ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ‘ಸ್ವೀಪ್‌’ ರಾಯಭಾರಿಗಳಿಂದ ‘ಮತ’ ಜಾಗೃತಿ

Published 1 ಏಪ್ರಿಲ್ 2024, 4:44 IST
Last Updated 1 ಏಪ್ರಿಲ್ 2024, 4:44 IST
ಅಕ್ಷರ ಗಾತ್ರ

ಬೆಳಗಾವಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಸ್ವೀಪ್ (ವ್ಯವಸ್ಥಿತ ಮತದಾರರ ಶಿಕ್ಷಣ ಹಾಗೂ ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ) ಸಮಿತಿಯು ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಮೂವರನ್ನು ರಾಯಭಾರಿಗಳನ್ನಾಗಿ ನೇಮಿಸಿದೆ.

ಇಲ್ಲಿನ ಅಂತರರಾಷ್ಟ್ರೀಯ ಅಂಗವಿಕಲ ಈಜುಪಟು ರಾಘವೇಂದ್ರ ಅಣ್ವೇಕರ್‌, ಲಿಂಗತ್ವ ಅಲ್ಪಸಂಖ್ಯಾತರಾದ ಚಿನ್ನು ತಳವಾರ ಮತ್ತು ರಾಷ್ಟ್ರೀಯ ಜುಡೋಪಟು ಸಹನಾ ಎಸ್‌.ಆರ್‌. ರಾಯಭಾರಿಗಳಾಗಿ ನೇಮಕ ಗೊಂಡವರು.

ನಾಲ್ಕನೇ ಬಾರಿ ರಾಯಭಾರಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ಅಣ್ವೇಕರ್‌, ಅಂಗವೈಕಲ್ಯದ ಮಧ್ಯೆಯೂ ಈಜು ಸ್ಪರ್ಧೆಯಲ್ಲಿ ಮಿಂಚುತ್ತಿದ್ದಾರೆ. ಅಂಗವಿಕ ಲರ ಈಜು ಟೂರ್ನಿಗಳಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ 28, ರಾಷ್ಟ್ರಮಟ್ಟ ದಲ್ಲಿ 100 ಪದಕ ಗೆದ್ದಿದ್ದಾರೆ.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿ ಅವರು ಸ್ವೀಪ್‌ ರಾಯಭಾರಿಯಾಗಿದ್ದರು. 2019ರ ಲೋಕಸಭೆ ಚುನಾವಣೆ, 2021ರ ಲೋಕಸಭೆ ಉಪಚುನಾವಣೆಯಲ್ಲಿ ‘ಸ್ವೀಪ್‌ ರಾಯಭಾರಿ’ ಕೆಲಸ ಮಾಡಿ, ಜಿಲ್ಲೆಯಾದ್ಯಂತ ಮತದಾರರಲ್ಲಿ ಜಾಗೃತಿ ಮೂಡಿಸಿದ್ದರು.

ಮತ್ತೊಬ್ಬ ರಾಯಭಾರಿಯಾದ ರಾಮದುರ್ಗ ತಾಲ್ಲೂಕಿನ ಕುನ್ನಾಳದ ಚಿನ್ನು ತಳವಾರ ಬೆಳಗಾವಿಯ ಹ್ಯುಮ್ಯಾನಿಟಿ ಫೌಂಡೇಷನ್‌ನಲ್ಲಿ ಸದಸ್ಯರಾಗಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವು ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಫ್ಯಾಷನ್‌ ಷೋನಲ್ಲಿ ರನ್ನರ್‌ ಅಪ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜುಡೋದಲ್ಲಿ ಸಾಧನೆ: 21 ವರ್ಷದ ಸಹನಾ ಬೆಳಗಾವಿಯ ಮರಾಠ ಮಂಡಳ ಕಾಲೇಜಿನಲ್ಲಿ ಬಿ.ಎ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ರಾಷ್ಟ್ರಮಟ್ಟದ ಜುಡೋ ಟೂರ್ನಿಗಳಲ್ಲಿ 3 ಚಿನ್ನ, 1 ಬೆಳ್ಳಿ ಮತ್ತು 3 ಕಂಚಿನ ಪದಕ ಗಳಿಸಿದ್ದಾರೆ.

ಪ್ರೇರಣೆ ಆಗಲೆಂದು ನೇಮಕ: ಸಿಇಒ

‘ರಾಘವೇಂದ್ರ, ಚಿನ್ನು ಮತ್ತು ಸಹನಾ ಅವರು, ಹಲವು ತೊಡಕುಗಳ ಮಧ್ಯೆಯೂ ತಮ್ಮ ರಂಗಗಳಲ್ಲಿ ಸಾಧನೆ ಮಾಡಿದ್ದಾರೆ. ಸಮಾಜಕ್ಕೆ ಪ್ರೇರಣೆಯಾಗ ಲೆಂದು ಇವರನ್ನೇ ಸ್ವೀಪ್‌ ರಾಯಭಾರಿಗಳನ್ನಾಗಿ ನೇಮಿಸಿದ್ದೇವೆ. ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುವ ಸ್ವೀಪ್‌ ಚಟುವಟಿಕೆಗಳು ಮತ್ತು ತಾವು ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಅವರು ಮತದಾನದ ಕುರಿತು ಜಾಗೃತಿ ಮೂಡಿಸಲಿದ್ದಾರೆ’ ಎಂದು ಜಿ.ಪಂ ಸಿಇಒ ರಾಹುಲ್‌ ಶಿಂಧೆ ಹೇಳಿದರು.

ಎಷ್ಟು ಮತದಾನವಾಗಿತ್ತು?

2019ರ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಶೇ 67.70, ಚಿಕ್ಕೋಡಿಯಲ್ಲಿ ಶೇ 75.53ರಷ್ಟು ಮತದಾನವಾಗಿತ್ತು. ಕೆನರಾ ಕ್ಷೇತ್ರಕ್ಕೆ ಒಳಪಟ್ಟ ಖಾನಾಪುರ ವಿಧಾನಸಭೆ ಕ್ಷೇತ್ರದಲ್ಲಿ ಶೇ 70.68, ಚನ್ನಮ್ಮನ ಕಿತ್ತೂರು ಕ್ಷೇತ್ರದಲ್ಲಿ ಶೇ 72.33ರಷ್ಟು ಮತದಾನವಾಗಿತ್ತು. ಈ ಬಾರಿ ಪ್ರತಿಶತ 100ರಷ್ಟು ಮತದಾನದ ಗುರಿಯೊಂದಿಗೆ ಸ್ವೀಪ್‌ ಕೆಲಸ ಮಾಡುತ್ತಿದೆ.

ನಾನು ಸ್ವೀಪ್‌ ರಾಯಭಾರಿ ಆಗುತ್ತಿರುವುದು ನಾಲ್ಕನೇ ಬಾರಿ. ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿರುವುದಕ್ಕೆ ಹೆಮ್ಮೆಯಿದೆ.
ರಾಘವೇಂದ್ರ ಅಣ್ವೇಕರ್‌, ಅಂತರರಾಷ್ಟ್ರೀಯ ಅಂಗವಿಕಲ ಈಜುಪಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT