ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಟುತ್ತಿರುವ ‘ಸ್ಮಾರ್ಟ್‌’ ರಸ್ತೆ ಕಾಮಗಾರಿ

ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದಿದ್ದರು
Last Updated 7 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಅನುಷ್ಠಾನಗೊಳಿಸಿರುವ ‘ಸ್ಮಾರ್ಟ್‌ ಸಿಟಿ’ ಯೋಜನೆಯಲ್ಲಿ ಕೈಗೊಂಡಿರುವ ‘ಸ್ಮಾರ್ಟ್‌ ರಸ್ತೆ ನಿರ್ಮಾಣ’ ಕಾಮಗಾರಿಗಳು ಕುಂಟುತ್ತಾ ಸಾಗಿವೆ. ಇದರಿಂದಾಗಿ ಸಾರ್ವಜನಿಕರು ಮತ್ತು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.

ಜವಾಹರಲಾಲ್‌ ನೆಹರೂ ವೈದ್ಯಕೀಯ ಕಾಲೇಜು ಕ್ಯಾಂಪಸ್‌ ಎದುರಿನಿಂದ ರಾಷ್ಟ್ರೀಯ ಹೆದ್ದಾರಿ–4ಕ್ಕೆ ಸಂಪರ್ಕ ಕಲ್ಪಿಸುವ ಆರ್.ಎನ್. ಶೆಟ್ಟಿ ಕಾಲೇಜು ಮುಂದಿನ ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ 2017ರ ಡಿ. 3ರಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚಾಲನೆ ನೀಡಿದ್ದರು. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಲಾಗಿತ್ತು. ಆದರೆ ವರ್ಷದ ಮೇಲೆ ನಾಲ್ಕು ತಿಂಗಳುಗಳು ಕಳೆದಿದ್ದರೂ ಪೂರ್ಣಗೊಂಡಿಲ್ಲ. ಬದಲಿಗೆ ಬಾಕಿ ಕಾಮಗಾರಿಯೇ ಬಹಷ್ಟಿದೆ! ಮಂಡೋಳ್ಳಿ ರಸ್ತೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

‘ಕೆಪಿಟಿಸಿಎಲ್ ಸಮುದಾಯ ಭವನದ ಎದುರಿನ ರಸ್ತೆ ಕೇವಲ 2 ಕಿ.ಮೀ. ಉದ್ದವೂ ಇಲ್ಲ. ಇದಕ್ಕೇ ಇಷ್ಟೊಂದು ಸಮಯ ತೆಗೆದುಕೊಂಡರೆ ಹೇಗೆ? ಅಗೆಯುವುದರಲ್ಲಿಯೇ ಬಹಳಷ್ಟು ಸಮಯ ಹೋಗುತ್ತಿದೆ. ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿರುವುದು ಕಾಣುತ್ತಿಲ್ಲ. ಇದರಿಂದ ಈ ಭಾಗದ ಜನರು ಮತ್ತು ವಿದ್ಯಾರ್ಥಿಗಳಿಗೆ ತೀವ್ರ ಅನಾನುಕೂಲವಾಗುತ್ತಿದೆ. ರಸ್ತೆ ಪಕ್ಕದ ಮನೆಗಳವರು ಸುತ್ತಿ ಬಳಸಿ ಓಡಾಡುವುದು ತಪ್ಪಿಲ್ಲ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಜನರಿಗೆ ಅನುಕೂಲ ಮಾಡಿಕೊಡಬೇಕು’ ಎನ್ನುವುದು ಅಲ್ಲಿನ ನಿವಾಸಿಗಳ ಒತ್ತಾಯವಾಗಿದೆ.

ಕೆಪಿಟಿಸಿಎಲ್‌ ರಸ್ತೆ (705 ಮೀ. ಉದ್ದ ಹಾಗೂ 24 ಮೀ. ಅಗಲ) ಮತ್ತು ಏರ್‌ಫೋರ್ಸ್‌ ಮೈದಾನದಿಂದ ದತ್ತಗುರು ದೇವಸ್ಥಾನದವರೆಗಿನ ಮಂಡೋಳ್ಳಿ ರಸ್ತೆಯನ್ನು (950 ಮೀ. ಉದ್ದ, 24 ಮೀ. ಅಗಲ) ಅಭಿವೃದ್ಧಿಪಡಿಸಲಾಗುತ್ತಿದೆ. ಪಾದಚಾರಿ ಮಾರ್ಗ, ಬೈಸಿಕಲ್‌ ಪಥಗಳು ಇರಲಿವೆ. ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗುವುದು. ಬೀದಿ ದೀಪಗಳಿಗೆ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ₹ 22.39 ಕೋಟಿ ವಿನಿಯೋಗಿಸಲಾಗುತ್ತಿದೆ.

ಕಾಮಗಾರಿಗೆ ಚಾಲನೆ ನೀಡಿದ ಜನಪ್ರತಿನಿಧಿಗಳು ನಂತರ ಪ್ರಗತಿ ಪರಿಶೀಲನೆಗೆ ಗಮನ ಕೊಡಲಿಲ್ಲ. ಸ್ಥಳದಲ್ಲಿನ ಪರಿಸ್ಥಿತಿ ನೋಡಿದರೆ, ಸದ್ಯಕ್ಕೆ ಕಾಮಗಾರಿಗಳು ಪೂರ್ಣಗೊಳ್ಳುವ ಲಕ್ಷ್ಮಣಗಳು ಕಾಣುತ್ತಿಲ್ಲ. ಕೆಪಿಟಿಸಿಎಲ್‌ ರಸ್ತೆಯಲ್ಲಿ ಹಲವು ಕಾಲೇಜುಗಳು ಬರುತ್ತವೆ. ಕಾಲೇಜುಗಳಿಗೆ ಹೋಗುವುದಕ್ಕೆ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ‘ಒಂದು ವರ್ಷದಿಂದಲೂ ಧೂಳಿನಿಂದಾಗಿ ರೋಸಿ ಹೋಗಿದ್ದೇವೆ. ಮುಂಗಾರು ಮಳೆ ಆರಂಭಗೊಳ್ಳುವುದಕ್ಕೆ ಮುನ್ನ ಪೂರ್ಣಗೊಳಿಸದಿದ್ದರೆ ಮತ್ತಷ್ಟು ತೊಂದರೆಯಾಗುತ್ತದೆ’ ಎನ್ನುತ್ತಾರೆ ಅವರು.

ಕಾಮಗಾರಿಯ ವಿವರ, ಗುತ್ತಿಗೆದಾರರು ಹಾಗೂ ಯಾವಾಗ ಪೂರ್ಣಗೊಳ್ಳುತ್ತದೆ ಎನ್ನುವ ಫಲಕವನ್ನು ಕೆಲಸದ ಸ್ಥಳದಲ್ಲಿ ಹಾಕಬೇಕು ಎನ್ನುತ್ತದೆ ನಿಯಮ. ಆದರೆ, ಇಲ್ಲಿ ಅಂತಹ ಯಾವುದೇ ಫಲಕ ಅಳವಡಿಸಿಲ್ಲ. ಹೀಗಾಗಿ, ರಸ್ತೆಯು ಸಾರ್ವಜನಿಕ ಬಳಕೆಗೆ ಮುಕ್ತವಾಗುವುದು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ದೊರೆಯುತ್ತಿಲ್ಲ.

ಕಾಮಗಾರಿ ಆರಂಭವಾದಾಗ ಜಿಲ್ಲಾಧಿಕಾರಿಯಾಗಿದ್ದ ಎಸ್. ಜಿಯಾವುಲ್ಲಾ ಈಗ ಸ್ಮಾರ್ಟ್‌ ಸಿಟಿ ಕಂ‍ಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಪ್ರತಿಕ್ರಿಯೆಗೆ ಅವರು ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT