ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊರಕಿತೇ ಸ್ವಂತ ಕಟ್ಟಡ ಭಾಗ್ಯ?

Last Updated 20 ನವೆಂಬರ್ 2017, 6:28 IST
ಅಕ್ಷರ ಗಾತ್ರ

ಚಿಕ್ಕೋಡಿ: ಗಡಿಭಾಗದ ಜನರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಐದು ತಾಲ್ಲೂಕುಗಳ ಕಾರ್ಯವ್ಯಾಪ್ತಿ ಹೊಂದಿರುವ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿಗಳ ಕಚೇರಿಯನ್ನು ಆರಂಭಿಸಿ ಬರೋಬ್ಬರಿ 15 ವರ್ಷಗಳು ಕಳೆದಿವೆ. ಆದರೆ, ಇನ್ನೂ ಸುಸಜ್ಜಿತವಾದ ಆಡಳಿತ ಕಚೇರಿ ನಿರ್ಮಾಣದ ಭಾಗ್ಯ ಲಭಿಸಿಲ್ಲ. ಅಗತ್ಯ ಸಿಬ್ಬಂದಿ ಮತ್ತು ಮೂಲ ಸೌಕರ್ಯಗಳು ಕೂಡ ಇಲ್ಲ.

ಚಿಕ್ಕೋಡಿ, ಅಥಣಿ, ರಾಯಬಾಗ, ಹುಕ್ಕೇರಿ ಮತ್ತು ಗೋಕಾಕ ತಾಲ್ಲೂಕುಗಳ ವ್ಯಾಪ್ತಿಯನ್ನು ಒಳಗೊಂಡ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯವನ್ನು ಚಿಕ್ಕೋಡಿಯಲ್ಲಿ 2002ರಲ್ಲಿ ಆರಂಭಿಸಲಾಗಿತ್ತು. ಅಂದಿನಿಂದಲೂ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿದೆ.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಚಿಕ್ಕೋಡಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮಂಜೂರಾತಿ ನೀಡಿದೆ. ಎಡಿಎಚ್‌ಓ ಕಚೇರಿಗೆ ಜಿಲ್ಲಾಮಟ್ಟದ ಪ್ರತ್ಯೇಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸ್ಥಾನಮಾನ ನೀಡಬೇಕಿದೆ. ಜೊತೆಗೆ, ರಾಷ್ಟ್ರೀಯ ಮಲೇರಿಯಾ ನಿರ್ಮೂಲನಾ ಅಧಿಕಾರಿಗಳು, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿಗಳು, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳು, ಎನ್‌ಆರ್‌ಎಚ್‌ಎಂ ಯೋಜನಾ ನಿರ್ವಹಣಾಧಿಕಾರಿಗಳು ಸೇರಿದಂತೆ ಜಿಲ್ಲಾ ಯೋಜನಾ ಅನುಷ್ಠಾನ ಅಧಿಕಾರಿಗಳ ಹುದ್ದೆಗಳನ್ನೂ ಭರ್ತಿ ಮಾಡಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

‘ಪ್ರಾದೇಶಿಕ ಅಸಮತೋಲನ ನಿವಾರಣೆ ಎಂಬುದು ಕೇವಲ ತೋರಿಕೆಗೆ ಮಾತ್ರ ಸೀಮಿತವಾಗಿದೆ. ಸರ್ಕಾರಿ ಕಚೇರಿಗಳು ಮೂಲ ಸೌಕರ್ಯ, ಸಿಬ್ಬಂದಿ ಕೊರತೆಯಿಂದ ಪರದಾಡುತ್ತಿವೆ. ಸರ್ಕಾರ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಒತ್ತು ಕೊಡಬೇಕು. ಅಗತ್ಯ ಸೌಲಭ್ಯಗಳನ್ನು ದೊರಕಿಸಿ ಕೊಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಆಗ್ರಹಿಸಿದ್ದಾರೆ.

‘ಚಿಕ್ಕೋಡಿ ಪ್ರತ್ಯೇಕ ಜಿಲ್ಲಾ ಸ್ಥಾನಮಾನ ಪಡೆಯಲು ಎಲ್ಲ ಅರ್ಹತೆ ಹೊಂದಿದೆ. ಸರ್ಕಾರ ಕೇವಲ ಕಚೇರಿಗಳನ್ನು ಆರಂಭಿಸಿದರೆ ಸಾಲದು. ಮೂಲ ಸೌಕರ್ಯಗಳನ್ನೂ ಒದಗಿಸುವುದು ಸರ್ಕಾರದ ಜವಾಬ್ದಾರಿ. ಮೊದಲು ಚಿಕ್ಕೋಡಿ ಹಾಗೂ ಗೋಕಾಕನ್ನೂ ಪ್ರತ್ಯೇಕ ಜಿಲ್ಲಾಗಳನ್ನಾಗಿ ಘೋಷಿಸಿದರೆ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಆರ್. ಸಂಗಪ್ಪಗೋಳ ಹೇಳುತ್ತಾರೆ.

‘ಚಿಕ್ಕೋಡಿಯಲ್ಲಿ ಎಡಿಹೆಚ್ಓ ಆಡಳಿತ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಸುಮಾರು ₹ 20 ಕೋಟಿ ಅಂದಾಜು ವೆಚ್ಚದ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಈಗಾಗಲೇ ಪಟ್ಟಣದ ಹೊರವಲಯದಲ್ಲಿ ನಿಪ್ಪಾಣಿ ರಸ್ತೆಗೆ ಹೊಂದಿಕೊಂಡಿರುವ ಸರ್ಕಾರಿ ಜಾಗದಲ್ಲಿ ಐದು ಎಕರೆ ಭೂಮಿಯನ್ನೂ ಮಂಜೂರು ಮಾಡಿದೆ. ಅನುದಾನ ಬಿಡುಗಡೆಯಾಗಿಲ್ಲ’ ಎನ್ನುತ್ತಾರೆ ಎಡಿಎಚ್‌ಓ ಡಾ.ಎಸ್‌.ವಿ.ಮುನ್ಯಾಳ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT