ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರ ಶಕ್ತಿ ವಿದ್ಯುತ್ ಬಳಕೆ ಪ್ರಾತ್ಯಕ್ಷಿಕೆ

Last Updated 15 ಫೆಬ್ರುವರಿ 2013, 10:47 IST
ಅಕ್ಷರ ಗಾತ್ರ

ಹುಕ್ಕೇರಿ: ವಿದ್ಯುತ್ ಅಭಾವದಿಂದ ರಾಜ್ಯದ ರೈತ ಸಮೂಹ ಸೇರಿದಂತೆ ಜನರು ತತ್ತರಿಸಿ ಹೋಗಿದ್ದಾರೆ. ಮಳೆಯನ್ನೇ ಅವಲಂಬಿಸಿ ವಿದ್ಯುತ್ ಉತ್ಪಾದಿಸಿ ಭವಿಷ್ಯ ಕಂಡುಕೊಳ್ಳಲು ಅಸಾಧ್ಯವಾಗಿದೆ. ರೈತರ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದರೂ ಸಮರ್ಪಕ ರೀತಿಯಲ್ಲಿ ಅವುಗಳ ಅನುಷ್ಠಾನ ಆಗುತ್ತಿಲ್ಲ.

ರಾಜ್ಯದಲ್ಲಿ ಸಹಕಾರಿ ರಂಗದಲ್ಲಿ ಏಕೈಕ ಸಹಕಾರಿ ವಿದ್ಯುತ್ ಸಂಘವೆಂದು ಹೆಗ್ಗಳಿಕೆಗೆ ಪಾತ್ರವಾದ ಸ್ಥಳೀಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ನೀರಾವರಿ ಪಂಪಸೆಟ್‌ಗಳ ವಿದ್ಯುತ್ ಕೊರತೆ ನೀಗಿಸಲು ರೈತ ಸಮೂಹಕ್ಕೆ ಒಂದು ವಿನೂತನ ಯೋಜನೆ ಪರಿಚಯಿಸುತ್ತಿದೆ. ಅದುವೇ `ಸೌರ ಶಕ್ತಿ ವಿದ್ಯುತ್ ಬಳಕೆ'.

ಸಂಘದ ವಸತಿ ಗೃಹ ಆವರಣದಲ್ಲಿ ನೀರಾವರಿ ಪಂಪ್ ಸೆಟ್‌ಗಳಿಗೆ ಸೌರಶಕ್ತಿಯ ಮೂಲಕ ವಿದ್ಯುತ್ ಪೂರೈಸಿ ನೀರು ಎತ್ತುವ ಶಕ್ತಿಯನ್ನು ತಜ್ಞರಿಂದ ಪರಿಚಯ ಮಾಡಿ ಕೊಡಲಾಗುತ್ತಿದೆ.

ತಾಲ್ಲೂಕಿನ ರೈತರಿಗೆ ಇದನ್ನು ಪ್ರಾತ್ಯಕ್ಷಿಕವಾಗಿ ಸಂಘದ ಎಂಜಿನಿಯರ್ ನೇಮಿನಾಥ ಖೇಮಲಾಪುರೆ ಮತ್ತು ಎಂ.ಡಿ. ಆರ್.ಬಿ. ಬೋರಗಿ ಪರಿಚಯಿಸುತ್ತಿದ್ದು ಕೆಲವು ದಿನಗಳಿಂದ ತಾಲ್ಲೂಕಿನ ಹಲವಾರು ರೈತರು ಈ ಪ್ರಾಯೋಗಿಕ ಘಟಕ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಸದ್ಯದ ವಿದ್ಯುತ್ ಪರಿಸ್ಥಿತಿ ಅವಲೋಕಿಸಿ ರಾಜ್ಯ ಸರ್ಕಾರ ಈ ಯೋಜನೆಗೆ ಸಹಾಯ ಧನ (ಸಬ್ಸಿಡಿ) ನೀಡಿದ್ದಾದರೆ ರೈತರು ಕಡಿಮೆ ವೆಚ್ಚದಲ್ಲಿ ಇದರ ಸದುಪಯೋಗ ಪಡೆದುಕೊಳ್ಳಲು ಸಹಾಯ ಆಗುತ್ತದೆ ಎಂದು ಪ್ರಗತಿಪರ ರೈತ ಯಮಕನಮಡಿಯ ರವಿ ಹಂಜಿ ಹೇಳಿದರು.

ಸೌರಶಕ್ತಿ ಘಟಕ ಸ್ಥಾಪಿಸಲು ವೆಚ್ಚವಾಗುವ ಒಂದು ಅಶ್ವ ಶಕ್ತಿಗೆ ಒಂದು ಲಕ್ಷದಂತೆ ಅವರವರ ಆರ್ಥಿಕ ಶಕ್ತ್ಯಾನುಸಾರ ಮತ್ತು ನೀರಿನ ಸೌಲಭ್ಯ ಅವಲಂಬಿಸಿದೆ. ಆದರೆ ಸಣ್ಣ ಮತ್ತು ಚಿಕ್ಕ ರೈತರಿಗೆ ಅಷ್ಟೊಂದು ಹಣ ತುಂಬಲು ಆಗುವುದಿಲ್ಲ. ಹಾಗಾಗಿ ಸರ್ಕಾರ ಇತ್ತ ಕಡೆ ಗಮನ ಹರಿಸಿ ರಿಯಾಯಿತಿ ದರದಲ್ಲಿ ಕೊಟ್ಟರೆ ರೈತರಿಗೆ ಸ್ವಂತ ವಿದ್ಯುತ್ ಪಡೆದು ಬೆಳೆ ಬೆಳೆಯಲು ಸಾಧ್ಯ ಎಂದು ಬೋರಗಲ್‌ನ ರೈತ ನಾನಪ್ಪ ಕುಂಬಾರ ಮತ್ತು ಶಿರಹಟ್ಟಿಯ ರೈತ ಭೀಮಸಿ ಗುಡಸಿ ಹಾಗೂ ಸ್ಥಳೀಯ ರೈತ ನದಾಫ ಹೇಳಿದರು.

ಸಂಘದ ಅಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ಉಪಾಧ್ಯಕ್ಷ ಬಾಳಪ್ಪಾ ಮಂಜರಗಿ, ಆಡಳಿತ ಮಂಡಳಿ ಸದಸ್ಯರು,  ತಾ.ಪಂ. ಮಾಜಿ ಅಧ್ಯಕ್ಷರೂ ಆದ ಪ್ರಗತಿಪರ ರೈತ ಸತ್ಯೆಪ್ಪ ನಾಯಿಕ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪರಗೌಡ ಪಾಟೀಲ, ನಿರ್ದೇಶಕ ರಮೇಶ ಕುಲಕರ್ಣಿ, ನೀಲಪ್ಪಾ ಕೋಲಿ ಮತ್ತಿತರ ಗ್ರಾಮಗಳ ರೈತರು ಪ್ರಾತ್ಯಕ್ಷಿಕೆ ನೋಡಿ ಸಂತಸ ಪಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT