ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಅಂಗವಿಕಲರ ಪಿಂಚಣಿ ಹೆಚ್ಚಿಸಲು ‘ಆಶಾಕಿರಣ’

ಬಳ್ಳಾರಿ ಜಿಲ್ಲಾಡಳಿತದಿಂದ ವಿಶೇಷ ಯೋಜನೆ; ಸಂಡೂರಿನಲ್ಲಿ ಅನುಷ್ಠಾನ, ಜಿಲ್ಲಾ ಖನಿಜ ನಿಧಿ ಬಳಕೆ
Last Updated 4 ನವೆಂಬರ್ 2020, 8:55 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯ ಅಂಗವಿಕಲರಿಗೆ ಜಿಲ್ಲಾಡಳಿತವು ‘ಆಶಾಕಿರಣ’ ವಿಶೇಷ ಮಾಸಿಕ ಪಿಂಚಣಿ ಯೋಜನೆಯನ್ನು ರೂಪಿಸಿದ್ದು, ಜಿಲ್ಲಾ ಖನಿಜ ನಿಧಿಯ ಮೂಲಕ ಸಂಡೂರು ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುತ್ತಿದೆ.

ಅಂಗವಿಕಲರ ಆರೋಗ್ಯವನ್ನು ಉತ್ತಪಡಿಸಿಕೊಳ್ಳಲು ನೆರವಾಗುವುದೇ ಯೋಜನೆಯ ಪ್ರಮುಖ ಉದ್ದೇಶ. ಜಿಲ್ಲೆಯಲ್ಲಿ ಅತಿಹೆಚ್ಚು ಗಣಿಬಾಧಿತರಿರುವ ಸಂಡೂರು ತಾಲೂಕನ್ನುಮೊದಲಿಗೆ ಆಯ್ಕೆ ಮಡಲಾಗಿದ್ದು, ನಂತರ ಉಳಿದ ತಾಲ್ಲೂಕುಗಳಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ರಾಜ್ಯ ಸರ್ಕಾರವು ನೀಡುವ ಮಾಸಿಕ ಪಿಂಚಣಿ ಯೋಜನೆಯ ಜೊತೆಗೆ ‘ಆಶಾಕಿರಣ’ ಯೋಜನೆಯ ಮೂಲಕ ಮೂರು ವರ್ಷಗಳ ಕಾಲ ಅಂಗವಿಕಲರಿಗೆ ಹೆಚ್ಚುವರಿ ಮಾಸಿಕ ಪಿಂಚಣಿ ದೊರಕಲಿದೆ.

ಯಾರಿಗೆ ಎಷ್ಟು: ಸದ್ಯ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಶೇ 40ರಿಂದ ಶೇ.75ರವರೆಗೆ ಅಂಗವೈಕಲ್ಯ ಉಳ್ಳವರಿಗೆ ಮಾಸಿಕ ₹ 600 ನೀಡಲಾಗುತ್ತಿದೆ. ಹೊಸ ಯೋಜನೆ ಅಡಿ ಅವರಿಗೆ ಹೆಚ್ಚುವರಿಯಾಗಿ ₹ 500 ನೀಡಲಾಗುತ್ತದೆ. ಫಲಾನುಭವಿಗೆ ಒಟ್ಟು ₹ 1,100 ದೊರಕಲಿದೆ.

ಶೇ 75ಕ್ಕಿಂತ ಮೇಲ್ಪಟ್ಟ ಅಂಗವಿಕಲರಿಕೆ ಇಲಾಖೆಯು ₹ 1,400 ಪಿಂಚಣಿ ನೀಡುತ್ತಿದ್ದು, ಅದರೊಂದಿಗೆ ₹ 700 ಸೇರಿ ಒಟ್ಟು ಪಿಂಚಣಿ 2,100 ದೊರಕಲಿದೆ.

3,408 ಅಂಗವಿಕಲರು: ಸಂಡೂರು ತಾಲೂಕಿನಲ್ಲಿ ಸದ್ಯ 3408 ಅಂಗವಿಕಲರಿದ್ದು, ಪಿಂಚಣಿ ಪಡೆಯುವ ಫಲಾನುಭವಿಗಳು ತಮ್ಮ ಆರೋಗ್ಯ ಸ್ಥಿತಿಯನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಲು ಬಳಸಿಕೊಳ್ಳಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.

ಯೋಜನೆ ಕುರಿತು ಸಂಡೂರಿನಲ್ಲಿ ಫಲಾನುಭವಿಗಳಿಗೆ ತಿಳಿವಳಿಕೆ ಪತ್ರಗಳನ್ನು ವಿತರಿಸಲಾಗುತ್ತಿದೆ. ಹೆಚ್ಚುವರಿ ಮಾಸಿಕ ಪಿಂಚಣಿಯನ್ನು ಪಡೆಯಲು ಕಡ್ಡಾಯವಾಗಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಖಾತೆಯನ್ನು ಹೊಂದದಿರುವವರು ಕೂಡಲೇ ಹೊಸ ಉಳಿತಾಯ ಖಾತೆಯನ್ನು ತೆರೆದು ವಿವರವನ್ನು ಸಂಡೂರು ತಹಸೀಲ್ದಾರರ ಕಚೇರಿಗೆ ಸಲ್ಲಿಸಬೇಕು.

ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಾಗೂ ಅಂಚೆ ಇಲಾಖೆಯಲ್ಲಿ ಖಾತೆ ಹೊಂದಿರುವವರಿಗೆ ಮನಿಆರ್ಡರ್‌ ಮೂಲಕ ಹೆಚ್ಚುವರಿ ಮಾಸಿಕ ಪಿಂಚಣಿ ಹಣವನ್ನು ಜಮಾ ಮಾಡಲಾಗುತ್ತಿದೆ.

ಮಾಹಿತಿಗಾಗಿ ಆಸಕ್ತರು ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ: 08392-277100 ಮತ್ತು ಸಂಡೂರು ತಹಶೀಲ್ದಾರರ ಕಚೇರಿ: 08395-260241 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

‘ಗಣಿಗಾರಿಕೆಯಿಂದ ಹೆಚ್ಚು ಬಾಧಿತರಾದ ಅಂಗವಿಕಲ ಸಮುದಾಯಕ್ಕಾಗಿಯೇ ಆಶಾಕಿರಣ ಯೋಜನೆಯನ್ನು ರೂಪಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT