ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಜಲಸಂಕಷ್ಟ: ಜನರ ಪರದಾಟ

ಆಯಾ ಗ್ರಾಮ ಪಂಚಾಯ್ತಿಗಳಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ
Published 21 ಮಾರ್ಚ್ 2024, 4:49 IST
Last Updated 21 ಮಾರ್ಚ್ 2024, 4:49 IST
ಅಕ್ಷರ ಗಾತ್ರ

ಮೂಡಲಗಿ: ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಏರ್ಪಟ್ಟಿದೆ. ಸುಣಧೋಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನಕುಪ್ಪಿ, ತಿಗಡಿ ಗ್ರಾಮ ಪಂಚಾಯ್ತಿಯ ಸಿದ್ದಾಪುರಹಟ್ಟಿ ಮತ್ತು ಹಳ್ಳೂರ ಗ್ರಾಮ ಪಂಚಾಯ್ತಿಗೆ ಸೇರಿದ ಗ್ರಾಮಗಳಲ್ಲಿ ಜಲಸಂಕಷ್ಟ ಗಂಭೀರ ಸ್ವರೂಪ ತಳೆದಿದ್ದು, ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ.

ಮಳೆ ಕೈಕೊಟ್ಟಿದ್ದರಿಂದ ಹಲವು ಗ್ರಾಮಗಳು ಜಲಬವಣೆ ಎದುರಿಸುತ್ತಿವೆ. ಹೊನಕುಪ್ಪಿಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. 1 ಸಾವಿರ ಅಡಿ ಆಳದವರೆಗೆ ಕೊಳವೆಬಾವಿ ಕೊರೆಯಿಸಿದರೂ, ನೀರು ಸಿಗುತ್ತಿಲ್ಲ. ಬಹುತೇಕ ಕೊಳವೆ ಬಾವಿ ಬತ್ತಿಹೋಗಿವೆ. ಇದಲ್ಲದೆ, ಪ್ರಮುಖ ಜಲಮೂಲವಾದ ತೋಟದ ಬಾವಿಗಳೂ ಬತ್ತಿಹೋಗಿ ಒಂದು ತಿಂಗಳಾಗಿದೆ. 4 ಸಾವಿರ ಜನಸಂಖ್ಯೆಯ ಹೊನಕುಪ್ಪಿಯಲ್ಲಿ ಜನರು ಕುಡಿಯುವ ನೀರಿಗಾಗಿ ಜನರು ಕೊಡಗಳನ್ನು ಹೊತ್ತು ತಿರುಗುವಂತಾಗಿದೆ.

‘ಹೊನಕುಪ್ಪಿಯಲ್ಲಿ ನಿತ್ಯ 2 ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಬಿಲಕುಂದಿ ಬಳಿ ಖಾಸಗಿ ಬಾವಿ ಗುರುತಿಸಿ, ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ತೋಟಪಟ್ಟಿಯ ಮನೆಗಳಿಗೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ’ ಎಂದು ಸುಣಧೋಳಿ ಪಿಡಿಒ ಮಲ್ಲಾರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಹೊನಕುಪ್ಪಿಯಲ್ಲಿ ಈಗ ಒದಗಿಸುತ್ತಿರುವ ಟ್ಯಾಂಕರ್‌ ನೀರು ಸಾಲುತ್ತಿಲ್ಲ. ಪ್ರತಿದಿನ ಕನಿಷ್ಠ ಮೂರು ಟ್ಯಾಂಕರ್‌ ಒದಗಿಸಬೇಕು’ ಎಂಬ ಒತ್ತಾಯ ಜನರಿಂದ ಕೇಳಿಬರುತ್ತಿದೆ.

‘1,200 ಜನಸಂಖ್ಯೆಯ ಸಿದ್ದಾಪುರಹಟ್ಟಿ ಗ್ರಾಮದಲ್ಲಿನ ಬಾವಿಗಳೆಲ್ಲ ಬತ್ತಿವೆ. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿ, ಜನರಿಗೆ ಯಾವ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತಿದೆ’ ಎನ್ನುತ್ತಾರೆ ಪಿಡಿಒ ಶಿವಾನಂದ ಪತ್ತಾರ.

ಹಳ್ಳೂರ ಗ್ರಾಮದ ನವನಗರ, ಹೆಳವರ ಪ್ಲಾಟ್‌ಗೆ ಫೆಬ್ರುವರಿಯಿಂದಲೇ ಟ್ಯಾಂಕರ್‌ ಮೂಲಕ ನೀರು ಸರಬರಾಜು ಪ್ರಕ್ರಿಯೆ ನಡೆದಿದೆ. ‘ಹಳ್ಳೂರಿನ ಬಿಸಿಎಂ ಹಾಸ್ಟೆಲ್‌, ಬಿಕೆಎಂ ಶಾಲೆಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ನೀರಿನ ಸಮಸ್ಯೆ ನಿರ್ವಹಣೆಗೆ ಎಲ್ಲ ರೀತಿಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಪಿಡಿಒ ಆರ್‌.ಎನ್.ಗುಜನಟ್ಟಿ ಹೇಳಿದರು.

ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಜಲಾಶಯದಿಂದ ಕೆಲ ದಿನಗಳ ಹಿಂದೆ ಘಟಪ್ರಭಾ ನದಿ ಮತ್ತು ಕಾಲುವೆಗೆ ನೀರು ಬಿಡಲಾಗಿದೆ. ಹಾಗಾಗಿ ಘಟಪ್ರಭಾ ನದಿಪಾತ್ರದ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿಲ್ಲ. ಅವರಾದಿ, ಢವಳೇಶ್ವರ ಭಾಗದಲ್ಲಿ ಹರಿದಿರುವ ನದಿಯೊಡಲು ಈಗಾಗಲೇ ಬರಿದಾಗಿದೆ.

ಬಿ.ಎಸ್. ಕಡಕಬಾವಿ

ಬಿ.ಎಸ್. ಕಡಕಬಾವಿ

‘ನೀರಿನ ಸಮಸ್ಯೆ ನಿರ್ವಹಣೆಗೆ ಸಜ್ಜು’
‘ಮೂಡಲಗಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ತಾಲ್ಲೂಕು ಆಡಳಿತ ಸಜ್ಜಾಗಿದೆ. ಹೊನಕುಪ್ಪಿ, ಸಿದ್ದಾಪುರಹಟ್ಟಿ, ಹಳ್ಳೂರ ಹೊರತುಪಡಿಸಿದರೆ, ಬೇರ್‍ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇಲ್ಲ. ಶಾಸಕ ಬಾಲಚಂದ್ರ ಜಾರಕಿಹೊಳಿ ನಿರ್ದೇಶನದಂತೆ, ಇತ್ತೀಚೆಗೆ ತಾಲ್ಲೂಕು ಟಾಸ್ಕ್‌ಫೋರ್ಸ್‌ ಸಮಿತಿ ಸಭೆ ಕರೆದು ಚರ್ಚಿಸಲಾಗಿದೆ. ನೀರಿನ ಸಮಸ್ಯೆ ನಿಭಾಯಿಸುವಂತೆ ಎಲ್ಲ ಪಿಡಿಒಗಳಿಗೆ ಸೂಚಿಸಲಾಗಿದೆ’ -ತಹಶೀಲ್ದಾರ್ ಬಿ.ಎಸ್.ಕಡಕಬಾವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT