ಸೋಮವಾರ, ಫೆಬ್ರವರಿ 17, 2020
16 °C
ಅಭಿಮಾನಿ ಬಳಗದಿಂದ ರಮೇಶ ಜಾರಕಿಹೊಳಿಗೆ ಅಭಿನಂದನೆ

‘ಸಂಜಯಗಾದ ಅನ್ಯಾಯ ಸರಿಪಡಿಸುವೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕಾಕ: ‘ಮುಖಂಡ ಸಂಜಯ ಪಾಟೀಲ ಅವರಿಗೆ ನನ್ನಿಂದ ನೋವಾಗಿದೆ. ಇದಕ್ಕಾಗಿ ಅವರ ಕ್ಷಮೆ ಕೋರುತ್ತೇನೆ. ಅವರಿಗೆ ಆಗಿರುವ ಅನ್ಯಾಯವನ್ನು ಮುಂದಿನ ದಿನಗಳಲ್ಲಿ ಸರಿಪಡಿಸುತ್ತೇನೆ’ ಎನ್ನುವ ಮೂಲಕ ಸಚಿವ ರಮೇಶ ಜಾರಕಿಹೊಳಿ, ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌  ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ಬಿಜೆಪಿ ನಗರ ಮತ್ತು ಗ್ರಾಮೀಣ ಘಟಕಗಳು ಹಾಗೂ ಅಭಿಮಾನಿಗಳ ಬಳಗದಿಂದ ಭಾನುವಾರ ಇಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ‘ನಾನು ಮಾಜಿ ಶಾಸಕನಾಗಲು ರಮೇಶ ಅವರೇ ಕಾರಣ. ಆದರೆ, ಅವರ  ಮನಸ್ಸಿನಲ್ಲಿ ಕಪಟವಿಲ್ಲ ಎನ್ನುವುದು ಬಿಜೆಪಿಗೆ ಬಂದ ನಂತರ ಗೊತ್ತಾಯಿತು. ನನ್ನ ವಿಷಯದಲ್ಲೂ ಅವರು ಮಾತಾಡಿದ್ದನ್ನು ಮಾಡಿ ತೋರಿಸಿದರು. ಪರಿಣಾಮ ಮಾಜಿಯಾದೆ. ಅವರು ರಾಜಕೀಯ ರಂಗದ ಹುಲಿ; ವಿಶ್ವಾಸಕ್ಕೆ ಮತ್ತೊಂದು ಹೆಸರು. ಅವರ ಧೈರ್ಯ, ತ್ಯಾಗದಿಂದಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರು ನೀರಾವರಿ ಮಂತ್ರಿ ಆಗುತ್ತಾರೆ’ ಎಂದು ಕೊಂಡಾಡಿದರು.

‘ನಾನು ಮಾಜಿ ಶಾಸಕನಾಗಿಯೇ ಉಳಿಯುವ ಮನಸ್ಸಿಲ್ಲ. ನನ್ನ ಕಾರು ಮನೆಯಲ್ಲೇ ನಿಲ್ಲಿಸಿದ್ದೇನೆ. ಅದನ್ನು ಹೊರಗೆ ತೆಗೆಯಲು ಅವರ ಆಶೀರ್ವಾದ ಬೇಕು’ ಎಂದು ಕೋರಿದರು. ಪ್ರತಿಕ್ರಿಯಿಸಿದ ರಮೇಶ ಕ್ಷಮೆ ಕೋರಿದ್ದಲ್ಲದೇ, ಸರಿಪಡಿಸುವ ಭರವಸೆಯನ್ನೂ ನೀಡಿದರು.

ಜಲಸಂಪನ್ಮೂಲ ಖಾತೆ ಕೇಳಿದ್ದೇವೆ

ಅಥಣಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ‘ರಮೇಶ ಅವರನ್ನು ಜಲಸಂಪನ್ಮೂಲ ಸಚಿವರನ್ನಾಗಿ ಮಾಡುವಂತೆ ಒತ್ತಾಯಿಸಿದ್ದೇವೆ. ಹಿಂದೆ ಗೋಕಾಕ ಕರದಂಟಿಗೆ ಫೇಮಸ್ಸಾಗಿತ್ತು. ಈಗ ರಮೇಶ ಜಾರಕಿಹೊಳಿ‌ ಫೇಮಸ್‌’ ಎಂದು ಹೇಳಿದರು.

ವಿಧಾನಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ‘ರಾಜಕೀಯ ಪರಿವರ್ತನೆ ಆರಂಭವಾಗಿದ್ದು ಗೋಕಾಕದಿಂದ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಉತ್ತರ ಕರ್ನಾಟಕದ ಜನರು ಸುಮ್ಮನೆ ಇರುವುದಿಲ್ಲ ಎನ್ನುವುದು ಸಾಬೀತಾಗಿದೆ. ರಮೇಶ ಅವರ ಸಂಕಲ್ಪ ಪೂರ್ಣವಾಗಿದೆ. ಅವರಿಗೆ ಜಲಸಂಪನ್ಮೂಲ ಖಾತೆ ಸಿಗಬೇಕು ಎನ್ನುವುದು ನಮ್ಮ ಬಯಕೆ. ಹಲವು ಯೋಜನೆಗಳ ಪೂರ್ಣಗೊಳ್ಳಲು ಅವರು ಸಚಿವರಾಗಬೇಕು’ ಎಂದು ಆಶಿಸಿದರು.

‘ಹುಲಿ ಅಥವಾ ಸಿಂಹದ ಬಾಯಲ್ಲಿ ಕೈಯಲ್ಲ ತಲೆಯನ್ನೇ ಹಾಕಿ ಮತ್ತು ಮರಳಿ ಬಂದ ಸಾಧನೆ ರಮೇಶ ಅವರದ್ದಾಗಿದೆ’ ಎಂದು ಬಿಜೆಪಿ ವಿಭಾಗೀಯ ಉಸ್ತುವಾರಿ ಈರಣ್ಣ ಕಡಾಡಿ ಬಣ್ಣಿಸಿದರು.

ಶಾಸಕರಾದ ಆನಂದ ಮಾಮನಿ, ಮಹಾದೇವಪ್ಪ ಯಾದವಾಡ, ನಿಪ್ಪಾಣಿಯ ಅಶೋಕ ಅಸೋದೆ ಮಾತನಾಡಿದರು.

ಮುಖಂಡ ಎಂ.ಎಲ್. ಮುತ್ತೆಣ್ಣವರ, ಕೆ.ಎಲ್.ಇ. ನಿರ್ದೇಶಕ ಜಯಾನಂದ ಮುನವಳ್ಳಿ, ಮಲ್ಲಿಕಾರ್ಜುನ ಚುನಮವಿ, ಘಟಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಶೋಕ ಪಾಟೀಲ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ವಿರೂಪಾಕ್ಷಿ ಯಲಿಗಾರ, ಡಿ.ಎಂ. ದಳವಾಯಿ, ಮಹಾಂತೇಶ ತಾಂವಶಿ, ಶಾಮಾನಂದ ಪೂಜೇರಿ ಇದ್ದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಶಶಿಧರ ದೇಮಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಆರ್.ಎಲ್. ಮಿರ್ಜಿ ನಿರೂಪಿಸಿದರು.

ಇದಕ್ಕೂ ಮುನ್ನ, ರಮೇಶ ತಂದೆ ಲಕ್ಷ್ಮಣರಾವ ಮತ್ತು ತಾಯಿ ಭೀಮವ್ವ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮನೆಯಂಗಳದಲ್ಲಿ  ಕುಟುಂಬ ಸದಸ್ಯರು ಆರತಿ ಬೆಳಗಿ ಸ್ವಾಗತ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು