ಗುರುವಾರ , ಆಗಸ್ಟ್ 11, 2022
21 °C
ವೆಬಿನಾರ್‌ನಲ್ಲಿ ಡಾ.ಲಿಂಗಣ್ಣ ಗೋನಾಳ ಅಭಿಮತ

ಸಮ ಸಮಾಜಕ್ಕೆ ಆಶಿಸಿದ ಶಿವಶರಣರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸಮ ಸಮಾಜದ ಆದರ್ಶಗಳನ್ನು ಗುರಿಯಾಗಿಸಿಕೊಂಡಿದ್ದ ಶಿವಶರಣರು ತಮ್ಮ ಕಾಲದಲ್ಲಿ ಬಲಿಷ್ಠವಾಗಿದ್ದ ಅರಸೊತ್ತಿಗೆ ಮತ್ತು ಪುರೋಹಿತಶಾಹಿಯನ್ನು ಏಕಕಾಲಕ್ಕೆ ಎದುರಿಸಿ ದುಡಿಯುವ ಜನರ ಪರ ನಿಂತರು’ ಎಂದು ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥ  ಡಾ.ಲಿಂಗಣ್ಣ ಗೋನಾಳ ಸ್ಮರಿಸಿದರು.

ಬಂಡಾಯ ಸಾಹಿತ್ಯ ಸಂಘಟನೆ ಜಿಲ್ಲಾ ಘಟಕದಿಂದ ಭಾನುವಾರ ಆಯೋಜಿಸಿದ್ದ ‘ಕನ್ನಡ ಸಾಹಿತ್ಯದಲ್ಲಿ ಪ್ರತಿರೋಧದ ನೆಲೆಗಳು’ ಕುರಿತ ರಾಷ್ಟ್ರಮಟ್ಟದ ವೆಬಿನಾರ್‌ನಲ್ಲಿ ‘ನಡುಗನ್ನಡ ಸಾಹಿತ್ಯದಲ್ಲಿ ಪ್ರತಿರೋಧದ ನೆಲೆಗಳು’ ವಿಷಯ ಕುರಿತು ಅವರು ಮಾತನಾಡಿದರು.

‘ನರನಿಗಿಂತ ಶಿವನಿಗೆ ನಿಷ್ಠೆ ಇದ್ದ ವಚನಕಾರರು, ಆಳುವವರ ಅರಮನೆಗಿಂತ ದುಡಿಯುವವರ ಗುಡಿಸಲುಗಳಿಗೆ ಸಮೀಪರಾಗಿ ಕಾಯಕ ಮತ್ತು ದಾಸೋಹ ಪರಿಕಲ್ಪನೆಯನ್ನು ಪ್ರತಿಪಾದಿಸಿದರು. ಮಧ್ಯಕಾಲೀನ ಸಾಹಿತ್ಯದ ಪ್ರಮುಖ ಧಾರೆಗಳಾದ ವಚನ ಮತ್ತು ಕೀರ್ತನ ಸಾಹಿತ್ಯಗಳು ಭಕ್ತಿಯ ಮೂಲಕವೇ ಧಾರ್ಮಿಕ ಸುಧಾರಣೆಗೆ, ಆ ಮೂಲಕ ಸಾಮಾಜಿಕ ಸಮಾನತೆಗಾಗಿ ಹೋರಾಡಿದುದು ಗಣನೀಯ ಸಾಧನೆ’ ಎಂದರು.

‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಪ್ರತಿರೋಧದ ನೆಲೆಗಳು’ ವಿಷಯ ಕುರಿತು ಮಾತನಾಡಿದ ಬೆಂಗಳೂರಿನ ಡಾ.ರಂಗಾರೆಡ್ಡಿ ಕೋಡಿರಾಂಪುರ, ‘ಬಹುತೇಕ ಚಂಪೂ ಕವಿಗಳು ರಾಜಾಶ್ರಯದಲ್ಲಿದ್ದರೂ ಸ್ವಂತಿಕೆ ಬಿಟ್ಟುಕೊಡಲಿಲ್ಲ. ರಾಜಶಾಹಿಯ ಯುದ್ಧದ ಭೀಕರತೆ ಮತ್ತು ಪುರೋಹಿತಶಾಹಿಯ ಕುಲದ ಅಹಮ್ಮಿಕೆಯನ್ನು ಕಾವ್ಯದ ಮೂಲಕ ಪ್ರತಿರೋಧಿಸಿದರು. ಕರ್ಣ, ಏಕಲವ್ಯ, ದುರ್ಯೋಧನ ಮುಂತಾದ ಪಾತ್ರಗಳ ಮೂಲಕ ಸಮಾನತೆಯ ಆಶಯಗಳನ್ನು ಪ್ರತಿಪಾದಿಸಿದ್ದಾರೆ’ ಎಂದು ತಿಳಿಸಿದರು.

ಧಾರವಾಡದ ಡಾ.ಅನಸೂಯಾ ಕಾಂಬಳೆ ‘ಹೊಸಗನ್ನಡ ಸಾಹಿತ್ಯದಲ್ಲಿ ಪ್ರತಿರೋಧದ ನೆಲೆಗಳು’ ಕುರಿತು ಮಾತನಾಡಿ, ‘ಹಿಂದಿನ ಕಾಲದ ರಾಜಪ್ರಭುತ್ವಕ್ಕೂ ಇಂದಿನ ಕಾಲದ ಪ್ರಜಾಪ್ರಭುತ್ವದ ಸಾಹಿತ್ಯದಲ್ಲಿನ ಪ್ರತಿರೋಧದ ನೆಲೆಗಳಲ್ಲಿ ಅನೇಕ ವ್ಯತ್ಯಾಸಗಳಿವೆ. ಹೊಸಗನ್ನಡದ ಪ್ರಾರಂಭದಲ್ಲಿ ಮಧ್ಯಮ ವರ್ಗದ ಬರಹಗಾರರು ವ್ಯಕ್ತಿ ವಿಶಿಷ್ಟದ ನೆಲೆಯಲ್ಲಿ ಹಳೆಯಕಾಲದ ಕಾವ್ಯ ಛಂದಸ್ಸನ್ನು, ಧಾರ್ಮಿಕ ಚೌಕಟ್ಟನ್ನು ಮುರಿದು ಕಟ್ಟುವಲ್ಲಿ ಪ್ರತಿರೋಧದ ನೆಲೆಗಳನ್ನು ಪ್ರಕಟಿಸಿದ್ದಾರೆ. ದಲಿತ ಬಂಡಾಯ ಸಾಹಿತ್ಯ ಚಳವಳಿ ಕಾಲದಲ್ಲಿ ಸೈದ್ಧಾಂತಿಕವಾಗಿ ಬದ್ಧತೆಯಿಂದ ಬರೆಯತೊಡಗಿದ ತುಳಿತಕ್ಕೊಳಗಾದ ವರ್ಗದ ಬರಹಗಾರರು ಬದುಕಿನ ಭಾಗವಾಗಿದ್ದ ಗಾಢ ರಾಜಕೀಯ ಚಿಂತನೆ ಮತ್ತು ಹೊಸ ಸೌಂದರ್ಯ ಮೀಮಾಂಸೆಯನ್ನು ಪ್ರತಿಪಾದಿಸಿ ಸಾಮೂಹಿಕ ಹೋರಾಟಕ್ಕೆ ಮಹತ್ವ ನೀಡಿದರು. ಬರಹಗಾರರೇ ಹೋರಾಟಗಾರರಾಗಿದ್ದರಿಂದ ಪ್ರತಿರೋಧಕ್ಕೆ ಆಂತರ್ಯದ ಗಟ್ಟಿ ವೈಚಾರಿಕತೆ ಕಾರಣವಾಗಿದೆ’ ಎಂದು ವಿವರಿಸಿದರು.

ಬಂಡಾಯ ಬರಹಗಾರರಾದ ಪ್ರೊ.ಬರಗೂರು ರಾಮಚಂದ್ರಪ್ಪ, ಬಿ.ಎಂ. ಹನೀಫ್, ಬಾ.ಹಾ. ರಮಾಕುಮಾರಿ, ಕೆ.ಶರೀಫ, ಭಕ್ತರಹಳ್ಳಿ ಕಾಮರಾಜ್, ಮುಮ್ತಾಜ್ ಬೇಗಂ, ಪುಷ್ಪಾ ಭಾರತಿ, ಶೋಭಾ ನಾಯಕ, ಲಕ್ಷ್ಮೀನಾರಾಯಣ, ನಾಗಭೂಷಣ್ ಬಗ್ಗನಡು, ಓಂ ನಾಗರಾಜ್ ವೆಬಿನಾರ್‌ನಲ್ಲಿ ಭಾಗವಹಿಸಿದ್ದರು.

ಬಂಡಾಯ ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾವತಿಯ ರಂಜನಿ ಆರತಿ, ಬೆಳಗಾವಿಯ ಕಾವೇರಿ ಬುಕ್ಯಾಳಕರ, ಸುಧಾ ಕೊಟಬಾಗಿ, ದಿವ್ಯಾ ಕಾಂಬಳೆ ಕ್ರಾಂತಿಗೀತೆಗಳನ್ನು ಹಾಡಿದರು. ತೂಮಕೂರಿನ ಕುಮಾರಸ್ವಾಮಿ ಬೆಜ್ಜಿಹಳ್ಳಿ ಮತ್ತು ರೋಷನ್ ಆನೆಸ್ಟರಾಜ್ ನಿರ್ವಹಣೆ ಮಾಡಿದರು. ಜಿಲ್ಲಾ ಸಂಚಾಲಕ ದೇಮಣ್ಣ ಸೊಗಲದ ಸ್ವಾಗತಿಸಿದರು. ಕವಿ ನದೀಮ ಸನದಿ ನಿರೂಪಿಸಿದರು. ಅಡಿವೆಪ್ಪ ಇಟಗಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು