ಮೆಣಸಿನಕಾಯಿ ಬೆಳೆಗೆ ಬೂದಿ ರೋಗ, ರೈತರಿಗೆ ನಷ್ಟದ ಭೀತಿ

7
ಕೆ.ಅಯ್ಯನಹಳ್ಳಿ, ಶಿವಪುರ ಭಾಗದಲ್ಲಿ ರೋಗದ ತೀವ್ರತೆ

ಮೆಣಸಿನಕಾಯಿ ಬೆಳೆಗೆ ಬೂದಿ ರೋಗ, ರೈತರಿಗೆ ನಷ್ಟದ ಭೀತಿ

Published:
Updated:
Deccan Herald

ಹೂವಿನಹಡಗಲಿ: ತಾಲ್ಲೂಕಿನ ನೀರಾವರಿ ಪ್ರದೇಶದಲ್ಲಿ ಬೆಳೆದಿರುವ ಮೆಣಸಿನಕಾಯಿ ಬೆಳೆಗೆ ಬೂದಿ ರೋಗ, ಎಲೆ ಮುಟುರು ರೋಗ ಕಾಣಿಸಿಕೊಂಡಿದ್ದು, ರೈತರಿಗೆ ನಷ್ಟದ ಭೀತಿ ಎದುರಾಗಿದೆ.

ನೀರಾವರಿ ಜಮೀನುಗಳಲ್ಲಿ ಮೆಣಸಿನಕಾಯಿ ಗಿಡಗಳು ಸಮೃದ್ಧವಾಗಿ ಬೆಳೆದಿವೆ. ಎಲೆಯ ಮೇಲೆ ಬೂದಿ ಚೆಲ್ಲಿದಂತಹ ರೋಗ ಲಕ್ಷಣ ಕಂಡೊಡನೆ ಎಲೆ, ಹೂವು ಉದುರಲು ಆರಂಭಿಸಿ ಗಿಡಗಳು ಬರಡಾಗುತ್ತಿವೆ. ಈ ವಿಚಿತ್ರ ರೋಗದಿಂದ ಇಳುವರಿ ಗಣನೀಯವಾಗಿ ಕುಸಿತಗೊಳ್ಳುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ನೀರು ಬಳಸಿಕೊಂಡು ತಾಲ್ಲೂಕಿನ ಕೆ.ಅಯ್ಯನಹಳ್ಳಿ, ಮಾಗಳ, ಶಿವಪುರ, ಶಿವಪುರ ತಾಂಡಾ, ಮಾಗಳ ತಾಂಡ, ವಡ್ಡಿನಹಳ್ಳಿ ತಾಂಡ ಭಾಗದ ರೈತರು ಮೆಣಸಿನಕಾಯಿಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆದಿದ್ದಾರೆ. ಇಟ್ಟಿಗಿ, ಉತ್ತಂಗಿ, ತಳಕಲ್ಲು, ವರಕನಹಳ್ಳಿ, ನಾಗತಿಬಸಾಪುರ, ಮಿರಾಕೊರನಹಳ್ಳಿ, ಹುಗಲೂರು ಭಾಗದಲ್ಲಿ ಈ ಬೆಳೆಯನ್ನು ಮಳೆಯಾಶ್ರಿತವಾಗಿಯೂ ಬೆಳೆಯುತ್ತಾರೆ.

ತಾಲ್ಲೂಕಿನಲ್ಲಿ ಈ ವರ್ಷ 1,340 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬಿತ್ತನೆಯಾಗಿದ್ದು, ಮಳೆಯ ಅಭಾವದಿಂದ ಖುಷ್ಕಿ ಜಮೀನಿನಲ್ಲಿ ಶೇ 90ರಷ್ಟು ಬೆಳೆ ಹಾನಿಗೀಡಾಗಿದ್ದರೆ, ನೀರಾವರಿ ಪ್ರದೇಶದಲ್ಲಿನ ಬೆಳೆಯು ರೋಗಬಾಧೆಗೆ ತುತ್ತಾಗಿದೆ. ಮೆಣಸಿನಕಾಯಿ ಬೆಳೆಗೆ ಹಿಂದಿನ ವರ್ಷ ಸೊರಗು ರೋಗ ಮತ್ತು ಮಚ್ಚೆ ರೋಗ ಕಾಣಿಸಿಕೊಂಡು ರೈತರು ನಷ್ಟ ಅನುಭವಿಸಿದ್ದರು. ಈ ಬಾರಿ ಬೂದಿ ರೋಗ ಬೆನ್ನತ್ತಿರುವುದರಿಂದ ರೈತರು ಚಿಂತೆಗೀಡಾಗಿದ್ದಾರೆ.

‘ಬೂದಿರೋಗ ಹತೋಟಿಗಾಗಿ ವಾರಕ್ಕೆ ಎರಡು ಬಾರಿ ಕೀಟನಾಶಕ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಮೂರು ಎಕರೆ ಮೆಣಸಿನಕಾಯಿ ಕೃಷಿಗೆ ಈಗಾಗಲೇ ₹ 1.60 ಲಕ್ಷ ಖರ್ಚು ಮಾಡಿದ್ದೇವೆನೆ. ರೋಗಬಾಧೆಯಿಂದ ಇಳುವರಿ ಅರ್ಧದಷ್ಟು ಕುಸಿಯುವ ಲಕ್ಷಣಗಳು ಕಾಣಿಸಿರುವುದರಿಂದ ದಿಕ್ಕು ತೋಚದಂತಾಗಿದೆ’ ಎಂದು ಕೆ.ಅಯ್ಯನಹಳ್ಳಿಯ ರೈತ ದಾದಾ ಖಲಂದರ್ ಅಳಲು ತೋಡಿಕೊಂಡರು.

‘ಮೆಣಸಿನಕಾಯಿ ಕೃಷಿಗೆ ಹೆಚ್ಚು ರಸಗೊಬ್ಬರ, ಕ್ರಿಮಿನಾಶ ಬಳಕೆ ಮಾಡುವುದರಿಂದ ಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ಈ ಸತ್ಯ ನಮಗೆ ಗೊತ್ತಿದ್ದರೂ ಹೆಚ್ಚಿನ ಇಳುವರಿ ಪಡೆದು ಸಾಲದ ಹೊರೆ ಕಡಿಮೆ ಮಾಡಿಕೊಳ್ಳಲು ಅದರ ಬಳಕೆ ಮಾಡುವುದು ಅನಿವಾರ್ಯವಾಗಿದೆ’ ಎಂದು ತಿಳಿಸಿದರು.

‘ಹಿಂದಿನ ವರ್ಷ ಎಕರೆಗೆ 15ರಿಂದ 20 ಕ್ವಿಂಟಲ್‌ ಇಳುವರಿ ಬಂದಿತ್ತು. ಬೆಳೆದಿದ್ದ ‘ಕಡ್ಡಿ ಡಿಲಕ್ಸ್‌’ ತಳಿಯ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ₹ 15 ರಿಂದ ₹ 20 ಸಾವಿರ ಬೆಲೆ ಸಿಕ್ಕಿತ್ತು. ಮೆಣಸಿನಕಾಯಿ ಕೃಷಿ ಕೈ ಹಿಡಿದ್ದಿದರಿಂದ ಈ ವರ್ಷ ಮೂರು ಎಕೆರೆಯಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದೆ. ಆದರೆ, ಇಡೀ ಹೊಲ ರೋಗಕ್ಕೆ ತುತ್ತಾಗಿದೆ. ಬೆಳೆಯನ್ನು ನಂಬಿಕೊಂಡು ಸಾಲ ಪಡೆದಿದ್ದೆ. ಈಗ ಏನು ಮಾಡಬೇಕೆಂಬುದೇ ತಿಳಿಯುತ್ತಿಲ್ಲ’ ಎಂದು ಗುಡಿ ಜಾಹೀರ್ ಅಲಿ ನೋವಿನಿಂದ ಹೇಳಿದರು.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !