದರು.

ಭಾರತವನ್ನು ಅರ್ಥೈಸಿಕೊಳ್ಳಬೇಕೆಂದರೆ ವಿವೇಕಾನಂದರ ಕೃತಿಗಳನ್ನು ಓದಬೇಕೆಂದು ಮಹಾತ್ಮಾ ಗಾಂಧೀಜಿ ಅವರು ಹೇಳಿದ್ದರು. ವಿವೇಕಾನಂದರ ಬಗ್ಗೆ ಓದಿದಾಗ ರಾಷ್ಟ್ರೀಯತೆ ಭಾವ ತಮ್ಮಲ್ಲಿ ಹೆಚ್ಚಾಯಿತು ಎಂದು ಹಲವು ಬಾರಿ ಅವರು ಉಲ್ಲೇಖಿಸಿದ್ದಾರೆ. ವಿವೇಕಾನಂದರಿಂದ ಗಾಂಧೀಜಿ ಅವರು ಪ್ರಭಾವಿತರಾಗಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಅನಿಲ ಬೆನಕೆ, ವಿದೇಶಿಗರಲ್ಲಿ ಭಾರತದ ಬಗ್ಗೆ ಅಸಡ್ಡೆ ಭಾವನೆ ಇತ್ತು. ವಿವೇಕಾನಂದರ ಷಿಕಾಗೊ ಭಾಷಣದ ನಂತರ ಭಾರತದ ಸಂಸ್ಕೃತಿ, ಆಚಾರ, ವಿಚಾರ ಪ್ರಪಂಚದಾದ್ಯಂತ
ಪ್ರಸಿದ್ಧಿ ಪಡೆಯಿತು. 1892ರ ಅಕ್ಟೋಬರ್‌ 15ರಂದು ಬೆಳಗಾವಿಗೆ ಭೇಟಿ ನೀಡಿ, 12 ದಿನಗಳ ಕಾಲ ತಂಗಿದ್ದರು ಎನ್ನುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎಚ್.ಬಿ. ಬೂದೆಪ್ಪ ಅಧ್ಯಕ್ಷತೆ ವಹಿಸಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಸೀಬಿ ರಂಗಯ್ಯ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ
ಶ್ರೀಶೈಲ ಕರಿಶಂಕರಿ, ತಹಶೀಲ್ದಾರ ಮಂಜುಳಾ ನಾಯಕ, ಡಿಡಿಪಿಯು ಪಿ.ಜಿ. ರಜಪೂತ ಉಪಸ್ಥಿತರಿದ್ದರು.

ವಿನಾಯಕ ಮೋರೆ ಅವರು ನಾಡಗೀತೆ ಹಾಡಿದರು. ಸಿದ್ದಣ್ಣ ದುರದುಂಡಿ ನಿರೂಪಿಸಿದರು. ಎಂ.ಎ. ಮುಲ್ಲಾ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !