ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರ ವಿರುದ್ದ ಜ.8, 9ರಂದು ಅಖಿಲ ಭಾರತ ಸಾರ್ವತ್ರಿಕ ಹರತಾಳ

’ನಾಲ್ಕೂವರೆ ವರ್ಷಗಳಲ್ಲಿ ಸುಳ್ಳು, ಮೋಸ’
Last Updated 6 ಜನವರಿ 2019, 13:16 IST
ಅಕ್ಷರ ಗಾತ್ರ

ಹೊಸಪೇಟೆ: ‘ಕಳೆದ ನಾಲ್ಕೂವರೆ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಭರವಸೆ, ಆಶ್ವಾಸನೆಗಳ ಮೂಲಕ ದೇಶದ ಜನರಿಗೆ ಮೋಸ ಮಾಡಿದ್ದಾರೆ. ಕಾರ್ಪೊರೇಟ್‌ ಪರವಾದ ಅವರ ನೀತಿಗಳಿಂದ ಜನಸಾಮಾನ್ಯರ ಬದುಕು ಹಾಳಾಗಿದ್ದು, ಅದರ ವಿರುದ್ಧ ಜ. 8,9ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ಕೊಡಲಾಗಿದೆ’ ಎಂದು ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಆರ್‌. ಭಾಸ್ಕರ್‌ ರೆಡ್ಡಿ ತಿಳಿಸಿದರು.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಎರಡು ದಿನ ದೇಶದಾದ್ಯಂತ ನಡೆಯಲಿರುವ ಹರತಾಳಕ್ಕೆ ರಾಷ್ಟ್ರದ ಹನ್ನೊಂದು ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ನಡೆಯುತ್ತಿರುವ 18ನೇ ಅತಿದೊಡ್ಡ ಮುಷ್ಕರ ಇದು’ ಎಂದು ವಿವರಿಸಿದರು.

‘ಸದ್ಯ ದೇಶದಲ್ಲಿ 44 ಕಾರ್ಮಿಕ ಕಾನೂನುಗಳಿವೆ. ಅವುಗಳನ್ನು ಬದಲಾಯಿಸಿ ನಾಲ್ಕು ಕೋಡ್‌ಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಹೊರಟಿದೆ. ಇದು ಕಾರ್ಮಿಕರ ವಿರುದ್ಧವಾದ ನೀತಿಯಾಗಿದೆ. ಕಾರ್ಪೊರೇಟ್‌ ವಲಯಕ್ಕೆ ಅನುಕೂಲ ಮಾಡಿಕೊಡುವ ಹುನ್ನಾರ ಇದರ ಹಿಂದೆ ಅಡಗಿದೆ. ನಾಲ್ಕೂವರೆ ವರ್ಷಗಳಲ್ಲಿ ಮೋದಿಯವರು ಅಂಬಾನಿ, ಅದಾನಿ ಬಿಟ್ಟರೆ ಜನಸಾಮಾನ್ಯರಿಗೆ ಪ್ರಯೋಜನವಾಗುವ ಒಂದೇ ಒಂದು ಕೆಲಸ ಮಾಡಿಲ್ಲ’ ಎಂದು ಜರಿದರು.

‘2014ಕ್ಕೂ ಮುಂಚೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್‌ ತೈಲ ಬೆಲೆ 160 ಡಾಲರ್‌ ಇತ್ತು. ಆಗ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ ₹60 ಇತ್ತು. ಈಗ ಪ್ರತಿ ಡಾಲರ್‌ ಬೆಲೆ 60ಕ್ಕೆ ಇಳಿದಿದೆ. ಆದರೆ, ಪೆಟ್ರೋಲ್‌ ಬೆಲೆ ₹80ರ ಆಸುಪಾಸಿನಲ್ಲಿದೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡ ನಂತರ ಮೋದಿ ತೈಲ ಬೆಲೆಯಲ್ಲಿ ಸ್ವಲ್ಪ ಇಳಿಕೆ ಮಾಡಿದ್ದಾರೆ. ಬರುವ ದಿನಗಳಲ್ಲಿ ಇನ್ನಷ್ಟು ಇಳಿಸಬಹುದು. ಏಕೆಂದರೆ ಕೆಲವೇ ತಿಂಗಳಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ’ ಎಂದು ಹೇಳಿದರು.

‘ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತೇನೆ ಎಂದು ಮೋದಿ ಭರವಸೆ ಕೊಟ್ಟಿದ್ದರು. ಆದರೆ, ಅವರ ಅವಧಿಯಲ್ಲಿ ಒಟ್ಟು 3.84 ಕೋಟಿ ಕಾರ್ಮಿಕರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ನೋಟು ರದ್ದತಿಯಿಂದ 150ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡರು. ಬಿ.ಎಸ್‌.ಎನ್‌.ಎಲ್‌., ಎಲ್‌.ಐ.ಸಿ. ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಅವುಗಳನ್ನು ಹಾಳುಗೆಡವಲು ಮುಂದಾಗಿದ್ದಾರೆ. ಅದನ್ನು ತಡೆಯದಿದ್ದಲ್ಲಿ ದೇಶದ ಜನರಿಗೆ ಉಳಿಗಾಲವಿಲ್ಲ’ ಎಂದು ತಿಳಿಸಿದರು.

‘ಸ್ವಿಸ್‌ ಬ್ಯಾಂಕಿನಿಂದ ಕಪ್ಪು ಹಣ ತರುತ್ತೇನೆ ಎಂದು ಮೋದಿ ಹೇಳಿದ್ದರು. ಆದರೆ, ಆ ಕೆಲಸ ಅವರಿಂದ ಆಗಲಿಲ್ಲ. ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ ₹15 ಲಕ್ಷ ಹಾಕುತ್ತೇನೆ ಎಂದಿದ್ದರು. ಅದು ಕೂಡ ಮಾಡಲಿಲ್ಲ. ಸುಳ್ಳು ಹೇಳಿ ನಾಲ್ಕೂವರೆ ವರ್ಷ ಕಳೆದಿದ್ದಾರೆ. ಇನ್ನೊಂದು ಅವಧಿಗೆ ಅವರಿಗೆ ಅವಕಾಶ ಕೊಟ್ಟರೆ ಇಡೀ ದೇಶವನ್ನೇ ಕಾರ್ಪೊರೇಟ್‌ ವಲಯಕ್ಕೆ ಒಪ್ಪಿಸಿ, ಹಾಳು ಮಾಡುತ್ತಾರೆ’ ಎಂದು ಎಚ್ಚರಿಸಿದರು.

ಮುಖಂಡರಾದ ಜಿ. ಸಿದ್ದಲಿಂಗೇಶ್‌, ಎಸ್‌. ಅನಂತಶಯನ, ಬಿ.ಎಸ್‌. ಯಮುನಪ್ಪ, ಟಿ. ಚಂದ್ರಶೇಖರ್‌, ಎಸ್‌. ವಿಜಯಕುಮಾರ್‌, ರಮೇಶ್‌, ಸದಾನಂದ ಪಾಟೀಲ, ಬಾಷಾ, ಬಿ.ಎಸ್‌. ರುದ್ರಪ್ಪ, ರಾಜು, ಶ್ರೀನಿವಾಸ್‌, ಬಸವರಾಜು, ಮಂಜುನಾಥ್‌, ಸಂತೋಷ್‌, ಪ್ರಕಾಶ್‌, ಶೆಕ್ಷಾವಲಿ, ಶ್ರೀನಿವಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT