ಶುಕ್ರವಾರ, ಜುಲೈ 1, 2022
21 °C
ಒಂದಿಡೀ ಸೆಮಿಸ್ಟರ್‌ ಇಂಟರ್ನ್‌ಶಿಪ್‌, ವಿದ್ಯಾರ್ಥಿಗಳಿಗೆ ಶಿಷ್ಯವೇತನ

ವಿಟಿಯುನಲ್ಲಿ ಎನ್‌ಇಪಿ ಅಳವಡಿಕೆ; ಹಲವು ಮಾರ್ಪಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಳವಡಿಸಿಕೊಂಡಿದ್ದು ಹಲವು ಮಾರ್ಪಾಡುಗಳನ್ನು ತರಲಾಗಿದೆ’ ಎಂದು ಕುಲಪತಿ ಪ್ರೊ.ಕರಿಸಿದ್ದಪ್ಪ ತಿಳಿಸಿದರು.

ಇಲ್ಲಿನ ‘ಜ್ಞಾನಸಂಗಮ‘ ಕ್ಯಾಂಪಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಪ್ರಸ್ತುತ ದಿನಗಳಲ್ಲಿ ಕೈಗಾರಿಕೆಗಳ ಅಗತ್ಯಕ್ಕೆ ತಕ್ಕಂತೆ ಕೌಶಲವುಳ್ಳ ಮಾನವ ಸಂಪನ್ಮೂಲ ರೂಪಿಸುವುದಕ್ಕಾಗಿ ಕ್ರಮ ವಹಿಸಲಾಗಿದೆ’ ಎಂದು ಹೇಳಿದರು.

‘ಪ್ರತಿ ಶಿಕ್ಷಣ ಮಂಡಳಿಯಲ್ಲೂ ಸರಾಸರಿ 4ರಿಂದ 6 ಮಂದಿ ಕೈಗಾರಿಕಾ ಕ್ಷೇತ್ರದ ಪರಿಣತರನ್ನು  ಸೇರಿಸಿಕೊಳ್ಳಲಾಗಿದೆ. ಅವರೊಂದಿಗೆ ಚರ್ಚೆ–ಸಮಾಲೋಚನೆ ಮೂಲಕ ಪಠ್ಯಕ್ರಮ ಪರಿಷ್ಕರಿಸಿ ಅನುಷ್ಠಾನಗೊಳಿಸಲಾಗಿದೆ. ಆಂತರಿಕ ಮೌಲ್ಯಮಾಪನ ಅಂಕಗಳನ್ನು 40ರಿಂದ 50ಕ್ಕೆ ಹೆಚ್ಚಿಸಲಾಗಿದೆ. ಪರೀಕ್ಷೆಯ ಸಮಯವನ್ನು ಹಚ್ಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಕೌಶಲ ವೃದ್ಧಿಗೆ ಅನುವು:

‘ಕಲಿಕೆಗೆ ಹಾಗೂ ಪಠ್ಯೇತರ ಚಟುವಟಿಕೆಗೂ ಸಮಯ ಸಿಗಲೆಂದು ಕೋರ್ಸ್‌ಗಳನ್ನು ವಿನ್ಯಾಸ ಮಾಡಲಾಗಿದೆ. ಕೌಶಲ ವೃದ್ಧಿಗೆ ಅನುವು ಮಾಡಿಕೊಡಲಾಗುತ್ತಿದೆ. ಅಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಕೂಡ ಅಂಕ ದೊರೆಯಲಿದೆ. ಕೌಶಲ ಆಧಾರಿತ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಮೇಜರ್‌ ಪದವಿಯೊಂದಿಗೆ ಮೈನರ್ ಪದವಿ ಪರಿಚಯಿಸಲಾಗಿದ್ದು, ಆಯ್ಕೆಗೆ ವಿದ್ಯಾರ್ಥಿಗಳಿಗೆ ಹಲವು ಅವಕಾಶವಿದೆ. ವಿದ್ಯಾರ್ಥಿಗೆ ಒಂದಿಕ್ಕಿಂತ ಹೆಚ್ಚಿನ ಜ್ಞಾನವಿದ್ದರೆ ಕೆಲಸ ಸಿಗುವ ಸಾಧ್ಯತೆಗಳು  ಹೆಚ್ಚಿರುತ್ತದೆ. ಹೀಗಾಗಿ, ಬದಲಾದ ನೀತಿಗೆ ತಕ್ಕಂತೆ ಯುವಜನರಿಗೆ ಅವಕಾಶಗಳನ್ನು ಒದಗಿಸಲಾಗುತ್ತಿದೆ’ ಎಂದರು.

‘ಪ್ರತಿ ಶಾಖೆಯಲ್ಲೂ ಕಂಪ್ಯೂಟರ್‌ ಕಲಿಕೆಗೆ ವ್ಯವಸ್ಥೆಗಾಗಿ ಕಂಪ್ಯೂಟರ್‌ ಇಂಟಿಗ್ರೇಟೆಡ್ ಸಿಸ್ಟಂ ಅಳವಡಿಸಿಕೊಳ್ಳಲಾಗಿದೆ. ಹಿಂದೆ 4ರಿಂದ 6ವಾರಗಳವರೆಗೆ ಕೈಗಾರಿಕೆಗಳಲ್ಲಿ ಇಂಟರ್ನ್‌ಶಿಪ್‌ ಇರುತ್ತಿತ್ತು. ಈಗ ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಸಮಯ ಸಿಗಲೆಂದು ಒಂದಿಡೀ ಸೆಮಿಸ್ಟರ್‌ (ಅಂದರೆ 6 ತಿಂಗಳು) ಇಂಟರ್ನ್‌ಶಿಪ್‌ ಮಾಡಬೇಕು. ಇದಕ್ಕಾಗಿ ಕೈಗಾರಿಕೆಗಳೊಂದಿಗೆ ಒಡಂಬಡಿಕೆಯನ್ನು ಸರ್ಕಾರದ ಪರವಾಗಿ ವಿಟಿಯುನಿಂದ ಮಾಡಿಕೊಳ್ಳಲಾಗಿರುತ್ತದೆ. ಆಯಾ ಕೈಗಾರಿಕೆಗಳಿಂದ ವಿದ್ಯಾರ್ಥಿಗಳಿಗೆ ಶಿಷ್ಯವೇತನವೂ ದೊರೆಯುತ್ತದೆ’ ಎಂದು ವಿವರಿಸಿದರು.

‘ಉದ್ಯಮದ ಜೊತೆಗೆ ಸಂಶೋಧನಾ ಇಂಟರ್ನ್‌ಶಿಪ್‌ಗೂ ಅವಕಾಶವಿದೆ. ವಿದ್ಯಾರ್ಥಿಗಳು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್‌ ಮಾಡಬಹುದು. ಆಸಕ್ತಿ ಇದ್ದವರು ಅಥವಾ ಶಕ್ತಿ ಇದ್ದವರು ಇಂಟರ್ನ್‌ಶಿಪ್‌ಗಾಗಿ ವಿದೇಶಕ್ಕೂ ಹೋಗಬಹುದು’ ಎಂದು ತಿಳಿಸಿದರು.

ಕನ್ನಡದಲ್ಲಿ ಎಂಜಿನಿಯರಿಂಗ್ ಒಬ್ಬರೂ ಬರಲಿಲ್ಲ!

‘ಕನ್ನಡದಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ಗೆ ವಿದ್ಯಾರ್ಥಿಗಳಿಂದ ಪ್ರತಿಕ್ರಿಯೆ ಬರಲಿಲ್ಲ. ಮೂರು ಕಾಲೇಜುಗಳಲ್ಲಿ ಕೋರ್ಸ್‌ಗಳಿಗೆ ಅವಕಾಶ ನೀಡಲಾಗಿತ್ತು. 17 ಮಂದಿ ಅರ್ಜಿ ಹಾಕಿದ್ದರು. ಬಳಿಕ ಇಂಗ್ಲಿಷ್ ವಿಭಾಗಕ್ಕೇ ಹೊರಳಿದರು. ಕನ್ನಡದಲ್ಲಿ ಪಠ್ಯಕ್ರಮ ಸಿದ್ಧಪಡಿಸಿ, ಬೋಧಕರಿಗೆ ಅಗತ್ಯ ತರಬೇತಿಯನ್ನೂ ಕೊಡಲಾಗಿದೆ. ಪ್ರಾದೇಶಿಕ ಭಾಷೆಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆಯಲು ವಿದ್ಯಾರ್ಥಿಗಳೊಂದಿಗೆ ಪಾಲಕರ ಮನೋಭಾವವೂ ಬದಲಾಗಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಕನ್ನಡದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಾಕ್ಷಣ ಉದ್ಯೋಗ ಸಿಗುವುದಿಲ್ಲವೇನೋ ಎಂಬ ಆತಂಕ ಸಲ್ಲದು. ಇಂಗ್ಲಿಷ್‌ ಅನ್ನೂ ಕಲಿಸಲಾಗುತ್ತದೆ. ಮಾತೃಭಾಷೆಯಲ್ಲಿ ಪರಿಣಾಮಕಾರಿಯಾಗಿ ವಿಷಯವನ್ನು ಅರ್ಥ ಮಾಡಿಕೊಳ್ಳಬಹುದು. ಮತ್ತೆ ಪ್ರಸಕ್ತ ಸಾಲಿನಲ್ಲಿ ಪ್ರಯತ್ನ ಮುಂದುವರಿಯಲಿದೆ. ಈ ಮಧ್ಯೆ, ಕನ್ನಡದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದವರಿಗೆ ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಸಂಬಂಧಿಸಿದ ಸರ್ಕಾರಿ ನೌಕರಿಯಲ್ಲಿ ಆದ್ಯತೆ ನೀಡುವಂತೆ ಸರ್ಕಾರಕ್ಕೆ ಮನವಿಯನ್ನೂ ಮಾಡಲಾಗಿದೆ’ ಎಂದು ತಿಳಿಸಿದರು.

‘ನವೋದ್ಯಮಕ್ಕೂ ಪ್ರೋತ್ಸಾಹ ನೀಡಲಾಗುತ್ತಿದೆ. ಕ್ಯಾಂಪಸ್‌ನಲ್ಲಿ ಹತ್ತು ವಿದ್ಯಾರ್ಥಿಗಳು ನವೋದ್ಯಮ ಆರಂಭಿಸಿದ್ದಾರೆ. ಅವರಿಗೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ’ ಎಂದು ಹೇಳಿದರು.

ಕುಲಸಚಿವರಾದ ಪ್ರೊ.ಎ.ಎಸ್. ದೇಶಪಾಂಡೆ ಮತ್ತು ಪ್ರೊ.ಬಿ.ಈ.‌ ರಂಗಸ್ವಾಮಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು