ಶುಕ್ರವಾರ, ಡಿಸೆಂಬರ್ 13, 2019
24 °C

ಪ್ರಚಾರದ ನಡುವೆ ಆನಂದ್‌ ಸಿಂಗ್‌ ಗೃಹ ಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವ ಆನಂದ್‌ ಸಿಂಗ್‌ ಶುಕ್ರವಾರ ನಗರದಲ್ಲಿ ನಿರ್ಮಿಸಿರುವ ತಮ್ಮ ನೂತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಚಾರದಿಂದ ದೂರ ಉಳಿದರು.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅವರ ಕುಟುಂಬ ಸದಸ್ಯರು ಹಾಗೂ ಕೆಲವೇ ಸಂಬಂಧಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮನೆ ಎದುರಿನಲ್ಲೇ ಠಿಕಾಣಿ ಹೂಡಿದ್ದ ಚುನಾವಣಾ ಆಯೋಗದ ಸಿಬ್ಬಂದಿ, ಮನೆಗೆ ಬಂದು ಹೋಗುತ್ತಿದ್ದವರ ವಿಡಿಯೊ ಚಿತ್ರೀಕರಣ ಮಾಡಿದರು. 

ಗುರುವಾರ ಸಂಜೆ ಹೋಮ, ಹವನ ನಡೆದಿತ್ತು. ಶುಕ್ರವಾರ ಬೆಳಿಗ್ಗೆ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ ಪೂಜೆ ನೆರವೇರಿಸಿದರು. 

‘ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಗೃಹ ಪ್ರವೇಶ ಹಾಗೂ ಡಿ. 1ರಂದು ನಡೆಯಲಿರುವ ಆನಂದ್‌ ಸಿಂಗ್‌ ಮಗ ಸಿದ್ಧಾರ್ಥ ಅವರ ಅದ್ದೂರಿ ಮದುವೆಗೆ ಅನುಮತಿ ಕೊಡಬಾರದು’ ಎಂದು ಸಾಮಾಜಿಕ ಕಾರ್ಯಕರ್ತ ಯೋಗೀಶ ಗೌಡ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ ಅರಸ್‌ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದರು. 

‘ಗೃಹ ಪ್ರವೇಶ ಹಾಗೂ ಮಗನ ಮದುವೆಗಾಗಿ ಆನಂದ್‌ ಸಿಂಗ್‌ ಚುನಾವಣಾ ಆಯೋಗಕ್ಕೆ ತಿಳಿಸಿದ್ದರು. ಸರಳವಾಗಿ ಗೃಹ ಪ್ರವೇಶ ಕಾರ್ಯಕ್ರಮ ಮಾಡಿದ್ದಾರೆ. ದಿನವಿಡೀ ನಮ್ಮ ಸಿಬ್ಬಂದಿ ಅಲ್ಲಿಯೇ ಇದ್ದು, ಎಲ್ಲವನ್ನೂ ಪರಿಶೀಲಿಸಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆಯಂತಹ ಯಾವುದೇ ಘಟನೆಗಳು ನಡೆದಿಲ್ಲ. ಮದುವೆ ಮಾಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ, ಮದುವೆಗೆ ಬಂದವರಿಗೆ ಉಡುಗೊರೆ ಕೊಟ್ಟರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ’ ಎಂದು ಚುನಾವಣಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)