ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ಸೌಧಕ್ಕೆ 5ರಂದು ಮುತ್ತಿಗೆ

ನ್ಯಾ. ಸದಾಶಿವ ಆಯೋಗ ವರದಿ ಅಂಗೀಕಾರಕ್ಕೆ ಒತ್ತಾಯ
Last Updated 2 ಡಿಸೆಂಬರ್ 2013, 8:33 IST
ಅಕ್ಷರ ಗಾತ್ರ

ಬೆಳಗಾವಿ: ‘ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ, ಪರಿಶಿಷ್ಟ ಜಾತಿಗಳಿಗೆ ಜನಸಂಖ್ಯಾವಾರು ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಡಿ. 5ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಹನುಮಂತಪ್ಪ ಬಳ್ಳಾರಿ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿಯ ಅಂಗೀಕಾರಕ್ಕೆ ಆಗ್ರಹಿಸಿ ಕಳೆದ 15 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ನ್ಯಾಯ ಸಿಕ್ಕಿಲ್ಲ. ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳು ಭರವಸೆ ನೀಡುವದರಲ್ಲಿಯೇ ಕಾಲಹರಣ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಡಿ. 3ರಿಂದ 5ರವರೆಗೆ ಸುವರ್ಣ ವಿಧಾನಸೌಧದ ಎದುರುಗಡೆಯ ಮೈದಾನ­ದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು. ಡಿ. 5ರಂದು ಮಧ್ಯಾಹ್ನ 2ಕ್ಕೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು’ ಎಂದರು.

‘ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಸಿದ್ದರಾಮಯ್ಯ ಅವರ ನಡವಳಿಕೆ ಬದಲಾಗಿದೆ. ವಿರೋಧ ಪಕ್ಷದ ನಾಯಕರಾಗಿದ್ದಾಗ ಸದಾಶಿವ ಆಯೋಗದ ವರದಿಯ ಜಾರಿಗಾಗಿ ಶ್ರಮಿಸಿದ ಸಿದ್ದರಾಮಯ್ಯ ಈಗ ವರದಿಯ ಬಗ್ಗೆ ಗೊತ್ತಿರದ ಹಾಗೇ ಅಭಿನಯಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಾದಿಗ ಸಮಾಜ ಕಾಂಗ್ರೆಸ್‌ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದೆ’ ಎಂದು ಎಚ್ಚರಿಕೆ ನೀಡಿದರು.

‘ಬಿಜೆಪಿ ಕೋಮುವಾದದ ಪಕ್ಷ ಎಂದು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುವ ಕಾಂಗ್ರೆಸ್‌ ಪಕ್ಷವು ಜಾತಿ ರಾಜಕಾರಣದಲ್ಲಿ ಮಗ್ನವಾಗಿದೆ. ಮಾದಿಗ ಸಮಾಜವನ್ನು ಸಂಪೂರ್ಣ ನಿರ್ಲಕ್ಷಿಸುತ್ತ ಬಂದಿದೆ. ಮಾದಿಗೆ ಸಮಾಜಕ್ಕೆ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ನೀಡದೇ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಖಾಲಿ ಇರುವ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಮಾದಿಗ ಸಮಾಜಕ್ಕಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಕಳೆದ 15 ವರ್ಷಗಳಿಂದ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು. ಮಾದಾರ ಚನ್ನಯ್ಯ ಅವರ ಜಯಂತಿಯನ್ನು ಪ್ರತಿ ವರ್ಷ ಸರ್ಕಾರ ಆಚರಿಸವಂತೆ ಸಚಿವ ಸಂಪುಟ ತೀರ್ಮಾನ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಐಹೊಳೆ, ಯಲ್ಲೇಶ ಬಚ್ಚಲಪುರಿ, ಯಲ್ಲಪ್ಪ ಹುದಲಿ, ಮೋಹನ ಸಾಕೆ, ಅಜಯ ಶಹಾಪುರ, ರಾಜು ಕೋಲಾ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT