ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಚುನಾವಣೆಯಲ್ಲಿ ಸ್ಪರ್ಧೆ: ರಾಮೇಗೌಡ

Last Updated 10 ಮಾರ್ಚ್ 2021, 14:53 IST
ಅಕ್ಷರ ಗಾತ್ರ

ಬೆಳಗಾವಿ: ‘ನಾಲ್ಕು ದಶಕಗಳಿಂದ ಕನ್ನಡ ಪರಿಚಾಕರನಾಗಿ ನಾಡು–ನುಡಿಯ ಕೈಂಕರ್ಯದಲ್ಲಿ ತೊಡಗಿರುವ ನಾನು ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ’ ಎಂದು ಪರಿಷತ್ತಿನ ನಿಕಟ ಪೂರ್ವ ಗೌರವ ಕಾರ್ಯದರ್ಶಿ ಸಿ.ಕೆ. ರಾಮೇಗೌಡ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಮೂರೂವರೆ ವರ್ಷ ಹಾಗೂ ಗೌರವ ಕಾರ್ಯದರ್ಶಿಯಾಗಿ 2013ರಿಂದ 15ರವರೆಗೆ ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದ್ದೇನೆ. ಹತ್ತು ಹಲವು ಮಹತ್ವದ ಕಾರ್ಯಕ್ರಮಗಳ ಮೂಲಕ ಕನ್ನಡದ ಬೆಳವಣಿಗೆಗೆ ಶ್ರಮಿಸಿದ್ದೇನೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕುವೆಂಪು ಅವರ ಹೆಸರಿನಲ್ಲಿ ₹ 8 ಲಕ್ಷ ದತ್ತಿ ನಿಧಿ ಸ್ಥಾಪಿಸಿದ್ದೇನೆ’ ಎಂದು ಹೇಳಿದರು.

‘ಕಸಾಪ ಎಲ್ಲ ಕನ್ನಡಿಗರ ಧ್ವನಿ ಆಗಬೇಕೆಂಬ ಅಪೇಕ್ಷೆ ನನ್ನದು. ಕನ್ನಡದ ಅಸ್ಮಿತೆ ಕಾಪಾಡುವುದಕ್ಕಾಗಿ ಹಿಂದಿನಿಂದಲೂ ಹೋರಾಡಿಕೊಂಡು ಬಂದಿದ್ದೇನೆ. ಪರಿಷತ್ತಿನಲ್ಲಿ ಜಾತಿ, ಹಣ, ಪ್ರಾದೇಶಿಕತೆ ಎಂಬ ಭಿನ್ನತೆ ಹೋಗಲಾಡಿಸುವ ಸಂಕಲ್ಪದೊಂದಿಗೆ ಅಖಂಡ ಕರ್ನಾಟಕದ ಪರಿಕಲ್ಪನೆಯೊಂದಿಗೆ ಸ್ಪರ್ಧಿಸುತ್ತಿದ್ದೇನೆ. ಗ್ರಾಮಕ್ಕೊಂದು ವಾಚನಾಲಯ, ಪಂಚಾಯ್ತಿಗೊಂದು ಗ್ರಂಥಾಲಯ ಸ್ಥಾಪಿಸುವ ಉದ್ದೇಶ ಹೊಂದಿದ್ದೇನೆ’ ಎಂದು ತಿಳಿಸಿದರು.

‘ಹಳೆಗನ್ನಡ ಮರು ಓದು, ಗಮಕ ವಾಚನ, ಜಾನಪದ ಕಲಾ ಪ್ರದರ್ಶನ, ವಿಶೇಷ ಸಾಹಿತ್ಯ ಕಮ್ಮಟ, ಪುಸ್ತಕ ಮೇಳ ಆಯೋಜನೆ, ಗಡಿ ಭಾಗದ ಕನ್ನಡ ಶಾಲೆಗಳನ್ನು ದತ್ತು ಪಡೆದು ಸಬಲೀಕರಣಗೊಳಿಸುವ ಯೋಜನೆ ಇದೆ. ನಗರ, ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಬಡಾವಣೆಗಳಿಗೆ ಸಾಹಿತಿಗಳು ಮತ್ತು ಕನ್ನಡ ಹೋರಾಟಗಾರರ ಹೆಸರು ನಾಮಕರಣಕ್ಕೆ ಕ್ರಮ ಕೈಗೊಳ್ಳುವೆ. ಕನ್ನಡ ಕುಲೋದ್ಧಾರಕ ಮಾಲಿಕೆಯಲ್ಲಿ ಕಿರುಹೊತ್ತಿಗೆಗಳನ್ನು ಪ್ರಕಟಿಸುವ ಯೋಜನೆ ಇದೆ. ಸದಸ್ಯರು ಬೆಂಬಲಿಸಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT