ಮಂಗಳವಾರ, ಸೆಪ್ಟೆಂಬರ್ 28, 2021
25 °C
ಕೆರೆ, ಕಟ್ಟೆ ತುಂಬಿಸಲು ಜನಪ್ರತಿನಿಧಿಗಳು ವಿಫಲ–ಆರೋಪ

ಹೊಸಪೇಟೆ: ತುಂಗಭದ್ರಾ ನದಿಗೆ ಬಾಗಿನ ಅರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಇಲ್ಲಿನ ತುಂಗಭದ್ರಾ ಜಲಾಶಯ ಸಂಪೂರ್ಣ ತುಂಬಿರುವುದರಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಬುಧವಾರ ಬಾಗಿನ ಸಮರ್ಪಿಸಿದರು.

ಅಣೆಕಟ್ಟೆ ಮೇಲೆ ಗಂಗೆಗೆ ವಿಶೇಷ ಪೂಜೆ ಸಲ್ಲಿಸಿ, ನದಿಗೆ ಬಾಗಿನ ಅರ್ಪಿಸಿದರು. ಬಳಿಕ ‘ತುಂಗಭದ್ರೆಗೆ ಜಯವಾಗಲಿ, ರೈತ ಕುಲಕ್ಕೆ ಜಯವಾಗಲಿ’ ಎಂದು ಘೋಷಣೆ ಕೂಗಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌, ‘ಸಾಮಾನ್ಯವಾಗಿ ತುಂಗಭದ್ರಾ ಜಲಾಶಯ ಆಗಸ್ಟ್‌ನಲ್ಲಿ ತುಂಬುತ್ತದೆ. ಈ ವರ್ಷ ಜುಲೈನಲ್ಲಿ ತುಂಬಿರುವುದು ಸಂತಸದ ವಿಷಯ. ರೈತರು ಎರಡು ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಅವರ ಬದುಕು ಹಸನಾಗುತ್ತದೆ’ ಎಂದರು.

‘ಪ್ರತಿ ವರ್ಷ ನೂರಾರು ಟಿಎಂಸಿ ಅಡಿ ನೀರು ನದಿಯಲ್ಲಿ ಹರಿದು ಹೋಗುತ್ತದೆ. ಇದುವರೆಗೆ ಸರಾಸರಿ 50 ಟಿಎಂಸಿ ಅಡಿ ನೀರು ನದಿಯಲ್ಲಿ ಹರಿದು ಹೋಗಿದೆ. ಆಂಧ್ರ ಪ್ರದೇಶದಲ್ಲಿ ಇದೇ ನದಿಯ ನೀರಿನಿಂದ ಅಲ್ಲಿನ ಎಲ್ಲ ಕೆರೆ, ಕಟ್ಟೆ ತುಂಬಿಸಲಾಗಿದೆ. ಆದರೆ, ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕಾರಣದಿಂದ ಅದು ಸಾಧ್ಯವಾಗಿಲ್ಲ’ ಎಂದು ಆರೋಪಿಸಿದರು.

‘ಒಂದುವೇಳೆ ನಾಲ್ಕೂ ಜಿಲ್ಲೆಗಳ ಕೆರೆ, ಕಟ್ಟೆ ತುಂಬಿಸಿದರೆ ಅಂತರ್ಜಲ ಹೆಚ್ಚಾಗುತ್ತದೆ. ಪ್ರಾಣಿ, ಪಕ್ಷಿ, ದನ ಕರುಗಳಿಗೆ ವರ್ಷದ ಎಲ್ಲ ದಿನಗಳಲ್ಲೂ ಕುಡಿಯುವ ನೀರು ಸಿಗುತ್ತದೆ. ಜಲಾಶಯದಲ್ಲಿ 30 ಟಿಎಂಸಿ ಅಡಿ ಹೂಳು ತುಂಬಿರುವುದರಿಂದ ಅದರ ನೀರಿನ ಸಂಗ್ರಹ ಸಾಮರ್ಥ್ಯ 101 ಟಿಎಂಸಿ ಅಡಿಗೆ ಕುಸಿದಿದೆ. ಹೀಗಾಗಿ ಅಚ್ಚುಕಟ್ಟು ಪ್ರದೇಶದ ರೈತರನ್ನು ಹೊರತುಪಡಿಸಿ ಬೇರೆಯವರಿಗೆ ನೀರು ಕೊಡಬಾರದು’ ಎಂದು ಹಕ್ಕೊತ್ತಾಯ ಮಾಡಿದರು.

ಸಂಘದ ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಮಾತನಾಡಿ, ‘ವಿಜಯನಗರ ಕಾಲುವೆಗಳಾದ ಬೆಲ್ಲ, ಬಸವ, ರಾಯ, ಕಾಳಘಟ್ಟ, ತುರ್ತಾ ಕಾಲುವೆಗಳ ಕಾಮಗಾರಿ ಕಳಪೆಯಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಗುಣಮಟ್ಟಕ್ಕೆ ಒತ್ತು ಕೊಡಬೇಕು’ ಎಂದು ಒತ್ತಾಯಿಸಿದರು.

ಸಂಘದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಬಿ.ವಿ.ಗೌಡ, ಜಿಲ್ಲಾ ಉಪಾಧ್ಯಕ್ಷ ಆನಂದರೆಡ್ಡಿ, ನಗರ ಘಟಕದ ಅಧ್ಯಕ್ಷ ಟಿ.ನಾಗರಾಜ್, ಮುಖಂಡರಾದ ಮಲ್ಲಿಕಾರ್ಜುನ, ಜೆ.ನಾಗರಾಜ, ಚಿನ್ನದೊರೆ, ರೇವಣಸಿದ್ದಪ್ಪ, ಹೇಮರೆಡ್ಡಿ, ಎಲ್.ನಾಗೇಶ್, ಅಯ್ಯಣ್ಣ, ನವೀನ್, ಜೆ.ರಾಘವೇಂದ್ರ, ಧರ್ಮ, ನಲ್ಲಾಪುರ ಹನುಮಂತಪ್ಪ, ಜೆ.ಮಲ್ಲಣ್ಣ, ಜಿ.ಶಿವಪ್ಪ, ದುರ್ಗೆಶ್, ಸತೀಶ್, ರಾಮಾಂಜಿನಿ, ಮಣಿ, ಜೆ.ಬಸವರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.