ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮ್ಸ್‌ ಅವಘಡ; ಸ್ಥಾನಿಕ ವೈದ್ಯ ಸೇರಿ ನಾಲ್ವರಿಗೆ ನೋಟಿಸ್

ವೈದ್ಯಾಧಿಕಾರಿಗಳಿಗೆ ನೋಟಿಸ್‌ ಜಾರಿ
Last Updated 15 ಸೆಪ್ಟೆಂಬರ್ 2022, 18:31 IST
ಅಕ್ಷರ ಗಾತ್ರ

ಬಳ್ಳಾರಿ: ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ವಿಮ್ಸ್‌) ಬುಧವಾರ ವಿದ್ಯುತ್‌ ಕಡಿತ, ಜನರೇಟರ್ ಕೆಟ್ಟು, ವೆಂಟಿಲೇಟರ್‌ಗಳಿಗೆ ಬ್ಯಾಟರಿ ಬಲವಿಲ್ಲದೆ ಸಂಭವಿಸಿದೆ ಎನ್ನಲಾದ ಸಾವುಗಳಿಗೆ ವೈದ್ಯರ ನಿರ್ಲಕ್ಷ್ಯ ಕಾರಣವೆಂಬ ಶಂಕೆ ಇದ್ದು, ಕೆಲವರಿಗೆ ನೋಟಿಸ್‌ ಜಾರಿಯಾಗಿದೆ.

ದುರ್ಘಟನೆ ಕುರಿತು ವಿಚಾರಣೆ ನಡೆಸಲು ರಾಜ್ಯ ಸರ್ಕಾರ ಸಮಿತಿ ರಚಿಸಿರುವ ಬೆನ್ನಲ್ಲೇ, ಜಿಲ್ಲಾಧಿಕಾರಿ ಪವನಕುಮಾರ್‌ ಮಾಲಪಾಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಎಲ್‌.ಜನಾರ್ದನ್‌ ಅವರಿಂದ ವರದಿ ತರಿಸಿಕೊಂಡಿದ್ದಾರೆ.

ಈ ಮಧ್ಯೆ, ಐಸಿಯುನಲ್ಲಿ ಕರೆಂಟ್‌, ಜನರೇಟರ್‌ ಕೈಕೊಟ್ಟು ಮೃತಪಟ್ಟವರು ಮೂವರಲ್ಲ, ನಾಲ್ವರು. ಚೇಳು ಕಡಿದು ಆಸ್ಪತ್ರೆಗೆ ಸೇರಿದ್ದ 17 ವರ್ಷದ ಮನೋಜ್‌ ಬುಧವಾರ ಕೊನೆಯುಸಿರೆಳೆದಿದ್ದಾನೆ. ಈತ ಬಳ್ಳಾರಿ ತಾಲ್ಲೂಕಿನ ಜೋಳದರಾಶಿ ಗ್ರಾಮದವನು. ವೆಂಟಿಲೇಟರ್ ಮೇಲಿದ್ದ ಈತನಿಗೂ ಆಮ್ಲಜನಕ ಪೂರೈಕೆ ಆಗದ್ದರಿಂದ ಮೃತಪಟ್ಟಿದ್ದಾನೆ ಎಂದು ಕುಟುಂಬದ ಸದಸ್ಯರು ದೂರಿದ್ದಾರೆ.

ಸ್ಥಾನಿಕ ವೈದ್ಯಾಧಿಕಾರಿ, ವೈದ್ಯಕೀಯ ಸೂಪರಿಂಟೆಂಡೆಂಟ್‌, ತೀವ್ರ ನಿಗಾ ಘಟಕದಲ್ಲಿ ಕರ್ತವ್ಯನಿರತರಾಗಿದ್ದ ವೈದ್ಯರು ಮತ್ತು ನರ್ಸಿಂಗ್‌ ಸೂಪರಿಂಟೆಂಡೆಂಟ್‌ಗೆ ನೋಟಿಸ್‌ ಜಾರಿಗೊಳಿಸಲಾಗಿದ್ದು, ‘ಐಸಿಯುವಿನಲ್ಲಿ ವಿದ್ಯುತ್‌ ಸಂಪರ್ಕ, ಜನರೇಟರ್‌, ವೆಂಟಿಲೇಟರ್‌ ಬ್ಯಾಟರಿ ಕೈಕೊಟ್ಟರೂ ಮುಂಜಾಗ್ರತೆ ವಹಿಸದೆ ಕರ್ತವ್ಯಲೋಪ ಎಸಗಿದ ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಾರದೇಕೆ?‘ನೋಟಿಸ್‌ನಲ್ಲಿ ಕೇಳಲಾಗಿದೆ.

‘ಬುಧವಾರ ಬೆಳಿಗ್ಗೆ 6ಗಂಟೆಯಿಂದಲೇ ಕರೆಂಟ್‌ ಇರಲಿಲ್ಲ. ಜನರೇಟರ್‌ ಕೈಕೊಟ್ಟಿತ್ತು. ವೆಂಟಿಲೇಟರ್‌ ತುರ್ತು ಸೇವೆಯ ಬ್ಯಾಟರಿ ಬ್ಯಾಕಪ್‌ 1 ಗಂಟೆ ಬಳಕೆಯಾಗಿತ್ತು. ಪರಿಸ್ಥಿತಿ ಗಂಭೀರವಾದರೂ ವೈದ್ಯಾಧಿಕಾರಿಗಳು ಮುನ್ನೆಚ್ಚರಿಕೆ ವಹಿಸಲಿಲ್ಲ‘ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ಬೆಳಿಗ್ಗೆ ಸಮಸ್ಯೆ ಆರಂಭವಾದಂತೆ, ಗಂಭೀರ ಸ್ಥಿತಿಯಲ್ಲಿದ್ದವರನ್ನು ಟ್ರಾಮಾ ಕೇರ್‌ ಮತ್ತು ಹೊಸ ಶಸ್ತ್ರಚಿಕಿತ್ಸಾ ವಿಭಾಗಗಳಿಗೆ ಸ್ಥಳಾಂತರಿಸಲು ಸಿದ್ಧತೆ ನಡೆಯಿತು. ಅಷ್ಟರೊಳಗೆ ಇಬ್ಬರು ಮೃತಪಟ್ಟರು. ಮೂರನೇ ರೋಗಿ 11.30ಕ್ಕೆ ಮೃತರಾದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಗುರುವಾರ ವಿಮ್ಸ್‌ಗೆ ಜಿಲ್ಲಾಧಿಕಾರಿ ಮಾಲಪಾಟಿ, ಡಿಎಚ್‌ಒ ಜನಾರ್ದನ್‌ ಭೇಟಿ ಕೊಟ್ಟಿದ್ದರು. ವಿಮ್ಸ್‌ ನಿರ್ದೇಶಕ ಡಾ. ಗಂಗಾಧರಗೌಡ ವೈದ್ಯರ ಜತೆ ಸರಣಿ ಸಭೆಗಳನ್ನು ನಡೆಸಿದರು. ರಾಜ್ಯ ಸರ್ಕಾರ ರಚಿಸಿರುವ ಸಮಿತಿ ಶುಕ್ರವಾರ ವಿಮ್ಸ್‌ಗೆ ಭೇಟಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT