ಸ್ವಂತ ಖರ್ಚಿನಲ್ಲಿ ಗ್ರಂಥಾಲಯ ತೆರೆದ ಪುಸ್ತಕ ಪ್ರೀತಿಯ ಮೇಷ್ಟ್ರಿಗೆ ಪ್ರಶಸ್ತಿ ಗರಿ

7
ಬಡ ಮಕ್ಕಳಿಗೆ ಉಚಿತ ತರಗತಿ

ಸ್ವಂತ ಖರ್ಚಿನಲ್ಲಿ ಗ್ರಂಥಾಲಯ ತೆರೆದ ಪುಸ್ತಕ ಪ್ರೀತಿಯ ಮೇಷ್ಟ್ರಿಗೆ ಪ್ರಶಸ್ತಿ ಗರಿ

Published:
Updated:
Deccan Herald

ಹೊಸಪೇಟೆ: ಓದಿನಲ್ಲಿ ಹಿಂದಿರುವ ಮಕ್ಕಳಿಗೆ ಉಚಿತ ತರಗತಿಗಳನ್ನು ಆಯೋಜಿಸಿ, ಅವರಲ್ಲಿ ಪುಸ್ತಕ ಪ್ರೀತಿ ಬೆಳೆಸಿ, ಕಲಿಕೆಯಲ್ಲಿ ಮುಂದೆ ತರಲು ಶ್ರಮಿಸುತ್ತಿರುವ ಶಿಕ್ಷಕ ಬಿ. ಸೈಯದ್‌ ಹುಸೇನ್‌ ಅವರು ಈ ಸಲದ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

ನಗರ ಹೊರವಲಯದ ಕಾರಿಗನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್‌ ಶಿಕ್ಷಕರಾಗಿರುವ ಸೈಯದ್‌ ಅವರ ಪಾಠ–ಪ್ರವಚನ ಶಾಲೆಗಷ್ಟೇ ಸೀಮಿತವಾಗಿಲ್ಲ. ಶಾಲೆಯ ಹೊರಗೂ ಬೋಧನಾ ಚಟುವಟಿಕೆ ವಿಸ್ತರಣೆಗೊಂಡಿದೆ. ಈ ಹಿಂದೆ ಅವರು ಕಂಪ್ಲಿಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾಗ ಅವರ ಮನೆಯಲ್ಲೇ ‘ಸೈ’ ಹೆಸರಿನ ಗ್ರಂಥಾಲಯ ತೆಗೆದಿದ್ದರು.

ಪ್ರಸಿದ್ಧ ಲೇಖಕರ ಪುಸ್ತಕಗಳು, ಕಾದಂಬರಿಗಳು, ಜೀವನ ಚರಿತ್ರೆ, ನಿಯತಕಾಲಿಕೆ, ವಾರಪತ್ರಿಕೆ, ಸಾಮಾನ್ಯ ಜ್ಞಾನ, ಶಬ್ದಕೋಶ ಸೇರಿದಂತೆ ಇತರೆ ಪುಸ್ತಕಗಳನ್ನು ಇಟ್ಟಿದ್ದರು. ಯಾರು ಬೇಕಾದರೂ ಅಲ್ಲಿಗೆ ಬಂದು ಅವುಗಳನ್ನು ಓದಬಹುದಿತ್ತು. ಆಸಕ್ತರು ಅವುಗಳನ್ನು ಮನೆಗೆ ಕೂಡ ತೆಗೆದುಕೊಂಡು ಹೋಗಿ ಹೋದಲು ಅವಕಾಶ ಮಾಡಿಕೊಟ್ಟಿದ್ದರು. ಈಗ ‘ಸೈ’ ಗ್ರಂಥಾಲಯ ‘ಎ.ಪಿ.ಜೆ. ಅಬ್ದುಲ್‌ ಕಲಾಂ ಸಾಂಸ್ಕೃತಿಕ ವೇದಿಕೆ’ ಹೆಸರು ಪಡೆದುಕೊಂಡಿದೆ.

ವೇದಿಕೆಯಿಂದ ಮೂರು ತಿಂಗಳಿಗೊಮ್ಮೆ ಕಾರ್ಯಕ್ರಮಗಳನ್ನು ಆಯೋಜಿಸಿ, ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪುಸ್ತಕಗಳನ್ನು ಕೊಡುಗೆಯಾಗಿ ಕೊಟ್ಟು ಹುರಿದುಂಬಿಸುತ್ತಾರೆ. ಎಸ್‌.ಎಸ್‌.ಎಲ್‌.ಸಿ. ಯಲ್ಲಿ ಯಾವ ವಿದ್ಯಾರ್ಥಿಗಳು ಓದಿನಲ್ಲಿ ಹಿಂದಿರುತ್ತಾರೋ ಅಂತಹ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಗುರುತಿಸಿ, ಅವರಿಗೆ ಮನೆಗೆ ಕರೆದು ಪಾಠ–ಪ್ರವಚನ ಮಾಡುತ್ತಾರೆ. ಅವರಿಗೆ ಬೇರೆ ಬೇರೆ ನಿದರ್ಶನಗಳನ್ನು ಕೊಟ್ಟು ಪಾಠ ಮನದಟ್ಟು ಮಾಡುತ್ತಾರೆ. ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳಿಗೆ ಸ್ವತಃ ಅವರೇ ಪುಸ್ತಕಗಳನ್ನೂ ಖರೀದಿಸಿ ಕೊಡುತ್ತಾರೆ. ಜಾಣ ಹುಡುಗರಂತೆ ಆ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಬೇಕೆಂಬುದು ಅವರ ಕಳಕಳಿ.

27 ವರ್ಷಗಳಿಂದ ಶಿಕ್ಷಕರಾಗಿ ದುಡಿಯುತ್ತಿರುವ ಸೈಯದ್‌ ಅವರ ಈ ಕೆಲಸಕ್ಕೆ ಅವರು ಕ್ರಮಿಸಿ ಬಂದ ಹಾದಿಯೇ ಪ್ರೇರಣೆ. ‘ನಾನು ಬಡ ಕೂಲಿ ಕಾರ್ಮಿಕರ ಮನೆಯಲ್ಲಿ ಹುಟ್ಟಿದವನು. ನಮ್ಮ ತಂದೆ–ತಾಯಿಯ ಏಳು ಮಕ್ಕಳಲ್ಲಿ ನಾನು ಹಿರಿಯವನು. ನನಗೆ ಬಾಲ್ಯದಿಂದಲೂ ಓದಿನ ಬಗ್ಗೆ ವಿಶೇಷ ಆಸಕ್ತಿ. ಆದರೆ, ಮನೆಯವರಿಗೆ ಶಾಲೆಯ ಹಣ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ನನ್ನ ಆಸಕ್ತಿ ನೋಡಿ ಊರಿನ ಕೆಲವರು ನೆರವು ನೀಡಿದರು. ಇದರಿಂದ ಪಿ.ಯು. ವರೆಗೆ ಓದಿದೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ಕೆಲಸ ಮಾಡುತ್ತಲೇ ಮುಗಿಸಿದೆ. ಬೆಳಿಗ್ಗೆ ಕಾಲೇಜು ಮುಗಿಸಿಕೊಂಡು, ಮಧ್ಯಾಹ್ನದಿಂದ ಸಂಜೆಯ ವರೆಗೆ ಹೂ ಮಾರಾಟ ಮಾಡುತ್ತಿದ್ದೆ. ರಾತ್ರಿ ಓದುತ್ತಿದ್ದೆ’ ಎಂದು ಸೈಯದ್‌ ನೆನಪಿಸಿಕೊಂಡರು.

‘ಅನೇಕ ಜನ ನನ್ನ ಕೈಹಿಡಿದ ಕಾರಣದಿಂದಲೇ ನಾನು ಶಿಕ್ಷಕನಾಗಲು ಸಾಧ್ಯವಾಗಿದೆ. ನನ್ನಂತೆ ಸಾಕಷ್ಟು ಜನ ಇದ್ದಾರೆ. ಅವರು ಕೂಡ ಮುಖ್ಯವಾಹಿನಿಗೆ ಬರಬೇಕು ಎನ್ನುವುದು ನನ್ನ ಮಹದಾಸೆ. ಅದಕ್ಕಾಗಿ ಮನೆಯಲ್ಲೇ ಗ್ರಂಥಾಲಯ ತೆರೆದು ಬಡ ಮಕ್ಕಳಿಗೆ ಓದಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಶೇಷ ತರಗತಿಗಳನ್ನು ನಡೆಸಿ, ಅವರು ಹೆಚ್ಚು ಅಂಕ ಗಳಿಸಲು ಶ್ರಮಿಸುತ್ತಿದ್ದೇನೆ’ ಎಂದರು.

ಇನ್ನು ಶಾಲೆಯಲ್ಲಿ ಪಠ್ಯದ ಜತೆಗೆ ದಿನಪತ್ರಿಕೆಗಳು, ಪ್ರಮುಖ ವಾರ ಪತ್ರಿಕೆಗಳಲ್ಲಿ ಬರುವ ವಿಷಯಗಳನ್ನು ತಿಳಿಸಿ ಪರಿಣಾಮಕಾರಿ ಬೋಧನೆ ಮಾಡುತ್ತಾರೆ. ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಸೈಯದ್‌ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಕಂಪ್ಲಿ ಹೋಬಳಿ ಘಟಕದ ಕಾರ್ಯದರ್ಶಿ ಆಗಿದ್ದಾರೆ.

ಜಿಲ್ಲೆ ಸೇರಿದಂತೆ ಬೇರೆಡೆ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ತಾವು ಪಾಲ್ಗೊಳ್ಳುವುದಲ್ಲದೇ ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರೇರೇಪಿಸುತ್ತಾರೆ. ಈಗಾಗಲೇ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿರುವ ಅವರಿಗೆ, ಬುಧವಾರ ಶಿಕ್ಷಣ ಇಲಾಖೆಯು ಬೆಂಗಳೂರಿನಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಗೌರವಿಸಲಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !