ಪಿಎಲ್‌ಡಿಬ್ಯಾಂಕ್‌ ಚುನಾವಣೆ:ಸತೀಶಗೆ ಅವಮಾನವಾದರೆ ಕಠಿಣ ನಿರ್ಧಾರ-ರಮೇಶ ಜಾರಕಿಹೊಳಿ

7

ಪಿಎಲ್‌ಡಿಬ್ಯಾಂಕ್‌ ಚುನಾವಣೆ:ಸತೀಶಗೆ ಅವಮಾನವಾದರೆ ಕಠಿಣ ನಿರ್ಧಾರ-ರಮೇಶ ಜಾರಕಿಹೊಳಿ

Published:
Updated:

ಬೆಳಗಾವಿ: ‘ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಸಹೋದರ, ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಅವಮಾನವಾದರೆ ನಾವು ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದು ಸಚಿವ ರಮೇಶ ಜಾರಕಿಹೊಳಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಲಕ್ಷ್ಮಿ ಅವರನ್ನು ಜಾರಕಿಹೊಳಿ ಕುಟುಂಬವೇ ಬೆಳೆಸಿದೆ. ನಾನು ವಿರೋಧಿಸಿದ್ದಾಗಲೂ ಸತೀಶ ಅವರು ಲಕ್ಷ್ಮಿ ಅವರನ್ನು ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಿದ್ದರು. ಈಗ ಶಾಸಕಿಯಾದ ಮೇಲೆ ಮೆರೆದಾಡುತ್ತಿದ್ದಾರೆ. ಸೊಕ್ಕಿನಿಂದ ಮೆರೆದಾಡಬಾರದು. ಜನರು ಬುದ್ಧಿ ಕಲಿಸುತ್ತಾರೆ’ ಎಂದು ಹೇಳಿದರು.

ಇನ್ನೊಬ್ಬರಿಂದ ಹಣ ಪಡೆದುಕೊಳ್ಳುವ ಸ್ಥಿತಿ ನಮ್ಮ ಕುಟುಂಬಕ್ಕೆ ಬಂದಿಲ್ಲ. ₹ 90 ಕೋಟಿ ಕೊಟ್ಟಿದ್ದೇನೆ ಎಂದು ಲಕ್ಷ್ಮಿ ಹೇಳಿರುವುದು ಸುಳ್ಳು. ಅವರ ತಂದೆ ಕ್ಯಾನ್ಸರ್‌ನಿಂದ ನರಳಾಡುತ್ತಿದ್ದಾಗ ನಾವು ಸಹಾಯ ಮಾಡಿದ್ದೇವೆ. ಬೆಂಗಳೂರಿನವರು ಸಹಾಯ ಮಾಡಿಲ್ಲ ಎಂದು ಕುಟುಕಿದರು.

ಲಕ್ಷ್ಮಿ ಅವರಿಗೆ ಸೇರಿದ ಹರ್ಷಾ ಸಕ್ಕರೆ ಕಾರ್ಖಾನೆಯ ವಹಿವಾಟಿನ ಕುರಿತು ಆದಾಯ ತೆರಿಗೆ ಇಲಾಖೆಯಲ್ಲಿ ವಿಚಾರಣೆ ನಡೆದಿದೆ. ಮುಂದೊಂದು ದಿನ ಲಕ್ಷ್ಮಿ ಅವರು ತೊಂದರೆ ಅನುಭವಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ನಾನು ಸಚಿವ ಹೇಗಾದೆ ಎನ್ನುವುದನ್ನು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನನ್ನ ಪರ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಪರ ನಾನು ಲಾಬಿ ಮಾಡಿದ್ದೆ. ಅವರು ಕೂಡ ನನ್ನ ಗೆಳೆಯರಾಗಿದ್ದಾರೆ ಎಂದು ಹೇಳಿದರು.

ಪ್ರತಿಕ್ರಿಯಿಸಲ್ಲ– ಲಕ್ಷ್ಮಿ;

‘ಚುನಾವಣೆ ಹಾಗೂ ಜಾರಕಿಹೊಳಿ ಅವರ ಹೇಳಿಕೆ ಕುರಿತು ಏನನ್ನೂ ಪ್ರತಿಕ್ರಿಯಿಸುವುದಿಲ್ಲ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ’ಪ್ರಜಾವಾಣಿ’ಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !