ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡು, ನುಡಿ ರಕ್ಷಣೆ ವಿಚಾರದಲ್ಲಿ ಸಾಹಿತಿಗಳ ಮೌನ ಸಲ್ಲದು: ಅಶೋಕ ಚಂದರಗಿ

Published 19 ನವೆಂಬರ್ 2023, 12:40 IST
Last Updated 19 ನವೆಂಬರ್ 2023, 12:40 IST
ಅಕ್ಷರ ಗಾತ್ರ

ಬೆಳಗಾವಿ: ‘ನಾಡು, ನುಡಿಯ ರಕ್ಷಣೆ ವಿಚಾರ ಬಂದಾಗ, ಸಾಹಿತಿಗಳು ಮೌನ ವಹಿಸುವುದು ಸರಿಯಲ್ಲ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅಭಿಪ್ರಾಯಪಟ್ಟರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಿ.ಎ.ಸನದಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ‘ಕನ್ನಡ ಗಡಿತಿಲಕ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ನಾಡು–ನುಡಿಯ ರಕ್ಷಣೆ ವಿಚಾರದಲ್ಲಿ ಆಡಳಿತ ಪಕ್ಷ ವಿರೋಧಿಸುವುದು ಕನ್ನಡ ಹೋರಾಟಗಾರರು ಮತ್ತು ಪತ್ರಕರ್ತರ ಕೆಲಸ ಮಾತ್ರವಲ್ಲ. ಇದರಲ್ಲಿ ಸಾಹಿತಿಗಳ ಪಾತ್ರವೂ ಮುಖ್ಯವಾಗಿದೆ. ಆದರೆ, ಕೆಲವೇ ಸಾಹಿತಿಗಳು ಧ್ವನಿ ಎತ್ತುತ್ತಾರೆ. ಉಳಿದವರು ಸುಮ್ಮನಾಗುತ್ತಾರೆ. ಈ ಮನೋಭಾವ ಮುಂದುವರಿಯಬಾರದು. ಯಾರೂ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು’ ಎಂದು ಹೇಳಿದರು.

‘ಬೆಳಗಾವಿಯಲ್ಲಿ ₹500 ಕೋಟಿ ವ್ಯಯಿಸಿ ಕಟ್ಟಿದ ಸುವರ್ಣ ವಿಧಾನಸೌಧಕ್ಕೆ ಗಡಿಗೆ ಸಂಬಂಧಿಸಿದ ಕಚೇರಿಗಳ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು. ಮಹಾರಾಷ್ಟ್ರದಲ್ಲಿ ಅಚ್ಚ ಕನ್ನಡ ಪ್ರದೇಶಗಳಾದ ಜತ್ತ, ಅಕ್ಕಲಕೋಟೆ, ಸೊಲ್ಲಾಪುರವನ್ನು ಮರಾಠೀಕರಣಗೊಳಿಸಲು ಅಲ್ಲಿನ ಸರ್ಕಾರ ಕ್ರಮ ವಹಿಸಿದೆ. ಅಂತೆಯೇ ಬೆಳಗಾವಿಯನ್ನೂ ಕನ್ನಡೀಕರಣಗೊಳಿಸಲು ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಪ್ರಶಸ್ತಿಗಳು ತಾವಾಗಿಯೇ ಸಾಧಕರನ್ನು ಹುಡುಕಿಕೊಂಡು ಬರಬೇಕೇ ಹೊರತು, ಅರ್ಜಿ ಹಾಕಿ ಪ್ರಶಸ್ತಿ ಪಡೆಯುವಂತಾಗಬಾರದು’ ಎಂದರು.

ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ‘ನಾಡು–ನುಡಿಯ ರಕ್ಷಣೆ ವಿಷಯದಲ್ಲಿ ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದಾಗಿ ಗಡಿ ವಿವಾದ ಮತ್ತು ಭಾಷಾ ವಿವಾದ ಗಂಭೀರ ಸ್ವರೂಪ ತಾಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಹೋರಾಟಗಾರರ ಪಾತ್ರ ಪ್ರಮುಖವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಡಾ.ದಯಾನಂದ ನೂಲಿ, ‘ಬಿ.ಎ.ಸನದಿ ತಮ್ಮ ಕಾವ್ಯದುದ್ದಕ್ಕೂ ಮಾನವೀಯ ಪ್ರೀತಿ, ಜೀವನಮೌಲ್ಯ ಪ್ರತಿಷ್ಠಾಪಿಸಿದ್ದಾರೆ. ಗಡಿನಾಡಿನಲ್ಲಿ ಉತ್ಕೃಷ್ಟ ದರ್ಜೆಯ ಸಾಹಿತ್ಯ ರಚಿಸಿದ್ದಾರೆ. ಅವರ ಹೆಸರಿನಲ್ಲಿರುವ ಪ್ರತಿಷ್ಠಾನ ಅರ್ಥಪೂರ್ಣವಾಗಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ’ ಎಂದು ಶ್ಲಾಘಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಅಧ್ಯಕ್ಷತೆ ವಹಿಸಿದ್ದ ಪ್ರೊ.ರಾಮಕೃಷ್ಣ ಮರಾಠ, ‘ಗಡಿಯಲ್ಲಿ ಕನ್ನಡ ಭಾಷೆ ಸಮೃದ್ಧವಾಗಲು ಸಾಹಿತಿಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳ ಕೊಡುಗೆ ಅಪಾರವಾಗಿದೆ. ಇಂಥ ಸಂಘಟನೆ ಚಟುವಟಿಕೆಯನ್ನು ಯುವಪೀಳಿಗೆ ಪ್ರೇರಣೆಯಾಗಿಸಿಕೊಂಡು ಮುನ್ನಡೆಯಬೇಕು’ ಎಂದರು.

ಪ್ರೊ.ಪಿ.ಜಿ.ಕೆಂಪಣ್ಣವರ ಅಭಿನಂದನಾ ನುಡಿಗಳನ್ನಾಡಿದರು. ಶಿಕ್ಷಣ ತಜ್ಞ ಪ್ರೊ.ಶಿವಶಂಕರ ಹಿರೇಮಠ ಪ್ರಶಸ್ತಿ ಪ್ರದಾನ ಮಾಡಿದರು. ಬಿ.ಎಸ್‌.ಗವಿಮಠ, ಡಾ.ಎಚ್‌.ಬಿ.ರಾಜಶೇಖರ, ಆರ್‌.ಬಿ.ಕಟ್ಟಿ, ಬಸವರಾಜ ಗಾರ್ಗಿ, ಎಂ.ವೈ.ಮೆಣಸಿನಕಾಯಿ, ಶಂಕರ ಬಾಗೇವಾಡಿ ಇತರರಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷ ಎ.ಎ.ಸನದಿ ಸ್ವಾಗತಿಸಿದರು. ಸಿ.ಎಂ.ಬೂದಿಹಾಳ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT