ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಹುದ್ದೆಯಿಂದ ಕೆಳಗಿಳಿಯುವವರ ವಾಣಿಗಾಗಿ ಕಾಯುತ್ತಿದ್ದೇವೆ: ಸತೀಶ ಜಾರಕಿಹೊಳಿ

Last Updated 19 ಜುಲೈ 2021, 10:08 IST
ಅಕ್ಷರ ಗಾತ್ರ

ಬೆಳಗಾವಿ: ಮುಖ್ಯಮಂತ್ರಿ ಹುದ್ದೆಯಿಂದ ಒಬ್ಬರು ಕೆಳಗಿಳಿಯುತ್ತಾರೆ; ಮತ್ತೊಬ್ಬರು ಆ ಹುದ್ದೆಗೇರುತ್ತಾರೆ. ಆದರೆ, ಕೆಳಗಿಳಿಯುವವರಿಂದ ಯಾವ ವಾಣಿ (ಸಂದೇಶ) ಹೊರಬರುತ್ತದೆ ಎಂದು ಕಾಯುತ್ತಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆಯಿಂದ ಕಾಂಗ್ರೆಸ್‌ಗೆ ಯಾವ ಲಾಭವೂ ಇಲ್ಲ; ನಷ್ಟವೂ ಇಲ್ಲ. ಮುಖ್ಯಮಂತ್ರಿ ಬದಲಾದರೂ ಸರ್ಕಾರ ಅವರದ್ದೇ ಇರುತ್ತದೆ. ನಾವು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದರು.

ಮಧ್ಯಂತರ ಚುನಾವಣೆ ಬಂದರೂ ಬರಬಹುದು: 'ರಾಜಕೀಯದಲ್ಲಿ ಹೀಗೇಯೇ ಎಂದು ಹೇಳಲೂ ಆಗುವುದಿಲ್ಲ. ಮಧ್ಯಂತರ ಚುನಾವಣೆ ಬಂದರೂ ಬರಬಹುದು. ಹೀಗಾಗಿ, ಕಾಂಗ್ರೆಸ್ ಪಕ್ಷದಿಂದ ರಾಜ್ಯದಾದ್ಯಂತ ಈಗಿನಿಂದಲೇ ಪಕ್ಷ ಸಂಘಟನೆ ಮಾಡುತ್ತಿದ್ದೇವೆ' ಎಂದು ಹೇಳಿದರು.

'ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ರಾಜಕೀಯ ಎಂದ ಮೇಲೆ ಜಾತಿ ಲೆಕ್ಕಾಚಾರ ಇದ್ದೇ ಇರುತ್ತದೆ. ಆಯಾ ಜಾತಿ ಮುಖಂಡರು ಕಾಂಗ್ರೆಸ್‌ನಲ್ಲಿ ಪಕ್ಷ‌ ಸಂಘಟನೆ ಮಾಡುವಲ್ಲಿ ನಿರತರಾಗಿದ್ದಾರೆ. ಅದು‌ ಸ್ವಾಭಾವಿಕ ಎಂದು ಪ್ರತಿಕ್ರಿಯಿಸಿದರು.

ಸ್ಮಾರ್ಟ್ ಸಿಟಿ ಕಾಮಗಾರಿ ಅವೈಜ್ಞಾನಿಕ: ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಅವೈಜ್ಞಾನಿಕವಾಗಿದೆ. ದೆಹಲಿಯಲ್ಲಿ ಕುಳಿತು ಯೋಜನೆ ರೂಪಿಸಿ, ಆದೇಶ ಮಾಡುತ್ತಾರೆ. ಆದರೆ, ಅದು ಇಲ್ಲಿನ ಪರಿಸ್ಥಿತಿಗೆ ಅನ್ವಯವಾಗುವುದಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ‌ಶಾಸಕರ ಜೊತೆ ಸಭೆ ನಡೆಸಬೇಕು. ಜಿಲ್ಲೆಯವರೇ ಸಚಿವರಿದ್ದಾಗ ಇಂತಹ ಕೆಲಸಗಳು ಸುಲಭವಾಗುತ್ತವೆ. ಬೇರೆ ಜಿಲ್ಲೆಯವರನ್ನು ಉಸ್ತುವಾರಿಯನ್ನಾಗಿ ಮಾಡಿದರೆ ಸಮಸ್ಯೆ ಆಗುತ್ತದೆ ಎಂದರು.

ಇತ್ತೀಚೆಗೆ ನಡೆದ ಜಿಲ್ಲಾ ಕೆಡಿಪಿ ಸಭೆಯಲ್ಲಿ 20 ಇಲಾಖೆಗಳ ಬಗ್ಗೆ ಚರ್ಚೆಯೇ ಆಗಿಲ್ಲ. ಇಲಾಖಾವಾರು ಪ್ರತ್ಯೇಕವಾಗಿ ಸಭೆ ಮಾಡಿದರೆ ಮಾತ್ರ ಸಮಸ್ಯೆ ಬಗೆಹರಿಯುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕೇಳವವರೇ ಯಾರಿಲ್ಲ: ನಾನು ಉಸ್ತುವಾರಿ ಸಚಿವ ಆಗಿದ್ದಾಗ ಕೆಡಿಪಿ ಸಭೆ ಹೊರತುಪಡಿಸಿ, ಎಲ್ಲ ಇಲಾಖೆಗಳ ಪ್ರತ್ಯೇಕ ಸಭೆ ಮಾಡುತ್ತಿದ್ದೆ. ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಸಭೆಗಳನ್ನೂ ಪ್ರತ್ಯೇಕವಾಗಿ ಮಾಡಿದ್ದೆ. ಜಿಲ್ಲಾಧಿಕಾರಿಯನ್ನೂ ಕರೆಸಿ ಸಭೆ ಮಾಡಿದ್ದೇವೆ. ಆದರೆ, ಈಗ ಜಿಲ್ಲೆಯಲ್ಲಿ ಸಮಸ್ಯೆಗಳನ್ನು ಕೇಳುವವರೇ ಇಲ್ಲವಾಗಿದ್ದಾರೆ ಎಂದರು.

ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮಣ್ಣವರ, ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕ ರಾಜೇಂದ್ರ ಪಾಟೀಲ, ಮುಖಂಡ ಅರುಣ ಕಟಾಂಬಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT