ಶನಿವಾರ, ಡಿಸೆಂಬರ್ 7, 2019
25 °C

ನಕಾರಾತ್ಮಕ ಧೋರಣೆ ಮಹಿಳೆಯ ಶತ್ರುಗಳು: ಡಾ.ಅಂಜಲಿ ನಿಂಬಾಳ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ‘ನನಗೆ ಗೊತ್ತಿಲ್ಲ, ನನ್ನಿಂದ ಸಾಧ್ಯವಿಲ್ಲ ಎಂಬ ನಕಾರಾತ್ಮಕ ಧೋರಣೆಯೇ ಮಹಿಳೆಯ ನಿಜವಾದ ಶತ್ರು’ ಎಂದು ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಹಿಳಾ ಸಬಲೀಕರಣ ಘಟಕ ಸೋಮವಾರದಿಂದ ಒಂದು ವಾರ ಆಯೋಜಿಸಿರುವ ‘ಎನರ್ಜೈಸ್’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸಕ್ತ ಆಧುನಿಕ ಯುಗದಲ್ಲಿ ಮಹಿಳೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಹಾಗೂ ತುರ್ತು ಪರಿಸ್ಥಿತಿಯಲ್ಲೂ ಪುರುಷರಿಗೆ ಸಮಾನವಾಗಿ ದುಡಿಯುತ್ತಿದ್ದಾಳೆ. ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾಳೆ. ಹೀಗಾಗಿ, ಮಹಿಳೆ ಭವಿಷ್ಯದ ಏಕ‌ ಮಾತ್ರ ಆಶಾಕಿರಣವಾಗಿದ್ದಾಳೆ’ ಎಂದು ಅಭಿಪ್ರಾಯಪಟ್ಟರು.

ಮಹಿಳೆಯೂ ಅರಿತಿಲ್ಲ

‘ಸಮಾಜ ಮತ್ತು ನಂಬಿಕೆಗಳು ಮಹಿಳೆಯನ್ನು ತ್ಯಾಗ ಮೂರ್ತಿ ಎಂದು ಬಿಂಬಿಸಿವೆ. ಸೌಂದರ್ಯ ಮತ್ತು ಬಟ್ಟೆಗೆ ಮಹತ್ವ ನೀಡಿ ಆಕೆಯನ್ನು ಭೋಗದ ವಸ್ತು ಎಂದು ಸೀಮಿತಗೊಳಿಸಲಾಗಿದೆ. ಆದರೆ, ಆಕೆಯಲ್ಲಿರುವ ಮಹಾನ್‌ ಶಕ್ತಿಯನ್ನು ಯಾರೂ ತಿಳಿದಿಲ್ಲ. ಮಹಿಳೆಯೂ ಆ ಶಕ್ತಿ ಅರಿಯದಿರುವುದು ವಿಪರ್ಯಾಸ’ ಎಂದು ವಿಷಾದ ವ್ಯಕ್ತಪಡಿಸಿದರು.

‘ವೈದ್ಯೆಯಾಗಿದ್ದ ನಾನು, ಸಮಾಜದ ನ್ಯೂನತೆಗಳನ್ನು ಮತ್ತು ದೋಷಗಳನ್ನು ಹೋಗಲಾಡಿಸಲು ಸಮಾಜ ಸೇವೆ ಮತ್ತು ರಾಜಕೀಯ ಕ್ಷೇತ್ರ ಆಯ್ಕೆ ಮಾಡಿಕೊಂಡೆ’ ಎಂದು ಅನುಭವ ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಶಿವಾನಂದ ಹೊಸಮನಿ ಮಾತನಾಡಿ, ‘ನಮ್ಮಲ್ಲಿ ಪ್ರವೇಶ ಪಡೆದಿರುವವರಲ್ಲಿ ಶೇ 80ರಷ್ಟು ವಿದ್ಯಾರ್ಥಿನಿಯರೇ ಇದ್ದಾರೆ. ಇದು ಅವರಲ್ಲಿ ಜ್ಞಾನರ್ಜನೆ ಬಗ್ಗೆ ಇರುವ ಒಲವು ಮತ್ತು ಬುದ್ಧಿವಂತಿಕೆಯನ್ನು ತೋರಿಸುತ್ತದೆ. ಕೀಳರಿಮೆ ತೊರೆದರೆ, ಅವರಲ್ಲಿ ಅಡಗಿರುವ ಪ್ರತಿಭೆ ಹೊರ ಹೊಮ್ಮುತ್ತದೆ’ ಎಂದು ಹೇಳಿದರು.

ವಿದ್ಯಾರ್ಥಿನಿಯರಿಗೆ ತರಬೇತಿ

‘ಗ್ರಾಮೀಣ ಭಾಗದಿಂದ ಹೆಚ್ಚಿನ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣಕ್ಕಾಗಿ ಇಲ್ಲಿಗೆ ಬರುತ್ತಿದ್ದಾರೆ. ಅವರಿಗೆ ವಿಶೇಷ ಕಾರ್ಯಕ್ರಮ ಹಾಗೂ ಔದ್ಯೋಗಿಕ ಜಗತ್ತು ಅಪೇಕ್ಷಿಸುವ ಕೌಶಲಗಳ ತರಬೇತಿ ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೊಡಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಕುಲಸಚಿವರಾದ ಪ್ರೊ.ಸಿದ್ದು ಅಲಗೂರ, ಪ್ರೊ.ರಂಗರಾಜ ವನದುರ್ಗ, ಬೋಧಕರಾದ ಪ್ರೊ.ಪೂರ್ಣಿಮಾ ಪಟ್ಟಣಶೆಟ್ಟಿ, ಪ್ರೊ.ವಿನೋದಾ ಗಾಯಕವಾಡ, ಮಹಿಳಾ ಸಬಲೀಕರಣ ಘಟಕದ ಸದಸ್ಯರಾದ ಮಂಜುಳಾ ಜಿ.ಕೆ., ಮಲ್ಲಮ್ಮ ರೆಡ್ಡಿ, ಯಾಸ್ಮಿನ್‌ ಬೇಗಂ ನದಾಫ, ಅಕ್ಷತಾ ಮತ್ತು ಗೀತಾ ಪೋತದಾರ ಇದ್ದರು.

ಮಹಿಳಾ ಸಬಲೀಕರಣ ಘಟಕದ ಸದಸ್ಯೆ ಫರಜಾನಾ ಶಿಪಾಯಿ ಪ್ರಾರ್ಥಿಸಿದರು. ನಿರ್ದೇಶಕಿ ಮನೀಷಾ ನೇಸರಕರ ಸ್ವಾಗತಿಸಿದರು. ಕಾರ್ಯದರ್ಶಿ ಪೂಜಾ ಹಲ್ಯಾಳ ಪರಿಚಯಿಸಿದರು. ಸುಷ್ಮಾ ಆರ್. ನಿರೂಪಿಸಿದರು. ನಂದಿನಿ ದೇವರಮನಿ ವಂದಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು