ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ಮೇಲ್ದರ್ಜೆಗೇರಿಸಲು ಶಿಫಾರಸು: ಜಾಕೋಬ್‌

ಕೇಂದ್ರ ತಂಡದಿಂದ ಅತಿವೃಷ್ಟಿ ಹಾನಿ ಸಮೀಕ್ಷೆ
Last Updated 24 ಸೆಪ್ಟೆಂಬರ್ 2013, 6:20 IST
ಅಕ್ಷರ ಗಾತ್ರ

ಬೆಳಗಾವಿ/ ಚಿಕ್ಕೋಡಿ: ಜಿಲ್ಲೆಯ ಖಾನಾಪುರ, ಬೆಳಗಾವಿ, ಚಿಕ್ಕೋಡಿ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ ಕೇಂದ್ರದ ಅತಿವೃಷ್ಟಿ ಅಧ್ಯಯನ ತಂಡವು ಹಾನಿ ಕುರಿತು ಸಮೀಕ್ಷೆ ನಡೆಸಿತು.

ಕೇಂದ್ರೀಯ ಜಲ ಆಯೋಗದ ಮುಖ್ಯ ಎಂಜಿನಿಯರ್‌ ಕೆ.ಎಸ್‌. ಜಾಕೋಬ್‌, ಕೇಂದ್ರೀಯ ವಿದ್ಯುತ್‌ ಪ್ರಾಧಿಕಾರದ ನಿರ್ದೇಶಕ ವಿವೇಕ ಗೋಯಲ್‌ ಮತ್ತು ಹಣಕಾಸು ಇಲಾಖೆಯ ಜಂಟಿ ನಿರ್ದೇಶಕ ಡಾ.ಪಿ.ಜಿ.ಎಸ್‌. ರಾವ್‌ ಅವರನ್ನು ಒಳ ಗೊಂಡ ತಂಡವು ಬೆಳಿಗ್ಗೆ ಖಾನಾಪುರ ತಾಲ್ಲೂಕಿನಲ್ಲಿ ಮಲಪ್ರಭಾ ನದಿ ಪ್ರವಾಹದ ಸಮೀಕ್ಷೆ ನಡೆಸಿತು. ಅತಿವೃಷ್ಟಿಯಿಂದಾಗಿ ತಿವಳ್ಳಿ ಸೇತುವೆ ಹಾನಿಯಾಗಿರುವುದನ್ನು ಪರಿಶೀಲಿಸಿದ ತಂಡವು ಬಳಿಕ ಖಾನಾಪುರ ರಸ್ತೆ ಮೂಲಕ ಬೆಳಗಾವಿ ನಗರಕ್ಕೆ ಆಗಮಿಸಿತು.

ನಗರದಲ್ಲಿ ಕಾಂಗ್ರೆಸ್‌ ರಸ್ತೆ ಹಾಗೂ ಡಾ. ಬಿ.ಆರ್‌. ಅಂಬೇಡ್ಕರ್‌ ರಸ್ತೆ ಮಳೆ ಯಿಂದಾಗಿ ಕಿತ್ತು ಹೋಗಿರುವುದನ್ನು ತಂಡವು ವೀಕ್ಷಿಸಿತು. ನಗರದಲ್ಲಿ ಮಳೆಯಿಂದ ಹಲವು ರಸ್ತೆಗಳು ಹಾನಿ ಯಾಗಿರುವ ಕುರಿತು ಮಹಾನಗರ ಪಾಲಿಕೆ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಮಾಹಿತಿ ನೀಡಿದರು. ಬಳಿಕ ತಂಡವು ಚಿಕ್ಕೋಡಿ ತಾಲ್ಲೂಕಿಗೆ ಪ್ರಯಾಣ ಬೆಳೆಸಿತು.

ಮಹಾರಾಷ್ಟ್ರದಿಂದ ಅಪಾರ ಪ್ರಮಾಣದಲ್ಲಿ ಹರಿದು ಬಂದ ನೀರಿನಿಂದ ಕಳೆದ ಜುಲೈನಲ್ಲಿ ತಾಲ್ಲೂಕಿ ನಲ್ಲಿ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳ ಪ್ರವಾಹದಿಂದಾಗಿ ಉಂಟಾದ ಹಾನಿಯ ಕುರಿತು ಸಮೀಕ್ಷೆ ನಡೆಸಿತು. ತಾಲ್ಲೂಕಿನ ಕಲ್ಲೋಳ, ಸದಲಗಾ, ಕಾರದಗಾ ಮತ್ತು ಜತ್ರಾಟ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.

ಸಣ್ಣ ಕೈಗಾರಿಕೆ, ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ, ‘ಪ್ರತಿ ವರ್ಷ ಮಳೆಗಾಲದಲ್ಲಿ ಮಹಾರಾಷ್ಟ್ರದಿಂದ ಹರಿದು ಬರುವ ಹೆಚ್ಚಿನ ಪ್ರಮಾಣದ ನೀರಿನಿಂದ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪ ನದಿಗಳಿಗೆ ಪ್ರವಾಹ ಉಂಟಾಗಿ ಕೆಳಮಟ್‌ಟದಲ್ಲಿರುವ 8 ಸೇತುವೆಗಳು ಜಲಾವೃತಗೊಳ್ಳುತ್ತವೆ. ಇದರಿಂದ ಮಳೆಗಾಲದಲ್ಲಿ ಜನರ ಸಾರಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗು ತ್ತದೆ. ಈ ಸೇತುವೆಗಳನ್ನು ಎತ್ತರಿಸಲು ಕೇಂದ್ರದಿಂದ ಅನುದಾನ ನೀಡಬೇಕು’ ಎಂದು ತಂಡದ ಸದಸ್ಯರಲ್ಲಿ ಮನವಿ ಮಾಡಿಕೊಂಡರು.

ತಂಡದ ಸಂಚಾಲಕ ಕೆ.ಎಸ್‌. ಜಾಕೋಬ್‌ ಮಾತನಾಡಿ, ‘ಮಹಾ ರಾಷ್ಟ್ರದಿಂದ ಸುಮಾರು 2 ಲಕ್ಷ ಕ್ಯೂಸೆಕ್‌ ನೀರು ಹರಿದು ಬಂದ ಪರಿಣಾ ಮವಾಗಿ ಚಿಕ್ಕೋಡಿ ತಾಲ್ಲೂಕಿನಲ್ಲಿ ನದಿಗಳಿಗೆ ಪ್ರವಾಹ ಬಂದು ಬೆಳೆಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ.

ವಿಶೇಷವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗುತ್ತವೆ. ಈ ಸೇತುವೆ ಗಳನ್ನು ಮೇಲ್ದರ್ಜೆಗೇರಿಸಲು ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸ ಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಎನ್‌.ಜಯರಾಮ್, ‘ಕಳೆದೆರೆಡು ತಿಂಗಳ ಹಿಂದೆ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಅಥಣಿ, ಚಿಕ್ಕೋಡಿ ಮತ್ತು ರಾಯಬಾಗ ತಾಲ್ಲೂಕುಗಳಲ್ಲಿ ಉಂಟಾದ ನೆರೆ ಹಾವಳಿಗೆ 3 ಸಾವಿರ ಹೆಕ್ಟೇರ್ ಬೆಳೆ ಹಾನಿ, ಸರ್ಕಾರಿ ಕಟ್ಟಡಗಳು, ರಸ್ತೆಗಳು ಹಾಳಾಗಿರುವುದು ಸೇರಿದಂತೆ ಒಟ್ಟು ರೂ.250 ಕೋಟಿ ಅಂದಾಜು ಹಾನಿ ಆಗಿರುವ ಕುರಿತು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹೇಳಿದರು.

ಚಿಕ್ಕೋಡಿ ತಾಲ್ಲೂಕಿನಲ್ಲಿ ಜಲಾವೃತ ವಾಗುವ ನಾಲ್ಕೈದು ಸೇತುವೆಗಳಿಗೆ ಭೇಟಿ ನೀಡಿದ ತಂಡವು, ಬೆಳೆ ಹಾನಿ ಸಮೀಕ್ಷೆಯನ್ನು ಕೈಗೊಂಡಿತು. ನದಿ ಪಕ್ಕದ ಭೂಮಿಗಳಲ್ಲಿ ಕೆಲವೆಡೆ ಶೇ. 50ಕ್ಕಿಂತಲೂ ಹೆಚ್ಚು ಹಾನಿ ಸಂಭವಿಸಿರುವಲ್ಲಿ ಪುನಃ ಕಬ್ಬು ನಾಟಿ ಮಾಡಲಾಗಿದೆ ಎಂದು ಕೃಷಿ ಅಧಿಕಾರಿಗಳು ಬೆಳೆ ಹಾನಿಯಾಗಿರುವ ಸಂದರ್ಭದಲ್ಲಿ ತೆಗೆಯಲಾಗಿದ್ದ ಫೋಟೊಗಳನ್ನು ತಂಡಕ್ಕೆ ತೋರಿಸಿದರು. ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಉಪವಿಭಾಗಾಧಿಕಾರಿ ಡಾ. ರುದ್ರೇಶ ಘಾಳಿ, ತಹಸೀಲ್ದಾರ ರಾಜಶೇಖರ ಡಂಬಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT