ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲವಂತದ ಸಾಲ ವಸೂಲಿ ಬೇಡ: ಹುಕ್ಕೇರಿ

Last Updated 21 ಏಪ್ರಿಲ್ 2017, 8:39 IST
ಅಕ್ಷರ ಗಾತ್ರ

ಚಿಕ್ಕೋಡಿ: ಪ್ರಸಕ್ತ ವರ್ಷ ಭೀಕರ ಬರಗಾಲ ಆವರಿಸಿರುವುದರಿಂದ ಜನ ಸಮುದಾಯ ಸಂಕಷ್ಟದಲ್ಲಿದೆ. ಆದರೂ, ಕೆಲವು ಹಣಕಾಸು ಸಂಸ್ಥೆಗಳು ಸ್ತ್ರೀಶಕ್ತಿ ಮಹಿಳಾ ಸಂಘಗಳ ಮೇಲೆ ಒತ್ತಡ ಹೇರಿ ಸಾಲ ವಸೂಲಾತಿ ಮಾಡುತ್ತಿವೆ. ಸಂಬಂಧಿತ ಅಧಿಕಾರಿಗಳು ಇದರತ್ತ ಗಮನ ಹರಿಸಬೇಕು’ ಎಂದು ಶಾಸಕ, ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ ಸೂಚನೆ ನೀಡಿದರು.

ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಗೃಹದಲ್ಲಿ ಮಂಗಳವಾರ ನಡೆದ ತ್ರ್ಯೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.‘ಬರಗಾಲ ಇರುವುದರಿಂದ ಒತ್ತಾಯ ಪೂರ್ವಕವಾಗಿ ಸಾಲ ವಸೂಲಿ ಮಾಡದಂತೆ ಸರ್ಕಾರ ಸೂಚನೆ ನೀಡಿದೆ. ಆದರೂ, ಕೆಲವೆಡೆ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರ ಮನೆಗಳಿಗೆ ತೆರಳಿ ಸಾಲ ವಸೂಲಿ ಮಾಡಲಾಗುತ್ತಿದೆ. ಈ ಕುರಿತು ಯಾರ ವಿರುದ್ಧ ಕ್ರಮ ಕೈಗೊಂಡಿದ್ದೀರಿ? ಎಂದು ಶಾಸಕ ಗಣೇಶ ಹುಕ್ಕೇರಿ ಸಹಕಾರ ಸಂಘಗಳ ಸಹಾಯಕ ಉಪ ನಿಬಂಧಕ ಎಂ.ಬಿ.ಪೂಜಾರಿ ಅವರನ್ನು ಪ್ರಶ್ನಿಸಿದರು.

‘ಅಂತಹ ಯಾವುದೇ ದೂರುಗಳು ತಮ್ಮ ಗಮನಕ್ಕೆ ಬಂದಿಲ್ಲ. ಈ ಮುಂಚೆ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಆರು ತಿಂಗಳ ಕಾಲ ಸಾಲ ವಸೂಲಾತಿ ಮಾಡದಂತೆ ಹಣಕಾಸು ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ’ ಎಂದು ಪೂಜಾರಿ ಸ್ಪಷ್ಟಪಡಿಸಿದರು.‘ಕರಗಾಂವ ಗ್ರಾಮದ ರೈತ ಬಸಗೌಡ ಪಾಟೀಲ ಎಂಬುವವರು ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡು ವಾರ ಕಳೆದರೂ ಸೂಕ್ತ ದಾಖಲಾತಿ ಗಳೊಂದಿಗೆ ಪರಿಹಾರಧನ ಮಂಜೂ ರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ವಿಳಂಬ ಧೋರಣೆ ಏಕೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ? ಎಂದು ಸಂಬಂಧಿತ ಅಧಿಕಾರಿಗಳನ್ನು ಪ್ರಶ್ನಿಸಿದರು.

‘ತಾಲ್ಲೂಕಿನಲ್ಲಿ 1,23,138 ಬಿಪಿಎಲ್‌ ಪಡಿತರ ಚೀಟಿಗಳು ಚಾಲ್ತಿ ಯಲ್ಲಿದ್ದು, ಒಟ್ಟು 1.03 ಲಕ್ಷ ಕುಟುಂಬ ಗಳ 4.25 ಯೂನಿಟ್‌ಗಳಿಗೆ ಪ್ರಸಕ್ತ ತಿಂಗಳು ತಲಾ 7 ಕಿ.ಗ್ರಾಂ. ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಹೊಸ ಬಿಪಿಎಲ್‌ ಪಡಿತರ ಚೀಟಿಗಳ ಮಂಜೂರಾತಿಗಾಗಿ 14 ಸಾವಿರ ಅರ್ಜಿಗಳು ಬಂದಿದ್ದು, ಅರ್ಜಿದಾರರು ಸ್ವಯಂ ಘೋಷಣಾಪತ್ರ ನೀಡಿದರೆ ನೇರವಾಗಿ ಅಂಚೆ ಮೂಲಕ ಪಡಿತರ ಚೀಟಿ ತಲುಪಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪತಹಶೀಲ್ದಾರ ಎಂ.ವಿ.ಬಿರಾದಾರಪಾಟೀಲ ತಿಳಿಸಿದರು.

‘ಗ್ರಾಮ ವಿಕಾಸ ಯೋಜನೆಯಡಿ ಕೋಥಳಿ ಗ್ರಾಮದಲ್ಲಿ ಒಟ್ಟು ₹1.25 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಇದುವರೆಗೆ ₹31 ಲಕ್ಷ ಅನುದಾನದಡಿ ವಿವಿಧ ಕಾಮಗಾರಿ ಪೂರ್ಣಗೊಂಡಿದೆ’ ಎಂದು ಜಿಲ್ಲಾ ಪಂಚಾಯ್ತಿ ಎಂಜಿನಿ ಯರಿಂಗ್ ವಿಭಾಗದ ಎಇಇ ವೀರಣ್ಣ ವಾಲಿ ತಿಳಿಸಿದರು. ‘ಯೋಜನೆ ಅನು ಷ್ಠಾನ ವಿಳಂಬವಾಗುತ್ತಿದ್ದು, ತ್ವರಿತಗತಿ ಯಲ್ಲಿ ಕಾಮಗಾರಿ ಪೂರ್ಣಗೊಳಿಸ ಬೇಕು’ ಎಂದು ಹೇಳಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಊರ್ಮಿಳಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪ ವಿಭಾಗಾಧಿಕಾರಿ ಗೀತಾ ಕೌಲಗಿ, ತಹಶೀಲ್ದಾರ ಸಿ.ಎಸ್‌. ಕುಲಕರ್ಣಿ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಮಹಾದೇವಿ ನಾಯಿಕ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸುದರ್ಶನ ಖೋತ, ಲಕ್ಷ್ಮೀ ಹಿರೇಕುರಬರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT