ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿನ ಓಟದ ‘ಪವರ್‌ ಮ್ಯಾನ್‌’, ವೃತ್ತಿ–ಪ್ರವೃತ್ತಿಗೆ ಸಮಾನ ನ್ಯಾಯ

ಕಟಿಂಗ್‌ ಪ್ಲೇಯರ್‌ ಇಟ್ಟುಕೊಂಡೇ ಟ್ರ್ಯಾಕ್‌ನಲ್ಲಿ ಅಭ್ಯಾಸ
Last Updated 12 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಹೊಸಪೇಟೆ:ಈ ‘ಪವರ್‌ ಮ್ಯಾನ್‌’ ಟ್ರ್ಯಾಕ್‌ನಲ್ಲಿ ಓಡಿದರೆ ಪದಕ ಕಟ್ಟಿಟ್ಟ ಬುತ್ತಿ. ಅದಕ್ಕೆ ಸಾಕ್ಷಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಜಯಿಸಿದ ಅನೇಕ ಪದಕಗಳೇ ಸಾಕ್ಷಿ.

ವೃತ್ತಿಯಿಂದ ಇಲ್ಲಿನ ಜೆಸ್ಕಾಂನಲ್ಲಿ ‘ಪವರ್‌ ಮ್ಯಾನ್‌’ ಆಗಿರುವ ಕಿರಣ್‌ ಕುಮಾರ್‌ ಅವರಿಗೆ ಅಥ್ಲೆಟಿಕ್ಸ್‌ ಬಹಳ ಅಚ್ಚುಮೆಚ್ಚು. ಅದರ ಬಗೆಗಿನ ಒಲವು, ಹುಚ್ಚು ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದೆ.

ಅವರ ಸಾಧನೆಯಿಂದ ಇಲಾಖೆ ಕೂಡ ಬೀಗುವಂತಾಗಿದೆ. ಹೀಗಾಗಿ ದೇಶದ ಯಾವುದೇ ಭಾಗದಲ್ಲಿ ಅಥ್ಲೆಟಿಕ್ಸ್‌ ಆಯೋಜಿಸಿದರೆ, ಅಲ್ಲಿಗೆ ಕಿರಣ್‌ ಕುಮಾರ್‌ ಅವರನ್ನು ಇಲಾಖೆ ಕಳುಹಿಸಿಕೊಡುತ್ತದೆ. ಕಿರಣ್‌ ಅವರು ಅಲ್ಲಿ ಉತ್ತಮ ಸಾಧನೆ ಮಾಡಿದರೆ, ಆ ಕೀರ್ತಿ ಇಡೀ ಇಲಾಖೆಗೆ ಸಲ್ಲುವಂತಹದ್ದು ಎಂದು ಅದು ಭಾವಿಸಿದೆ. ಹೀಗಾಗಿಯೇ ವೃತ್ತಿಯ ಜತೆ ಜತೆಗೆ ತನ್ನ ಅಭಿರುಚಿಯ ಕ್ಷೇತ್ರದಲ್ಲಿ ಅವರು ಮುಂದುವರಿಯುವಂತಾಗಿದೆ.

2007ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಕಿರಣ್‌ ಅವರಿಗೆ ಒಲಿದು ಬಂತು. ಆ ಅವಕಾಶವನ್ನು ಅವರು ಸರಿಯಾಗಿಯೇ ಬಳಸಿಕೊಂಡರು. ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ 4X400 ಮೀಟರ್‌ ರಿಲೇ ಮತ್ತು 400 ಮೀಟರ್‌ ಹರ್ಡಲ್ಸ್‌ನಲ್ಲಿ ಅವರು ಕಂಚಿನ ಪದಕ ಗೆದ್ದರು. ಮರುವರ್ಷ ನಡೆದ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದು, ಬೆಳ್ಳಿ ಪದಕಕ್ಕೆ ಪಾತ್ರರಾದರು. 2009ರಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

2010ರಲ್ಲಿ ಮುಂಬೈನಲ್ಲಿ ಜರುಗಿದ ರಿಲೇ ಹಾಗೂ ಹರ್ಡಲ್ಸ್‌ನಲ್ಲಿ ಮತ್ತೆ ದ್ವಿತೀಯ ಸ್ಥಾನ ಗಳಿಸಿ, ಬೆಳ್ಳಿ ಪದಕ ಮುಡಿಗೇರಿಸಿಕೊಂಡರು. ಬೆಂಗಳೂರು, ಮೈಸೂರು, ಬೀದರ್‌, ಹುಬ್ಬಳ್ಳಿ, ಮಂಗಳೂರಿನಲ್ಲಿ ಇಲಾಖೆ ಆಯೋಜಿಸಿದ್ದ ರಾಜ್ಯಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ. ಮಂಗಳೂರಿನಲ್ಲಿ 400 ಮೀಟರ್‌ ರಿಲೇಯಲ್ಲಿ ಚಿನ್ನದ ಬೇಟೆಯಾಡಿ, ಇಲಾಖೆಯ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅಂದಹಾಗೆ, ಕಿರಣ್‌ ಅವರಿಗೆ ಅಥ್ಲೆಟಿಕ್ಸ್‌ ಜತೆಗೆ ಬಾಸ್ಕೆಟ್‌ಬಾಲ್‌, ಶಾಟ್‌ಪಟ್‌, ಡಿಸ್ಕಸ್‌ ಥ್ರೋ, ಕೊ ಕೊ ಆಟದಲ್ಲೂ ಹಿಡಿತವಿದೆ. ಜೆಸ್ಕಾಂ ತಂಡದೊಂದಿಗೆ ನಾಲ್ಕು ಸಲ ರಾಜ್ಯಮಟ್ಟದ ಬಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ನಾಲ್ಕೂ ಸಲ ಅವರು ಪ್ರತಿನಿಧಿಸುವ ತಂಡ ರನ್ನರ್‌ ಅಪ್‌ ಆಗಿದೆ. ತಿರುವನಂತಪುರ ಮತ್ತು ಕೊಯಮತ್ತೂರಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲೂ ಭಾಗವಹಿಸಿ, ಅನುಭವ ಗಿಟ್ಟಿಸಿಕೊಂಡಿದ್ದಾರೆ.ಜೆಸ್ಕಾಂ ಹಮ್ಮಿಕೊಂಡಿದ್ದ ರಾಜ್ಯಮಟ್ಟದಡಿಸ್ಕಸ್‌ ಥ್ರೊನಲ್ಲಿ ತೃತೀಯ ಬಹುಮಾನ ಗಳಿಸಿದ್ದಾರೆ.

ಕಿರಣ್‌ ಅವರಿಗೆ ಕ್ರೀಡೆಯ ಬಗ್ಗೆ ಒಲವು ಬೆಳೆಯಲು ವಿಶೇಷ ಕಾರಣವಿದೆ. ಅದನ್ನು ಅವರೇ ವಿವರಿಸಿದ್ದಾರೆ. ‘ನಾನು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಗುಂಟಮಡು ಗ್ರಾಮದವನು. ಅನೇಕ ವರ್ಷಗಳಿಂದ ನಗರದಲ್ಲಿ ನೆಲೆಸಿದ್ದೇನೆ. ನಮ್ಮ ಊರಿನಿಂದ ಶಾಲೆ ಐದು ಕಿ.ಮೀ. ದೂರದಲ್ಲಿತ್ತು. ನಿತ್ಯ ಗೆಳೆಯರೊಂದಿಗೆ ನಡೆಯುತ್ತ, ಓಡುತ್ತ ತಮಾಷೆ ಮಾಡಿಕೊಂಡು ಹೋಗುತ್ತಿದ್ದೆವು. ಕೆಲವೊಮ್ಮೆ ತಡವಾದರೆ ಓಡಿಕೊಂಡು ಶಾಲೆಗೆ ಹೋಗುತ್ತಿದ್ದೆವು. ಅದು ನಮ್ಮನ್ನು ದೈಹಿಕವಾಗಿ ಸದೃಢಗೊಳಿಸಿತು’ ಎಂದು ನೆನಪಿಸಿಕೊಂಡರು.

‘ನಂತರ ಶಾಲೆಯಲ್ಲಿ ಹಮ್ಮಿಕೊಳ್ಳುತ್ತಿದ್ದ ಓಟದ ಸ್ಪರ್ಧೆಯಲ್ಲಿ ತಪ್ಪದೇ ಭಾಗವಹಿಸಿ ಬಹುಮಾನ ಗೆಲ್ಲುತ್ತಿದ್ದೆ. ಶಾಲೆಯ ದೈಹಿಕ ಶಿಕ್ಷಕರು ಹಾಗೂ ನನ್ನ ತಂದೆ ಬೆನ್ನು ತಟ್ಟಿ ಹುರಿದುಂಬಿಸಿದರು. ಹೀಗಾಗಿ ಪ್ರೌಢಶಾಲೆ, ಕಾಲೇಜಿನಲ್ಲಿದ್ದಾಗಲೂ ತಪ್ಪದೇ ಭಾಗವಹಿಸುತ್ತಿದ್ದೆ. 2005ರಲ್ಲಿ ಎಲೆಕ್ಟ್ರಿಷಿಯನ್‌ ಆಗಿ ಕೆಲಸಕ್ಕೆ ಸೇರಿದ ನಂತರವೂ ಅದರಲ್ಲಿ ಮುಂದುವರಿದಿದ್ದೇನೆ’ ಎಂದು ಹೇಳಿದರು.

‘ಇಲಾಖೆಯಲ್ಲಿ ಸಾಕಷ್ಟು ಕೆಲಸದ ಒತ್ತಡ ಇದೆ. ಹೀಗಿದ್ದರೂ ಬಿಡುವು ಮಾಡಿಕೊಂಡು ಟ್ರ್ಯಾಕ್‌ನಲ್ಲಿ ನಿತ್ಯ ಅಭ್ಯಾಸ ಮಾಡುತ್ತೇನೆ. ಅಥ್ಲೆಟಿಕ್ಸ್‌ ಕೋಚ್‌ ರೋಹಿಣಿ ಪರ್ವತೆಕರ್‌ ಮಾರ್ಗದರ್ಶನ ಮಾಡುತ್ತಿದ್ದಾರೆ. ಕ್ರೀಡೆಯ ಕಾರಣಕ್ಕಾಗಿಯೇ ನಾನು ಸದಾ ಲವಲವಿಕೆಯಿಂದ ಇರುತ್ತೇನೆ. ಚಿಕ್ಕಂದಿನಿಂದ ಇಲ್ಲಿಯವರೆಗೆ ಒಮ್ಮೆಯೂ ಆಸ್ಪತ್ರೆಗೆ ಹೋಗಿಲ್ಲ. ಇಲಾಖೆಯಲ್ಲಿ ದೈಹಿಕವಾದ ಕೆಲಸ ಮಾಡುತ್ತಿದ್ದರೂ ಆಯಾಸವೆನಿಸುವುದಿಲ್ಲ’ ಎಂದು ಹೇಳಿದರು.

‘ಕಿರಣ್‌ ಕುಮಾರ್‌ ಶ್ರಮಜೀವಿ. ಯಾವಾಗಲೂ ಜತೆಯಲ್ಲಿ ಕಟಿಂಗ್‌ ಪ್ಲೇಯರ್‌ ಇಟ್ಟುಕೊಂಡು ಅಭ್ಯಾಸಕ್ಕೆ ಬರುತ್ತಾರೆ. ಅವರ ಇಲಾಖೆಯಿಂದ ಕರೆ ಬಂದರೆ, ತಕ್ಷಣವೇ ಕೆಲಸಕ್ಕೆ ಹೋಗುತ್ತಾರೆ. ಅಥ್ಲೆಟಿಕ್ಸ್‌ನಲ್ಲಿ ಅವರಿಗೆ ಒಳ್ಳೆಯ ಭವಿಷ್ಯವಿದೆ. ವೃತ್ತಿ ಹಾಗೂ ಪ್ರವೃತ್ತಿಗೆ ಸಮಾನ ನ್ಯಾಯ ಕೊಡುತ್ತಿದ್ದಾರೆ’ ಎಂದು ರೋಹಿಣಿ ಪರ್ವತೆಕರ್‌ ಮೆಚ್ಚುಗೆಯ ಮಾತು ಆಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT