ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವದತ್ತಿ | ಯಲ್ಲಮ್ಮನಗುಡ್ಡ: ನವರಾತ್ರಿ ಉತ್ಸವಕ್ಕೆ ಚಾಲನೆ ಅ.17ರಿಂದ

Last Updated 16 ಅಕ್ಟೋಬರ್ 2020, 13:03 IST
ಅಕ್ಷರ ಗಾತ್ರ

ಉಗರಗೋಳ (ಸವದತ್ತಿ ತಾ.): ಇಲ್ಲಿನ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಅ.17ರಿಂದ 25ರವರೆಗೆ ಸರಳವಾಗಿ ನವರಾತ್ರಿ ಉತ್ಸವ ಜರುಗಲಿದೆ.

17ರಂದು ಸಂಜೆ 6.30ಕ್ಕೆ ‘ಘಟ್ಟ ಸ್ಥಾಪನೆ’ (ಹಣತೆಗಳನ್ನು ಬೆಳಗಿಸಲು) ಕಾರ್ಯಕ್ರಮ ನಡೆಯಲಿದೆ. ಒಂಭತ್ತು ದಿನಗಳವರೆಗೆ ನಿತ್ಯ ಬೆಳಿಗ್ಗೆ ಮತ್ತು ಸಂಜೆ ದೇವಿಗೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕ ಮತ್ತು ನೈವೇದ್ಯ ಕಾರ್ಯಕ್ರಮವಿದೆ. ‘ಕೋವಿಡ್ ನಿಯಂತ್ರಣ ಮಾರ್ಗಸೂಚಿ ಅನುಸಾರ ಅಧಿಕಾರಿಗಳು, ಅರ್ಚಕರು ಹಾಗೂ ಕೆಲವೇ ಗಣ್ಯರ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ’ ಎಂದು ದೇವಸ್ಥಾನದ ಇಒ ರವಿ ಕೋಟಾರಗಸ್ತಿ ತಿಳಿಸಿದ್ದಾರೆ.

‘ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಅ.31ರವರೆಗೆ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ. ಹೀಗಾಗಿ, ಭಕ್ತರು ಮನೆಗಳಲ್ಲೇ ದೇವಿಗೆ ಪೂಜೆ ಸಲ್ಲಿಸಬೇಕು. ದೇಶವು ಕೊರೊನಾ ಮುಕ್ತವಾಗಲೆಂದು ಪ್ರಾರ್ಥಿಸಬೇಕು. ದೇವಸ್ಥಾನಕ್ಕೆ ಬರಬಾರದು’ ಎಂದು ಕೋರಿದ್ದಾರೆ.

‘ದೇವಸ್ಥಾನದಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಕರ್ತವ್ಯ ನಿರ್ವಹಣೆಗೆ ಬರುವ ಸಿಬ್ಬಂದಿಯ ಥರ್ಮಲ್ ಸ್ಕೀನಿಂಗ್‌ಗೆ ಮಾಡಲಾಗುತ್ತಿದೆ. ಸ್ಯಾನಿಟೈಸರ್ ಬಳಸಲಾಗುತ್ತಿದೆ’ ಎಂದಿದ್ದಾರೆ.

‘ನವರಾತ್ರಿ ಉತ್ಸವದ ಸಂದರ್ಭ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧವಿದೆ. ಎಲ್ಲರೂ ಇದಕ್ಕೆ ಸಹಕರಿಸಬೇಕು’ ಎಂದು ಶಾಸಕರೂ ಆಗಿರುವ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಕೋರಿದ್ದಾರೆ.

ಭಕ್ತರು ಗುಡ್ಡಕ್ಕೆ ಬರುವುದನ್ನು ತಡೆಯಲು ಉಗರಗೋಳ, ಸವದತ್ತಿ ಹಾಗೂ ಜೋಗುಳಬಾವಿ ಮಾರ್ಗಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಪೊಲೀಸರನ್ನು ನಿಯೋಜಿಸಲಾಗಿದೆ.

ಕೋವಿಡ್ ಕಾರಣದಿಂದ ಗುಡ್ಡದಲ್ಲಿ ಈ ಬಾರಿ ನವರಾತ್ರಿ ಸಂಭ್ರಮ ಕಳೆಗುಂದಿದೆ. ಹಿಂದಿನ ವರ್ಷಗಳಲ್ಲಿ ಸಹಸ್ರಾರು ಮಂದಿ ಪಾಲ್ಗೊಳ್ಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT