ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಗವಾನ್ ಮಹಾವೀರ ಸತ್ಯದ ಪ್ರತಿಪಾದಕರು’

Last Updated 25 ಏಪ್ರಿಲ್ 2021, 12:39 IST
ಅಕ್ಷರ ಗಾತ್ರ

ಹೊಸಪೇಟೆ: ಜಗತ್ತಿಗೆ ಶಾಂತಿ ಸಂದೇಶ ಸಾರಿದ ಭಗವಾನ್‌ ಮಹಾವೀರ ಜಯಂತಿ ಭಾನುವಾರ ನಗರದಲ್ಲಿ ತಾಲ್ಲೂಕು ಆಡಳಿತದಿಂದ ಆಚರಿಸಲಾಯಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಆನ್‌ಲೈನ್‌ ಉಪನ್ಯಾಸ ಕಾರ್ಯಕ್ರಮ ಜರುಗಿತು. ಅದರ ವಿವರ ಇಂತಿದೆ.

ಕನ್ನಡ ವಿಶ್ವವಿದ್ಯಾಲಯ:

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ, ‘ಪ್ರಾಕೃತದಲ್ಲಿ ಮಹಾವೀರನನ್ನು ಜ್ಞಾನಿ, ತತ್ವಜ್ಞಾನಿ, ಸರ್ವಜ್ಞ, ಎಲ್ಲವನ್ನು ತಿಳಿದವನು. ಸರ್ವಜೀವರಾಶಿಗೂ ಧರ್ಮೋಪದೇಶವನ್ನು ಮಹಾವೀರರು ಮಾಡಿದರು. ಉತ್ಕೃಷ್ಟವಾದ ಅಂಶಗಳನ್ನು ಉಪದೇಶಿಸಿದವರು ಮಹಾವೀರರು’ ಎಂದು ಹೇಳಿದರು.

‘ಮಹಾವೀರರು ಸಂಸಾರವನ್ನು ತೊರೆದು ದೀರ್ಘಕಾಲ ತಪಸ್ಸನ್ನು ಮಾಡಿ ಜ್ಞಾನವನ್ನು ಸಂಪಾದಿಸಿದರು. ಸತತವಾಗಿ ದೇಶದ ಉದ್ದಗಲಕ್ಕೂ ಸಂಚರಿಸಿ ಜನರಿಗೆ ತಿಳವಳಿಕೆ ನೀಡಿದರು. ಕ್ರಿ.ಶ. 6ನೇ ಶತಮಾನ ಜಗತ್ತಿನಲ್ಲಿ ಒಂದು ಸಂಚಲನವನ್ನು ಉಂಟು ಮಾಡಿದ ಕಾಲಮಾನ. ಸಾಕ್ರಟೀಸ್, ಪೈಥಾಗೋರಸ್ ಹೀಗೆ ಹಲವರು ಮಹಾನ್ ನಾಯಕರು ಹುಟ್ಟಿದ ಕಾಲವಾಗಿತ್ತು. ಜೈನ ಮತ್ತು ಬೌದ್ಧ ಸಮಕಾಲೀನ ಧರ್ಮವಾಗಿದ್ದವು. ಮಹಾವೀರರು ಜನಮುಖಿಯಾದ ಕೆಲಸವನ್ನು ಮಾಡುತ್ತಿದ್ದರು’ ಎಂದರು.

‘ಸತ್ಯ ನುಡಿಯುವುದು ಮಹಾವೀರರ ನಿಲುವಾಗಿತ್ತು. ಯಾವುದೇ ಪ್ರಾಣಿ, ಪಕ್ಷಿಗಳನ್ನು ಕೊಲ್ಲುವುದು ಅಪರಾಧವಾಗಿತ್ತು. ಪ್ರಕೃತಿಯನ್ನು ನಾಶ ಮಾಡಬಾರದೆಂದು ಜನರಲ್ಲಿ ತಿಳವಳಿಕೆ ಮೂಡಿಸಿದರು. ಜಿಡ್ಡುಗಟ್ಟಿದ ಸಮಾಜವನ್ನು ಬೆಳಕಿನೆಡೆಗೆ ಕೊಂಡೊಯ್ಯುವಲ್ಲಿ ಸತತ ಪ್ರಯತ್ನ ಮಾಡಿದರು’ ಎಂದು ಹೇಳಿದರು.

ಕುಲಪತಿ ಪ್ರೊ. ಸ.ಚಿ. ರಮೇಶ ಮಾತನಾಡಿ, ‘ಮಹಾವೀರರ ಜೀವನವನ್ನು ನೋಡಿದಾಗ ಅವರು ಪಟ್ಟ ಕಷ್ಟ, ಅಪಮಾನ ಹಾಗೂ ಆ ಕಾಲದ ಜಿಡ್ಡುಗಟ್ಟಿದ ವ್ಯವಸ್ಥೆ ಸರಿಪಡಿಸಲು ಸಾಕಷ್ಟು ಶ್ರಮಿಸಿದ್ದರು. ಈ ನಾಡನ್ನು ಭವ್ಯವಾಗಿ ಕಟ್ಟಬೇಕು. ಹಿಂಸೆಯನ್ನು ಬಿಡಬೇಕು. ಮನುಷ್ಯರಂತೆ ಪ್ರಾಣಿಗಳನ್ನು ಕಾಣಬೇಕು. ಪ್ರಕೃತಿಯನ್ನು ಉಳಿಸಬೇಕು. ಆ ಮೂಲಕ ಮನುಷ್ಯ ಆರೋಗ್ಯಪೂರ್ಣವಾಗಿರಲು ಸಾಧ್ಯ ಎಂಬ ತತ್ವ ಸಾರಿದರು’ ಎಂದು ತಿಳಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಪದ್ಮಿನಿ ನಾಗರಾಜ, ‘ಧರ್ಮ ಎಂದರೆ ಹಿಂಸೆ ಇಲ್ಲದಿರುವುದು. ಅದುವೇ ಜೈನಧರ್ಮ. ಮನುಷ್ಯ ಜಾತಿ ತಾನೊಂದೆ ವಲಂ ಎಂದು ಹೇಳಿರುವಾಗ ಮನುಷ್ಯ ಧರ್ಮದ ಹೆಸರಿನಲ್ಲಿ ಮನುಷ್ಯ ಬೇಡವಾದ್ದನ್ನು ಮಾಡಲು ಹೊರಟಿದ್ದಾನೆ. ಅದರ ಪ್ರತಿಫಲವಾಗಿ ಇಂದು ಜಗತ್ತು ಕೋವಿಡ್-19ನಿಂದ ನಲುಗುತ್ತಿದೆ’ ಎಂದರು.

ಅಭೇರಾಜ್ ಬಲ್ದೋಟ ಜೈನ ಅಧ್ಯಯನ ಪೀಠದ ಸಂಚಾಲಕ ಎಲ್.ಶ್ರೀನಿವಾಸ, ದರ್ಪಣ ಗಣಕ ಕೇಂದ್ರದ ಸಹಾಯಕ ನಿರ್ದೇಶಕ ಎಸ್‌.ಕೆ. ವಿಜಯೇಂದ್ರ ಪಾಲ್ಗೊಂಡಿದ್ದರು.

ತಾಲ್ಲೂಕು ಕಚೇರಿ:

ಮಹಾವೀರರ ಭಾವಚಿತ್ರಕ್ಕೆ ಗ್ರೇಡ್‌–2 ತಹಶೀಲ್ದಾರ್‌ ಮೇಘನಾ ಪುಷ್ಪನಮನ ಸಲ್ಲಿಸಿದರು. ತಾಲ್ಲೂಕು ಕಚೇರಿಯ ಶಿರಸ್ತೇದಾರ ರಮೇಶ್, ಶ್ರೀಧರ್ ಮತ್ತು ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT