ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಗ್ರಾಮೀಣ ಬ್ಯಾಂಕ್ ನೌಕರರ ಮುಷ್ಕರ

Last Updated 20 ಆಗಸ್ಟ್ 2012, 4:50 IST
ಅಕ್ಷರ ಗಾತ್ರ

ಬಳ್ಳಾರಿ: ಹಲವು ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಗತಿ ಗ್ರಾಮೀಣ ಬ್ಯಾಂಕಿನ ನೌಕರರು ಹಾಗೂ ಅಧಿಕಾರಿಗಳು ನಗರದ ಕೇಂದ್ರ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.

ಬ್ಯಾಂಕಿನ ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ನೀತಿ ಮತ್ತಷ್ಟೂ ಹೆಚ್ಚುತ್ತಿದೆ. ಸಣ್ಣ ಪುಟ್ಟ ತಪ್ಪುಗಳಿಗೂ ಬ್ಯಾಂಕ್ ಉದ್ಯೋಗಿಗಳನ್ನು ಶಿಕ್ಷಿಸಲಾಗುತ್ತಿದೆ. ಆಡಳಿತ ಮಂಡಳಿಯಿಂದ ಬೇಸತ್ತು ಹೋಗಿರುವ ಉದ್ಯೋಗಿಗಳು ಆತಂಕದಲ್ಲಿಯೇ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತಾಗಿದೆ.

ಈ ಹಿಂದಿನ ಗ್ರಾಹಕರ ಸೇವೆ ಕುಂಠಿತವಾಗಿದೆ. ಎಲ್ಲದಕ್ಕೂ ಉದ್ಯೋಗಿಗಳನ್ನೇ ಹೊಣೆಗಾರರನ್ನಾಗಿಸಲಾಗುತ್ತಿದೆ ಎಂದು ದೂರಿದರು.

ಅಕಾಲಿಕ ಮರಣ ಹೊಂದಿದ ಉದ್ಯೋಗಿಗಳಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡಲು ವಿನಾಕಾರಣ ವಿಳಂಬ ಮಾಡಲಾಗುತ್ತಿದೆ. ಸಣ್ಣ ಪುಟ್ಟ ಕಾರಣಗಳನ್ನು ಒಡ್ಡಿ ಒಂದು ವರ್ಷವಾದರೂ ಸೌಲಭ್ಯಗಳ ಜಾರಿಗೊಳಿಸುತ್ತಿಲ್ಲ.

ಸಂಘಗಳ ಪದಾಧಿಕಾರಿಗಳನ್ನು ಗುರಿಯಾಗಿಸಿಕೊಂಡು, ಚಾರ್ಜ್‌ಶೀಟ್ ಹಾಕಲಾಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಉದ್ಯೋಗಿಗಳನ್ನು ಹಿಂಸಿಸಲಾಗುತ್ತಿದೆ. ಪಿಜಿಬಿಯಲ್ಲಿ ಮಾರ್ಚ್ 2011 ರ ವರೆಗಿನ ವ್ಯವಹಾರದ ಮೇಲೆ ಎಲ್ಲಾ ಹುದ್ದೆಗಳಿಗೆ ಬಡ್ತಿಯನ್ನು ನಡೆಸಿದ್ದರೂ, 2008 ರಿಂದ ಉಪ ಸಿಬ್ಬಂದಿ ಹುದ್ದೆಯಿಂದ ಕರ‌್ಲಿಕಲ್ ಹುದ್ದೆಗೆ ಮಾತ್ರ 2008 ರಿಂದ ಬಡ್ತಿ ನೀಡಲಾಗಿಲ್ಲ.

ಬ್ಯಾಂಕಿನ ಹಿಂದಿನ ಆಡಳಿತ ಸೃಷ್ಟಿಸಿದ ಹಲವು ಗೋಜಲುಗಳಿಂದ ಕೋರ್ಟ್ ಕಚೇರಿಗಳಲ್ಲಿಯ ಮೊಕದ್ದಮೆಗಳ ನೆಪದಲ್ಲಿ ಬಡ್ತಿಯನ್ನು ಮುಂದೂಡಲಾಗಿತ್ತು. ಇದೀಗ ಎಲ್ಲ ಸಮಸ್ಯೆಗಳು ಬಗೆ ಹರಿದು ಆರು ತಿಂಗಳು ಕಳೆದಿದ್ದರೂ ಬಡ್ತಿಯನ್ನು ನೀಡುತ್ತಿಲ್ಲ. ಬ್ಯಾಂಕ್‌ನ ಆಡಳಿತ ಮಂಡಳಿ ಉದ್ದೇಶ ಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಿದ್ದು, ಉಪ ಸಿಬ್ಬಂದಿಗೆ ಬಡ್ತಿ ಸಿಗದಂತೆ ಕುತಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.

ಬ್ಯಾಂಕ್‌ನ ಆಡಳಿತ ಮಂಡಳಿ ನಡೆಸುತ್ತಿರುವ ಹಲವು ಹುನ್ನಾರಗಳ ಕುರಿತು ಬ್ಯಾಂಕಿನ ಅಧ್ಯಕ್ಷರೊಂದಿಗೆ ಹಲವಾರು ಬಾರಿ ಚರ್ಚಿಸಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಬ್ಯಾಂಕಿನ ನಿರ್ದೇಶಕ ಮಂಡಳಿಯನ್ನು ಭೇಟಿ ಮಾಡಿ ಮನವಿ ಪತ್ರವನ್ನು ನೀಡಿ ಚರ್ಚಿಸಲಾಗಿದ್ದು, ನಿವೃತ್ತಿ ಹೊಂದಿದವರಿಗೆ, ಮರಣ ಹೊಂದಿದ ಉದ್ಯೋಗಿಗಳ ಕುಟುಂಬದವರಿಗೆ ಸಲ್ಲಬೇಕಾದ ಪರಿಹಾರ ಮೊತ್ತವನ್ನು ಆದಷ್ಟು ಬೇಗ ನೀಡುವುದಾಗಿ ಭರವಸೆ ನೀಡಿದ್ದರು. ನಿರ್ದೇಶಕ ಮಂಡಳಿ ಭರವಸೆಗಳು ಮೂರು ತಿಂಗಳಾದರೂ ಈಡೇರಿಲ್ಲ ಎಂದು ತಿಳಿಸಿದರು.

ಧರಣಿ ಉದ್ದೆೀಶಿಸಿ ಮಾತನಾಡಿದ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳ ಸಂಘದ ಮುಖಂಡ ಗಣಪತಿ ಹೆಗಡೆ, ಬ್ಯಾಂಕಿನಲ್ಲಿ ಕಳೆದ ದಶಕಕ್ಕೂ ಹೆಚ್ಚು ಕಾಲದಿಂದ ದುಡಿಯುತ್ತಿರುವ ಕೂಲಿಗಳ ಜೀವನ ಅತಂತ್ರವಾಗಿದೆ. ಕೂಲಿಗಳ ಕಾಯಂಗೊಳಿಸುವ ಯಾವುದೇ ಕಾಳಜಿ ಬ್ಯಾಂಕಿನ ಅಧ್ಯಕ್ಷರಿಗಿಲ್ಲ. ಆಡಳಿತ ಮಂಡಳಿ ಕಾರ್ಮಿಕ ವಿರೋಧಿ ನಿಲುವುನ್ನು ಕೈ ಬಿಡಬೇಕು. ನೌಕರರು ಹಾಗೂ ಅಧಿಕಾರಿಗಳ ಹಲವಾರು ವರ್ಷಗಳ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಗಂಗಣ್ಣ ಪತ್ತಾರ್, ಪ್ರಧಾನ ಕಾರ್ಯದರ್ಶಿ ಕೆ.ಎಂ. ಗುರುಮೂರ್ತಿ, ಕಾರ್ಯಾಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷ ಬಸವರಾಜ್, ಪುಣ್ಯಮೂರ್ತಿ, ಅಧಿಕಾರಿಗಳ ಸಂಘದ ಅಧ್ಯಕ್ಷ ಆನಂದ ರೆಡ್ಡಿ, ಕಾರ್ಯದರ್ಶಿ ಎ.ಆರ್.ಶೆಣೈ, ಕಾರ್ಯಾಧ್ಯಕ್ಷ ಭದ್ರಾನಾಯಕ್, ಉಪಾಧ್ಯಕ್ಷ ಮಲ್ಲನಗೌಡ, ಡಿ.ಎಸ್. ಶಿವಪ್ರಸಾದ್, ರೇವಣಸಿದ್ದಪ್ಪ, ನೆರಲಪ್ಪ, ಸಿ.ಆರ್ ಶಾನಭಾಗ್, ಶ್ರೀಧರ ಜೋಷಿ, ಶಿವಣ್ಣ ಶೆಟ್ಟಿ, ಸಿ.ಸೊಪ್ಪಿನಮಠ ಮತ್ತಿತತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT